ಬಿದ್ದಾಟಂಡ ವಾಡೆ ನೂರಂಬಡ ನಾಡ್ ಮಂದ್‌ನಲ್ಲಿ ಹುತ್ತರಿ ಕೋಲಾಟ

KannadaprabhaNewsNetwork |  
Published : Dec 09, 2025, 01:45 AM IST
ನಾಡ್ ಮಂದ್ ಬಿದ್ದಾಟಂಡ ವಾಡೆಯಲ್ಲಿ ಸಾಂಪ್ರದಾಯಿಕ ಹುತ್ತರಿ ಕೋಲಾಟ ಕಾರ್ಯಕ್ರಮ ನಡೆಯಿತು. 7-ಎನ್ ಪಿ ಕೆ-2 ಬಿದ್ದಾಟಂಡ ವಾಡೆಯ ಐತಿಹಾಸಿಕ ನೂರಂಬಡ ನಾಡ್‌ಮಂದ್‌ನಲ್ಲಿ ಸಾಂಪ್ರದಾಯಿಕ ಹುತ್ತರಿ ಕೋಲಾಟದಲ್ಲಿ ಕಾಪಳ ವೇಷಧಾರಿಗಳು.7.ಎನ್‌ಪಿಕೆ-3.ಬೇತು ಮಕ್ಕಿ ಶಾಸ್ತಾವು ದೇವಾಲಯದಿಂದ ಸಂಪ್ರದಾಯದAತೆ ತಕ್ಕ ಮುಖ್ಯಸ್ಥರು ದೇವರ ತಿರುವಾಭರಣದೊಂದಿಗೆನೂರಂಬಾಡ ಮಂದ್‌ ಗೆ ಆಗಮಿಸುತ್ತಿರುವುದು.   | Kannada Prabha

ಸಾರಾಂಶ

ಐತಿಹಾಸಿಕ ನೂರಂಬಾಡ ನಾಡಮಂದ್‌ನಲ್ಲಿ ಹುತ್ತರಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಹುತ್ತರಿ ಕೋಲಾಟ ನಡೆಯಿತು.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

‘ಇಗ್ಗುತ್ತಪ್ಪ ದೇವಡ ಪುತ್ತರಿ ನಮ್ಮೆ ಪೊಯಿಲೆ ಪೊಯಿಲೆ’ ಘೋಷಣೆಯೊಂದಿಗೆ ಸಮೀಪದ ಬಿದ್ದಾಟಂಡ ವಾಡೆಯ ಐತಿಹಾಸಿಕ ನೂರಂಬಡ ನಾಡ್‌ಮಂದ್‌ನಲ್ಲಿ ಭಾನುವಾರ ಹುತ್ತರಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಹುತ್ತರಿ ಕೋಲಾಟದ ಕಾರ್ಯಕ್ರಮ ನಡೆಯಿತು.

ಬೇತು ಗ್ರಾಮದ ಇತಿಹಾಸ ಪ್ರಸಿದ್ಧ ಮಕ್ಕಿ ಶ್ರೀ ಶಾಸ್ತಾವು ದೇವಾಲಯದಿಂದ ಊರಿನ ಮುಖ್ಯಸ್ಥರು ದೇವರ ಕೋಲು, ವಸ್ತ್ರ ಹಾಗೂ ಬೆಳ್ಳಿಯ ಕಡತಲೆ (ಖಡ್ಗ) ದೊಂದಿಗೆ ಸಾಂಪ್ರದಾಯಿಕ ಕಾಪಳ ಕಳಿ ಕೊಂಬು ಕೊಟ್ಟು ವಾಲಗ, ದುಡಿಕೊಟ್ಟ್ ಪಾಟ್‌ನೊಂದಿಗೆ ಬೇತು ಗ್ರಾಮದ “ಕುರುಂಬರಾಟ್” ಎಂಬಲ್ಲಿ ವಿಶ್ರಾಂತಿ ಪಡೆದು ಬಳಿಕ ಬಿದ್ದಾಟಂಡ ವಾಡೆಗೆ ಗ್ರಾಮಸ್ಥರು ಮೆರವಣಿಗೆಯಲ್ಲಿ ಆಗಮಿಸಿದ್ದರು. ಈ ಸಂದರ್ಭ ನೂರಂಬಡ ಮಂದ್‌ನಲ್ಲಿ ಬಿದ್ದಾಟಂಡ ಕುಟುಂಬದ ತಕ್ಕಮುಖ್ಯಸ್ಥರು ಸಾಂಪ್ರದಾಯಿಕ ಉಡುಪು ಬಿಳಿ ಕುಪ್ಪಸ ಧರಿಸಿ ಶ್ರೀ ಮಹದೇವರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಸಂಪ್ರದಾಯದಂತೆ ದೇವರ ತಿರುವಭರಣ ಕೋಲನ್ನು ಬರಮಾಡಿಕೊಂಡರು.

ಅದರಂತೆ ನಾಪೋಕ್ಲು ಗ್ರಾಮದವರು ದುಡಿಕೊಟ್ಟ್ ಪಾಟ್ಆಗಿ ವಾಡೆಗೆ ಆಗಮಿಸಿದ್ದರು. ಹಾಗೇನೆ ಕೊಳಕೇರಿಯ ಗ್ರಾಮಸ್ಥರು ಬರುತ್ತಿದ್ದಂತೆ ಅವರನ್ನು ಬಿದ್ದಾಟಂಡ ವಾಡೆಗೆ ಬರಮಾಡಿ ಕೊಳ್ಳಲಾಯಿತು. ಈ ಸಂದರ್ಭ ಕೋಲಾಟ ನಡೆಸುವ ಮಂದ್‌ನ ಮರದ ಕೆಳಗೆ ದೇವರ ತಿರುವಭರಣ ಕೋಲನ್ನು ಇಟ್ಟು ಪ್ರಾರ್ಥನೆ ಸಲ್ಲಿಸಿ ಸ್ವಲ್ಪ ವಿಶ್ರಾಂತಿ ಪಡೆಯಲಾಯಿತು. ನಂತರ ಮಂದ್‌ ಗೆ ಪ್ರದಕ್ಷಿಣೆ ಬರುತ್ತಾ ಬಪ್ಪಕ ಪುತ್ತರಿ ಬಣ್ಣಾತೆ ಬಾತ್ – ಪೋಯಿಲೇ, ಪೋಯಿಲೇ ಪೋಪಕ ಪುತ್ತರಿ ಏಣ್ಣಾತೇ ಪೋಚಿ- ಪೋಯಿಲೇ, ಪೋಯಿಲೇ ಎಂಬ ಉದ್ಘೋಷಣೆಯೊಂದಿಗೆ ಲಯಬದ್ಧವಾಗಿ ಮಂದ್‌ನಲ್ಲಿ ಪ್ರದಕ್ಷಣೆ ಬರುತ್ತಾ ಮೂರು ಗ್ರಾಮದ ಗ್ರಾಮಸ್ಥರು ಕೋಲು ಹೊಡೆಯುತ್ತಾ ಸಾಂಪ್ರದಾಯಿಕ ಹುತ್ತರಿ ಕೋಲಾಟ ದಲ್ಲಿ ಪಾಲ್ಗೊಂಡು ವಿಜೃಂಭಿಸಿದರು.

ಎರಡನೇ ದಿನ ಚಿಕ್ಕ ಕೋಲು. ಇಲ್ಲೂ ಸಹ ಮೂರು ಗ್ರಾಮಸ್ಥರು ಸೇರಿ ಕೋಲಾಟ , ಪರೆಯಕಳಿ ಮುಂತಾದ ಕಾರ್ಯಕ್ರಮವನ್ನು ನಡೆಸಿ ನಂತರ ಕೋಲನ್ನು ಮಕ್ಕಿ ದೇವಾಲಯಕ್ಕೆ ಒಪ್ಪಿಸುತ್ತಾರೆ. ಹೀಗೆ ಹುತ್ತರಿ ಹಬ್ಬಕ್ಕೆ ತೆರೆ ಎಳೆಯುತ್ತಾರೆ.

ಕಾಪಳಕಳಿ : ಹುತ್ತರಿ ಹಬ್ಬದಲ್ಲಿ ಕಾಪಳಕಳಿಗೆ ಹೆಚ್ಚು ಮಹತ್ವ ಇದೆ. ಹುತ್ತರಿ ಹಬ್ಬದಂದು ಬೇತು ಗ್ರಾಮದ ಮಕ್ಕಿ ದೇವಾಲಯಕ್ಕೆ ಅಡಗಿದ ಕೆಂಬಟ್ಟಿ ಜನಾಂಗದವರು ಕಾಪಳ ವೇಷವನ್ನು ಧರಿಸುತ್ತಾರೆ. ಮೈಗೆ ಕಪ್ಪು ಬಣ್ಣದ ಮಸಿಯನ್ನು ಬಳಿದು ಕೈಯಲ್ಲಿ ಅಂಗರೇ ಕೋಲು ಹಿಡಿದು ವಾದ್ಯಕ್ಕೆ ತಕ್ಕಂತೆ ಕುಣಿಯುತ್ತಾರೆ. ಈ ವೇಷ ಎರಡು ಮೂರು ದಿನಗಳ ಕಾಲ ಇದ್ದು ಸಾಂಪ್ರದಾಯಿಕವಾಗಿ ನಡೆದು ಬಂದಿರುತ್ತದೆ. ಕೋಲಾಟದಲ್ಲಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡು ಕೋಲಾಟ ಕಾರ್ಯಕ್ರಮಕ್ಕೆ ಮೆರುಗು ನೀಡುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರು ನಿವೃತ್ತಿ ಇಲ್ಲದವರು: ಗೋಕುಲ್ ಶೆಟ್ಟಿ
ಭದ್ರಕಾಳಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸೋಲಾರ್ ಘಟಕ ಲೋಕಾರ್ಪಣೆ