ಬೀದರ್‌ ಜಿಲ್ಲೆ ಒಟ್ಟು 36 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ

KannadaprabhaNewsNetwork |  
Published : Apr 17, 2024, 01:18 AM IST
ಚಿತ್ರ 16ಬಿಡಿಆರ್3ಗೋವಿಂದರೆಡ್ಡಿ, ಜಿಲ್ಲಾಧಿಕಾರಿ | Kannada Prabha

ಸಾರಾಂಶ

2024ನೇ ಸಾಲಿನ ಎಂಜಿನಿಯರಿಂಗ್‌, ಕೃಷಿ, ವಿಜ್ಞಾನ, ಪಶು ಸಂಗೋಪನಾ, ಫಾರ್ಮಸಿ, ಬಿಎಸ್‌ಸಿ (ನರ್ಸಿಂಗ್‌) ಮುಂತಾದ ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆ ವ್ಯವಸ್ಥಿತವಾಗಿ ನಡೆಸಬೇಕು

ಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲೆಯಲ್ಲಿ ಏ.18ಮತ್ತು 19ರಂದು ನಡೆಯಲಿರುವ ಯುಜಿ ಸಿಇಟಿ-2024 ಪರೀಕ್ಷೆಗಳನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಸುಸೂತ್ರವಾಗಿ ನಡೆಸಿ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಯುಜಿ ಸಿಇಟಿ ಪರೀಕ್ಷೆಗಳನ್ನು ಜಿಲ್ಲೆಯಲ್ಲಿ ಸುಸೂತ್ರವಾಗಿ ನಡೆಸುವ ಕುರಿತು ಅಧಿಕಾರಿಗಳಿಗೆ ಕರೆದ ಸಿದ್ಧತಾ ಸಭೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು.2024ನೇ ಸಾಲಿನ ಎಂಜಿನಿಯರಿಂಗ್‌, ಕೃಷಿ, ವಿಜ್ಞಾನ, ಪಶು ಸಂಗೋಪನಾ, ಫಾರ್ಮಸಿ, ಬಿಎಸ್‌ಸಿ (ನರ್ಸಿಂಗ್‌) ಮುಂತಾದ ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆ ವ್ಯವಸ್ಥಿತವಾಗಿ ನಡೆಸಬೇಕು. ಕೇಂದ್ರಗಳಲ್ಲಿ ಸಿಸಿಟಿವಿ, ವೆಬ್ ಕಾಸ್ಟಿಂಗ್‌ ಇರುವುದರಿಂದ ಯಾರು ಏನು ಮಾಡುತ್ತಾರೆ ಎಂಬ ಎಲ್ಲಾ ಮಾಹಿತಿ ಆಡಿಯೋ, ವಿಡಿಯೋ ಸಹಿತ ದಾಖಲಾಗುವುದರಿಂದ ಪರೀಕ್ಷೆಗೆ ನಿಯೋಜಿತ ಅಧಿಕಾರಿ ಹಾಗೂ ಉಪನ್ಯಾಸಕರು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.

ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳು ಸರಿಯಾದ ಸಮಯದಲ್ಲಿ ತಲುಪಿಸಬೇಕು. ರೂಟ್‌ ಅಧಿಕಾರಿಗಳು ಸರಿಯಾದ ಸಮಯದಲ್ಲಿ ಹಾಜರಿರಬೇಕು ಮತ್ತು ಮೇಲ್ವಿಚಾರಕರು ಒಂದು ಗಂಟೆ ಮುಂಚಿತವಾಗಿ ಕೇಂದ್ರಗಳಲ್ಲಿ ಹಾಜರಿರಬೇಕು. ಪರೀಕ್ಷೆ ನಡೆಯುವ ದಿನ ಪರೀಕ್ಷಾ ಕೇಂದ್ರದ ಸುತ್ತಲೂ ಕಲಂ 144 ಜಾರಿ ಇರಲಿದ್ದು, ಕೇಂದ್ರದ ಸಮೀಪದಲ್ಲಿರುವ ಜೆರಾಕ್ಸ್‌ ಅಂಗಡಿ ತೆರೆಯದಂತೆ ನೋಡಿಕೊಳ್ಳಬೇಕೆಂದರು.

ಏ.18ರಂದು ಬೆಳಗ್ಗೆ 10.30ರಿಂದ 11.50ರ ವರೆಗೆ ಜೀವಶಾಸ್ತ್ರ, ಮ. 2.30ರಿಂದ 3.50ರ ವರೆಗೆ ಗಣಿತ ಹಾಗೂ ಏ.19 ರಂದು ಬೆಳಗ್ಗೆ 10.30ರಿಂದ 11.50ರ ವರೆಗೆ ಭೌತಶಾಸ್ತ್ರ ಹಾಗೂ ಮ.2.30ರಿಂದ 3.50ರ ವರೆಗೆ ರಸಾಯನ ಶಾಸ್ತ್ರ ವಿಷಯಗಳ ಪರೀಕ್ಷೆಗಳು ನಡೆಯಲಿದ್ದು, ಇವು 60 ಅಂಕದ ಬಹು ಆಯ್ಕೆ ಪ್ರಶ್ನೆಗಳು ಇರಲಿವೆ.

ಬೀದರ್‌ ಜಿಲ್ಲೆಯಲ್ಲಿ ಒಟ್ಟು 36 ಪರೀಕ್ಷಾ ಕೇಂದ್ರಗಳಿದ್ದು, ಬೀದರ್‌ ನಗರದಲ್ಲಿ 23, ಬಸವಕಲ್ಯಾಣದಲ್ಲಿ 6, ಭಾಲ್ಕಿಯಲ್ಲಿ 7 ಕೇಂದ್ರಗಳು ಇರಲಿವೆ. ಒಟ್ಟು ಎಲ್ಲಾ ಕೇಂದ್ರಗಳಲ್ಲಿ 13,436 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರಕ್ಕೆ ಜೀನ್ಸ್‌ ಪ್ಯಾಂಟ್‌, ಪುಲ್‌ ಶರ್ಟನೊಂದಿಗೆ ಬರುವಂತಿಲ್ಲ:ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ನಿಗದಿತ ಸಮಯದಲ್ಲಿ ಹಾಜರಿರಬೇಕು ಮತ್ತು ಯಾವುದೇ ಆಧುನಿಕ ಎಲೆಕ್ಟ್ರಾನಿಕ್‌ ಉಪಕರಣಗಳಾದ ಮೊಬೈಲ್‌, ಬ್ಲೂಟೂತ್‌, ಕ್ಯಾಲ್ಕುಲೇಟರ್‌, ಕೈಗಡಿಯಾರ, ಪೇಪರ್‌ ಚೀಟಿ, ಪುಸ್ತಕಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ತರಬಾರದು ಮತ್ತು ಜೀನ್ಸ್‌ ಪ್ಯಾಂಟ್‌, ಪುಲ್‌ ಶರ್ಟ್‌ ಹಾಕಿಕೊಂಡು ಬರುವ ಹಾಗಿಲ್ಲ.

ಕಪ್ಪು, ನೀಲಿ ಶಾಯಿ ಬಾಲ್‌ ಪಾಯಿಂಟ್‌ ಪೆನ್ನು ಮಾತ್ರ ಬಳಸಿ:

ತಮ್ಮ ಪ್ರವೇಶ ಪತ್ರದ ಜೊತೆಗೆ ಅಭ್ಯರ್ಥಿಗಳು ಕಡ್ಡಾಯವಾಗಿ ಒಂದು ಗುರುತಿನ ಚೀಟಿ ತೆಗೆದುಕೊಂಡು ಬರಬೇಕು ಹಾಗೂ ಪರೀಕ್ಷೆಯಲ್ಲಿ ಕಪ್ಪು ಮತ್ತು ನೀಲಿ ಶಾಯಿ ಬಾಲ್‌ ಪಾಯಿಂಟ್‌ ಪೆನ್ನು ಮಾತ್ರ ಉಪಯೋಗಿಸಬೇಕೆಂದರು.

ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಕಾಂತ ಶಾಬಾದಕರ್‌, ಜಿಲ್ಲಾ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಸುರೇಖಾ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸದಾಶಿವ ಬಡಿಗೇರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಜಿಲ್ಲೆಯ ವಿವಿಧ ತಾಲೂಕಿನ ತಹಸೀಲ್ದಾರರು, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತಿತರರಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ