ಅಪ್ಪಾರಾವ್ ಸೌದಿ
ಕನ್ನಡಪ್ರಭ ವಾರ್ತೆ ಬೀದರ್ಟಿಕೆಟ್ ಬದಲಿಸುವಂತೆ ಶಿರಸಾಷ್ಟಾಂಗ ನಮಸ್ಕಾರ ಹಾಕಿದ್ರು, ಗಳಗಳನೇ ಅತ್ತರು, ಶಾಸಕರೆ ಮನವಿಯಿತ್ತರು, ಡಜನ್‌ಗಟ್ಟಲೇ ಮುಖಂಡರು ಗೋಗರೆದರೂ ಟಿಕೆಟ್ ನೀಡಿಕೆಯಲ್ಲಿ ಮೊಂಡುತನ ತೋರಿದ್ದ ಬಿಜೆಪಿ ಹೈಕಮಾಂಡ್‌ಗೆ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಂತಾಗಿದೆ. ದರ್ಪದ ವರ್ತನೆಯ ಆರೋಪ ಎದುರಿಸುತ್ತಿದ್ದ ಕೇಂದ್ರ ಸಚಿವರಾಗಿದ್ದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಹೀನಾಯವಾಗಿ ಸೋಲುಂಡಿದ್ದಾರೆ.
ರಾಜ್ಯದ ಅರಣ್ಯ ಖಾತೆ ಸಚಿವ, ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆಯವರ ಪುತ್ರ ಅತ್ಯಂತ ಕಿರಿಯ ವಯಸ್ಸಿನ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ (26 ವರ್ಷ 5 ತಿಂಗಳು) ಸಾಗರ ಖಂಡ್ರೆ ಹಾಲಿ ಸಂಸದರಾಗಿದ್ದ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ 1.3ಲಕ್ಷ ಮತಗಳ ಅಂತರದಿಂದ ಜಯ ದಾಖಲಿಸುವ ಮೂಲಕ 2019ರಲ್ಲಿ ತಂದೆಯ ವಿರುದ್ಧ 1.16ಲಕ್ಷ ಮತಗಳ ಅಂತರದ ಜಯ ಗಳಿಸಿದ್ದ ಭಗವಂತ ಖೂಬಾ ಅವರನ್ನು ಅದಕ್ಕಿಂತ ಹೆಚ್ಚು ಮತಗಳಿಂದ ನೆಲಕಚ್ಚುವಂತೆ ಮಾಡಿದ್ದು ಕಾಂಗ್ರೆಸ್ಸಿಗರಲ್ಲಿ ಮತ್ತಷ್ಟು ಹುಮ್ಮಸ್ಸು ತುಂಬಿದೆ.ಎರಡು ಬಾರಿ ಸಂಸದರಾಗಿ ಕೇಂದ್ರದಲ್ಲಿ ಸಚಿವರೂ ಆಗಿದ್ದ ಭಗವಂತ ಖೂಬಾ ಚುನಾವಣೆಗೆ ಪೂರ್ವದಲ್ಲಿಯೇ ಟಿಕೆಟ್‌ಗಾಗಿ ವಿರೋಧ ಎದುರಿಸಿದ್ದರು. ಪ್ರಧಾನಿ ಮೋದಿ ಹೆಸರಲ್ಲಿ ಮತ್ತೊಮ್ಮೆ ಗೆದ್ದು ಬರುವೆ, ಹ್ಯಾಟ್ರಿಕ್ ಬಾರಿಸುವೆ ಎಂಬ ಅತಿಯಾದ ವಿಶ್ವಾಸದಲ್ಲಿ ಸ್ವಪಕ್ಷೀಯರನ್ನು ಗಣನೆಗೇ ತೆಗೆದುಕೊಂಡಿರಲಿಲ್ಲ. ಕ್ಷೇತ್ರದ ಔರಾದ್ ಹಾಗೂ ಬಸವಕಲ್ಯಾಣದ ಬಿಜೆಪಿ ಶಾಸಕರ ವಿರುದ್ಧವೇ ಸಾಮಾಜಿಕ ಜಾಲತಾಣದಲ್ಲಿ ಆರೋಪ ಹೊರಿಸಿ ಎದುರು ಹಾಕಿಕೊಂಡಿದ್ದರು. ಹೀಗೆಯೇ ಒರಟು ಸ್ವಭಾವ ಪಕ್ಷ ಮುಖಂಡರಷ್ಟೇ ಅಲ್ಲ ಸಾರ್ವಜನಿಕರನ್ನೂ ಕಾಡಿತ್ತು.
ಇನ್ನು ಹೈಕಮಾಂಡ್‌ಗೆ ಖೂಬಾ ವಿರುದ್ಧ ಸ್ವಪಕ್ಷೀಯರು ದರ್ಪದ ವರ್ತನೆಯ ಆರೋಪ ಹೊರಿಸಿದ್ದರು. ಸಾರ್ವಜನಿಕ ವಲಯದಲ್ಲಿಯೂ ಖೂಬಾ ಬಗ್ಗೆ ಇಂಥದ್ದೇ ಮಾತುಗಳು ಕೇಳಿ ಬಂದಿದ್ದು, ಸ್ಥಳೀಯ ಬಿಜೆಪಿಗರಲ್ಲಿ ಟಿಕೆಟ್ ಬದಲಾಯಿಸಲೇಬೇಕೆಂಬ ಅನಿವಾರ್ಯತೆ ಕಾಡತೊಡಗಿ ಜಿಲ್ಲೆಯ ಶಾಸಕರಾದಿಯಾಗಿ ಬಹುತೇಕ ಮುಖಂಡರು ಹೈಕಮಾಂಡ್ ಕದ ತಟ್ಟಿದ್ದರು. ಅದಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಬೀದರ್ ಭೇಟಿ ಸಂದರ್ಭ ಮಾಜಿ ಸಚಿವ ಹಾಲಿ ಶಾಸಕ ಪ್ರಭು ಚವ್ಹಾಣ್ ಬಹಿರಂಗ ಸಮಾವೇಶದಲ್ಲಿಯೇ ವಿಜಯೇಂದ್ರ ಅವರ ಕಾಲಿಗೆ ಶಿರಸಾಷ್ಟಾಂಗ ನಮಸ್ಕಾರ ಹಾಕಿ ಟಿಕೆಟ್ ಬೇರೆಯವರಿಗೆ ನೀಡಿ ಎಂದು ಕೋರಲಾಗಿದ್ದರೂ ಅದಕ್ಕೆ ಕಿವಿಗೊಟ್ಟಿರಲಿಲ್ಲ.ಅದೇ ಹೊತ್ತಿಗೆ ವೀರಶೈವ ಲಿಂಗಾಯತ ಸಮುದಾಯದ ಮುಖಂಡರಾಗಿ ಗುರುತಿಸಿಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಮ್ಮ ಪುತ್ರ ಸಾಗರ್ ಖಂಡ್ರೆ ಅವರನ್ನು ಕಣಕ್ಕಿಳಿಸುವ ಯೋಜನೆ ರೂಪಿಸಿ ಕ್ಷೇತ್ರದಾದ್ಯಂತ ಪ್ರಚಾರ ಆರಂಭಿಸಿದ್ದರು. ಖೂಬಾ ಜೊತೆಗೆ ಮುನಿಸಿಕೊಂಡಿದ್ದವರ ಜೊತೆ ಉತ್ತಮ ಸಂಬಂಧ ಸಾಧಿಸಿದ್ದು ಲೋಕಸಭಾ ಕ್ಷೇತ್ರದ ಆಳಂದ ವಿಧಾನಸಭಾ ಕ್ಷೇತ್ರ ಹೊರತುಪಡಿಸಿದರೆ ಮತ್ಯಾವ ಕಡೆಯೂ ಬಿಜೆಪಿಗೆ ಲೀಡ್ ಸಿಗದೇ ಇರುವುದಕ್ಕೆ ಸಾಕ್ಷಿ ಎಂದೆನ್ನಬಹುದು. ಇನ್ನು ಔರಾದ್ ಶಾಸಕ, ಲಂಬಾಣಿ ಸಮುದಾಯದ ಮುಖಂಡ ಪ್ರಭು ಚವ್ಹಾಣ್ ಚುನಾವಣೆಯ ಒಂದೂ ದಿನ ಪ್ರಚಾರಕ್ಕೆ ಬಾರದವರು ಮತದಾನಕ್ಕೆ ಮಾತ್ರ ಬಂದು ಖೂಬಾ ವಿರುದ್ಧದ ತಮ್ಮ ಮುನಿಸು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು.
ಇದೆಲ್ಲವೂ ಹೈಕಮಾಂಡ್ ಗಮನಕ್ಕೆ ತರಲಾಯಿತೋ ಇಲ್ಲವೋ ಗೊತ್ತಿಲ್ಲ. ಆದರೆ ಎರಡು ಬಾರಿ ಸಂಸದರಾಗಿ ಒಂದು ಬಾರಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಭಗವಂತ ಖೂಬಾ ಮೇಲೆ ಪಕ್ಷದ ಹೈಕಮಾಂಡ್ ವಿಶ್ವಾಸವಿಟ್ಟಿತ್ತಾದರೆ ಮತದಾರ ಅವರನ್ನು ನಂಬಲಿಲ್ಲ. ದೇಶದ ಅತ್ಯಂತ ಕಿರಿಯ ಸಂಸದನ ಖ್ಯಾತಿ ಹೊಂದಬಲ್ಲ ಸಾಗರ ಖಂಡ್ರೆಯವರನ್ನು ಲಕ್ಷಕ್ಕೂ ಮೀರಿ ಮತಗಳ ಅಂತರದಿಂದ ಜಯದ ದಡ ತಲುಪಿಸಿದ್ದಾರೆ.ಇದೀಗ ಬಿಜೆಪಿ ಅಭ್ಯರ್ಥಿಯಾಗಿದ್ದ ಭಗವಂತ ಖೂಬಾ ಆತ್ಮವಿಮರ್ಷೆ ಮಾಡಿಕೊಳ್ಳಲಿ ಎಂದು ಅದೇ ಪಕ್ಷದ ಮುಖಂಡರು ಮಾತನಾಡಿಕೊಳ್ಳುತ್ತಿದ್ದರೆ ಖೂಬಾ ಈ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟಪಡಿಸಬಹುದು, ಸ್ವಪಕ್ಷೀಯರ ಅಸಹಕಾರದ ವಿರುದ್ಧ ಕಿಡಿಕಾರಬಹುದು, ಇಲ್ಲವೇ ಸೋಲು ಒಪ್ಪಿಕೊಂಡು ಮುಂದೆ ಸರಿಪಡಿಸಿಕೊಳ್ಳುವ ಮಾತುಗಳನ್ನಾಡಬಹುದು.