ಬೀದರ್‌ ಜಿಲ್ಲೆ ನೀರಿನ ಮೂಲಾಧಾರ ಕಾರಂಜಾ: ಸಚಿವ ಈಶ್ವರ ಖಂಡ್ರೆ

KannadaprabhaNewsNetwork | Published : Sep 9, 2024 1:41 AM

ಸಾರಾಂಶ

ಕಾರಂಜಾ ಜಲಾಶಯದ ಹಿನ್ನೀರಿನಲ್ಲಿ ರೈತರ ಭೂಮಿ ಹೋಗಿವೆ. ಪ್ರತಿ ವರ್ಷ ಹಿನ್ನೀರಿನಿಂದ ರೈತರ ಜಮೀನುಗಳು ನೀರಿನಲ್ಲಿ ಮುಳುಗಡೆಯಾಗುತ್ತಿವೆ. ಈ ಹಿನ್ನೆಲೆ ಕಾರಂಜಾ ಮುಳುಗಡೆ ಪ್ರದೇಶದ ಮರು ಸರ್ವೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲೆಯಾದ್ಯಂತ ಕುಡಿಯುವ ನೀರು ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಮೂಲಾಧಾರ ಕಾರಂಜಾ ಜಲಾಶಯವಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಹೇಳಿದರು.

ಕರ್ನಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ ಹಮ್ಮಿಕೊಂಡಿದ್ದ ಕಾರಂಜಾ ಜಲಾಶಯಕ್ಕೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಬಾಗಿನ ಅರ್ಪಣೆ ನಮ್ಮ ಪೂರ್ವಜರ ಕಾಲದಿಂದ ನಡೆದು ಬಂದಿದೆ. ಅವರು ಜಲ ಸಂರಕ್ಷಣೆಗಾಗಿ ಕೆರೆ, ಕಟ್ಟೆಗಳನ್ನು ಕಟ್ಟುತ್ತಿದ್ದರು. ಬಾಗಿನ ಅರ್ಪಣೆ ಮಾಡುವುದರಿಂದ ನೀರಿನಲ್ಲಿರುವ ಜಲಚರ ಪ್ರಾಣಿಗಳಿಗೆ ತಿನ್ನಲು ಆಹಾರ ಸಿಗುತ್ತದೆ. ನೀರು ಜೀವ ಜಲ, ನೀರಿಲ್ಲದೆ ಏನಿಲ್ಲ. ನೀರಿಗಾಗಿ ಅನೇಕ ಯುದ್ಧಗಳು ನಡೆದಿರುವುದು ಇತಿಹಾಸದಲ್ಲಿ ಕೇಳಿದ್ದೇವೆ. ಇಂದಿಗೂ ಅಂತಾರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀರಿಗಾಗಿ ಅನೇಕ ಹೋರಾಟಗಳು ನಡೆಯುತ್ತಿವೆ ಎಂದು ಹೇಳಿದರು.

ಪರಿಸರ ಹಾಗೂ ಹವಾಮಾನ ಬದಲಾವಣೆಯಿಂದ ಪರಿಸರದಲ್ಲಿ ಏರುಪೇರಾಗುತ್ತಿದ್ದು, ಒಂದು ತಿಂಗಳು ಬೀಳುವ ಮಳೆ ಒಂದೇ ದಿನದಲ್ಲಿ ಬೀಳುತ್ತಿದೆ. ಒಂದು ಕಡೆ ಅತಿವೃಷ್ಟಿ ಹಾಗೂ ಇನ್ನೊಂದು ಕಡೆ ಅನಾವೃಷ್ಟಿಯಾಗುತ್ತಿದೆ. ಕೆಲವೊಂದು ಕಡೆ ವಿವಿಧ ರೀತಿಯಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ ಎಂದು ಆತಂಕಿಸಿದರು.

1969-70 ರ ದಶಕದಲ್ಲಿ ಕಾರಂಜಾ ಜಲಾಶಯಕ್ಕಾಗಿ ನಮ್ಮ ತಂದೆ ಮಾಜಿ ಸಚಿವ ಭೀಮಣ್ಣ ಖಂಡ್ರೆ ಸೇರಿದಂತೆ ಅನೇಕ ಹಿರಿಯರು ಹೋರಾಟ ಮಾಡಿದ್ದಾರೆ. 131 ಕಿ.ಮೀ. ಬಲದಂಡೆ ಹಾಗೂ 31 ಕಿ.ಮೀ ಎಡದಂಡೆ ಕಾಲುವೆ ಮಾಡಿದ್ದಕ್ಕೆ ರೈತರ ಸಾವಿರಾರು ಹೆಕ್ಟೇರ್‌ ಜಮೀನಿಗೆ ನೀರು ಬರುತ್ತಿದ್ದು, ಇದರಿಂದ ರೈತರ ಆರ್ಥಿಕತೆಗೆ ಅನುಕೂಲವಾಗಿದೆ ಎಂದು ಹೇಳಿದರು.

ಕಾರಂಜಾ ಜಲಾಶಯದ ಹಿನ್ನೀರಿನಲ್ಲಿ ರೈತರ ಭೂಮಿ ಹೋಗಿವೆ. ಪ್ರತಿ ವರ್ಷ ಹಿನ್ನೀರಿನಿಂದ ರೈತರ ಜಮೀನುಗಳು ನೀರಿನಲ್ಲಿ ಮುಳುಗಡೆಯಾಗುತ್ತಿವೆ. ಇದಕ್ಕೆ ಶಾಶ್ವತ ಪರಿಹಾರ ಮಾಡಬೇಕಿದೆ. ಇನ್ನೊಂದು ಸಲ ಸರ್ವೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ರಾಜ್ಯದ ಒಣ ಹವೆ ಪ್ರದೇಶಗಳಲ್ಲಿ ಬೀದರ್‌, ಕಲಬುರಗಿ ಜಿಲ್ಲೆ ಬರುತ್ತವೆ. ಬರುವ ದಿನಗಳಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ನಮ್ಮ ಸರ್ಕಾರದ ವತಿಯಿಂದ ಪೂರ್ತಿ ಮಾಡುತ್ತೇವೆ ಎಂದು ಸಚಿವ ಖಂಡ್ರೆ ಹೇಳಿದರು.

ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಕಾರಂಜಾ ಜಲಾಶಯಕ್ಕೆ ಬಾಗಿನ ಅರ್ಪಣೆ ಕನಸನ್ನು ಈಶ್ವರ ಖಂಡ್ರೆ ನೆರವೇರಿಸಿದ್ದು, ಕಾರಂಜಾ ಜಲಾಶಯದ ನೀರು ಜಿಲ್ಲೆಯ ರೈತರಿಗೆ ಅನುಕೂಲವಾಗಿದೆ. ರೈತರು ಚೆನ್ನಾಗಿ ಬೆಳೆಗಳನ್ನು ಬೆಳೆದಾಗ ಮಾತ್ರ ಎಪಿಎಂಸಿ ಹಾಗೂ ಗಾಂಧಿಗಂಜ್‌ನಲ್ಲಿ ಹಣ ಇರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ರಹೀಮ್‌ಖಾನ್‌, ಹುಮನಾಬಾದ್‌ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯರಾದ ಡಾ. ಎಂ.ಜಿ ಮೂಳೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಾಲಾ ನಾರಾಯಣರಾವ್‌, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಬ್ಯಾಲಹಳ್ಳಿ. ಕೆ. ಗ್ರಾಪಂ ಅಧ್ಯಕ್ಷರಾದ ಅಶೋಕ ಜಾಧವ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ. ಗಿರೀಶ ಬದೋಲೆ, ಎಸ್‌ಪಿ ಪ್ರದೀಪ ಗುಂಟಿ ಸೇರಿದಂತೆ ಮತ್ತಿತರರು ಇದ್ದರು.

Share this article