ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಕಂದಾಯ ಭವನದಲ್ಲಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಗ್ರೇಟರ್ ಪ್ರಾಧಿಕಾರ ರೈತರ ಮಾಹಿತಿಗಾಗಿ ಹೊರತಂದಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಕೈಪಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಈ ಯೋಜನೆಗೆ 2006ರಲ್ಲಿಯೇ ಚಾಲನೆ ಸಿಕ್ಕಿತ್ತು. ಅಂದಿನ ಬಿಡದಿ ಟೌನ್‌ಶಿಪ್ ಯೋಜನೆಗೆ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಎಂದು ಈಗ ಹೊಸ ರೂಪ ನೀಡಲಾಗಿದೆ. ರೈತರು ಯಾವುದೇ ವಿಷಯವನ್ನಾಗಲಿ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ನಾನು ರೈತರ ಬಗ್ಗೆ ತಪ್ಪು ಮಾತನಾಡಿದ್ದರೆ ಕ್ಷಮೆ ಕೇಳುತ್ತೇನೆ. ನಮ್ಮ ಸರ್ಕಾರಕ್ಕೆ ರೈತರಿಗೆ ತೊಂದರೆ ಕೊಡಬೇಕು ಎಂಬ ಯಾವುದೇ ದುರುದ್ದೇಶವಿಲ್ಲ ಎಂದರು.ಬಿಡದಿ ಉಪನಗರ ಯೋಜನೆ ಭೂಸ್ವಾಧೀನದಿಂದ ಭೂಮಿ ಕಳೆದು ಕೊಂಡ ರೈತರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಕೊಡುವ ಕೆಲಸವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಾಡಲಾಗುತ್ತಿದೆ. ರೈತರಿಗೆ ತೊಂದರೆ ಕೊಡುವ ಯಾವುದೇ ಉದ್ದೇಶವಿಲ್ಲ. ಇಲ್ಲಿ ಯಾರು ಮಧ್ಯವರ್ತಿಗಳಿಲ್ಲ, ರೈತರಿಗೆ ಯಾವುದೇ ಸಂದೇಹಗಳಿದ್ದರೆ ಸಹಾಯವಾಣಿ ಸಂಖ್ಯೆ- 7259198192 ಗೆ ಕರೆ ಮಾಡಿ ಬಗೆಹರಿಸಿಕೊಳ್ಳಬಹುದು. ನಿಮ್ಮ ಸಮಸ್ಯೆಗಳಿಗೆ ನೇರವಾಗಿ ಅಧಿಕಾರಿಗಳೇ ಸ್ಪಂದಿಸಲಿದ್ದಾರೆ. ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ತೆರಳಿ ಅವರ ಮನವೊಲಿಸಲಿದ್ದೇವೆ. ಸದ್ಯದಲ್ಲಿಯೇ ರೈತರೊಂದಿಗೆ ಸಭೆ ಮಾಡಲಿದ್ದೇವೆ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ಸಭೆ ಮಾಡಲಿದ್ದೇವೆ. ಸಮಸ್ಯೆ ಹಾಗೂ ಸಂದೇಹಗಳಿರುವ ರೈತರು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಅರ್ಜಿ ನೀಡಿದರೆ ನಾವು ಸಭೆಯಲ್ಲಿ ಚರ್ಚಿಸಿ ಪರಿಹಾರ ಸೂಚಿಸುತ್ತೇವೆ. ರೈತರು ತಾಲೂಕು ಕಚೇರಿಗಾಗಲಿ, ಉಪವಿಭಾಗಾಧಿಕಾರಿ ಕಚೇರಿಗಾಗಲಿ ಅಲೆಯದೆ ನೇರವಾಗಿ ಬಂದು ಪ್ರಾಧಿಕಾರದ ಕಚೇರಿಗೆ ಅರ್ಜಿ ನೀಡಿದರೆ ನಾವೆ ಸಮಸ್ಯೆ ಬಗೆಹರಿಸಿಕೊಡುತ್ತೇವೆ ಎಂದು ಬಾಲಕೃಷ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಬಿಡಿಎ ನಿರ್ದೇಶಕರಾದ ಪುಟ್ಟಯ್ಯ, ನರಸಿಂಹಯ್ಯ, ಕಲ್ಯಾಣಕುಮಾರಿ, ಆನಂದ ತೀರ್ಥ, ಜಿಬಿಡಿಎ ಹೆಚ್ಚುವರಿ ಆಯುಕ್ತ ಮಾರುತಿ ಪ್ರಸನ್ನಇದ್ದರು.
83 ಕೆರೆಗಳಿಗೆ ನೀರು ಹರಿಯಲು ಡಿಕೆ ಬ್ರದರ್ಸ್ ಇಚ್ಛಾಶಕ್ತಿ ಕಾರಣ: ಬಾಲಕೃಷ್ಣ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಣಿಗಲ್‌ನಿಂದ ಮಾಗಡಿ ತಾಲೂಕಿನ 83 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯೇ ಶ್ರೀರಂಗ ಯೋಜನೆಯಾಗಿದೆ. ಇದರ ಜೊತೆಗೆ ಶೀಘ್ರದಲ್ಲೇ ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಕೂಡಾ ಆರಂಭವಾಗುತ್ತದೆ. ಶ್ರೀರಂಗ ಯೋಜನೆ ಸಾಕಾರಕ್ಕೆ ಡಿಕೆ ಸಹೋದರರ ಇಚ್ಛಾಶಕ್ತಿ ಪ್ರಮುಖ ಕಾರಣ ಎಂದರು.
ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಜನರು ಜೆಡಿಎಸ್ ಶಾಸಕರನ್ನು ಆಯ್ಕೆ ಮಾಡುತ್ತಿದ್ದರು. ಆದರೂ ಏನೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಅವರಿಗೆ ಕೆಲಸ ಮಾಡಲು ಇಚ್ಛಾಶಕ್ತಿ ಇರಲಿಲ್ಲ. ಕೇವಲ ಬುರುಡೆ ಹೊಡೆಯುವವರು, ಕಣ್ಣೀರು ಸುರಿಸುವವರಿಂದ ಅಭಿವೃದ್ಧಿ ಆಗಲ್ಲ. ನಮ್ಮ ಜಿಲ್ಲೆ ಅದೋಗತಿಗೆ ಹೋಗಲು ಕುಮಾರಸ್ವಾಮಿ ಕಾರಣ. ಜನ ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ವಿರುದ್ಧ ಬಾಲಕೃಷ್ಣ ವಾಗ್ದಾಳಿ ನಡೆಸಿದರು.
-----------
ಡಿನ್ನರ್ ಪಾರ್ಟಿ ಯಾರು ಮಾಡಿದರೇನು, ನಮಗೆ ಊಟ ಸಿಕ್ಕರೆ ಸಾಕು: ಬಾಲಕೃಷ್ಣರಾಮನಗರ: ಡಿನ್ನರ್ ಪಾರ್ಟಿ ಹೆಸರಿನಲ್ಲಿ ಯಾರೂ ರಾಜಕೀಯ ಮಾಡುತ್ತಿಲ್ಲ. ಇದೆಲ್ಲಾ ಮಾಧ್ಯಮಗಳ ಊಹೆ ಅಷ್ಟೆ, ನಮ್ಮನ್ನೂ ಡಿನ್ನರ್ ಪಾರ್ಟಿಗೆ ಕರೆದಿದ್ದರು, ಕಾರಣಾಂತರಗಳಿಂದ ಹೋಗಲಾಗಲಿಲ್ಲ, ಡಿನ್ನರ್ ಪಾರ್ಟಿ ಯಾರೂ ಮಾಡಿದರೆ ನಮಗೇನು, ನಮಗೆ ಊಟ ಸಿಕ್ಕರೆ ಸಾಕು ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹಾಸ್ಯ ಚಟಾಕಿ ಹಾರಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಸಿದಂತೆ ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ಸದ್ಯದಲ್ಲಿಯೇ ಪರಿಹಾರ ಸೂಚಿಸಲಿದೆ. ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಅನಗತ್ಯವಾಗಿ ಮಾತನಾಡಿ ಗೊಂದಲ ಸೃಷ್ಟಿಸುವವರ ವಿರುದ್ಧ ಹೈಕಮಾಂಡ್ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದರು.ಬಿಜೆಪಿ ನಾಯಕರು ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಪಕ್ಷದವರು ಆಡಳಿತ ಪಕ್ಷದ ವಿರುದ್ಧವೇ ಮಾತನಾಡಬೇಕು. ಆದ್ದರಿಂದ ನಾವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದರೂ ಅವರು ಹಾಗೆಯೇ ಹೇಳುತ್ತಾರೆ ಎಂದು ತಿಳಿಸಿದರು.