ಜೂ.9ರಂದು ಬೃಹತ್ ಉಚಿತ ಆರೋಗ್ಯ ಶಿಬಿರ: ಬಿ.ಸಿ.ಶಿವಾನಂದಮೂರ್ತಿ

KannadaprabhaNewsNetwork |  
Published : Jun 01, 2026, 01:45 AM IST
31ಕೆಎಂಎನ್ ಡಿ13,14 | Kannada Prabha

ಸಾರಾಂಶ

ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಪ್ರತಿಯೊಬ್ಬರನ್ನೂ ಸಹ ಆರೋಗ್ಯವಂತರನ್ನಾಗಿಸಲು ಸಹಾಯ ಮಾಡುವ ಕಾರ್ಯಕ್ರಮ ಇದಾಗಿರುವುದರಿಂದ ಯಾವೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ನಿರ್ಲಕ್ಷ್ಯ ವಹಿಸದೆ ಇದು ನಾವೇ ಆಯೋಜಿಸಿರುವ ಆರೋಗ್ಯ ಶಿಬಿರ ಎನ್ನುವ ರೀತಿಯಲ್ಲಿ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಸಾರ್ವಜನಿಕರ ಆರೋಗ್ಯ ಕಾಪಾಡುವ ಮುಖ್ಯ ಗುರಿಯೊಂದಿಗೆ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತರು ಜೂ.9 ರಂದು ಹಮ್ಮಿಕೊಂಡಿರುವ ಬೃಹತ್ ಉಚಿತ ಆರೋಗ್ಯ ಶಿಬಿರವನ್ನು ಯಶಸ್ವಿಯಾಗಿಸಲು ಪ್ರಮುಖ ಪಾತ್ರ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ತಿಳಿಸಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕಿನ ಎಲ್ಲಾ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಗ್ರಾಪಂ ಪಿಡಿಒಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾಡಳಿತದಿಂದ ಜೂ.9 ರಂದು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ ಬೃಹತ್ ಉಚಿತ ಆರೋಗ್ಯ ಶಿಬಿರವು ನಿರೀಕ್ಷೆಗೂ ಮೀರಿ ಯಶಸ್ವಿಯಾಗಬೇಕು. ಇದಕ್ಕೆ ಪೂರಕವಾಗಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಪೂರ್ಣ ಪ್ರಮಾಣದ ಸಹಕಾರದೊಂದಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಗ್ರಾಮೀಣ ಪ್ರದೇಶದ ಜನರು ಏನೆಲ್ಲಾ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆಂಬುದು ಆಶಾ ಕಾರ್ಯಕರ್ತರಿಗೆ ಮಾತ್ರ ಗೊತ್ತಿರುತ್ತದೆ. ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಪ್ರತಿಯೊಬ್ಬರನ್ನೂ ಸಹ ಆರೋಗ್ಯವಂತರನ್ನಾಗಿಸಲು ಸಹಾಯ ಮಾಡುವ ಕಾರ್ಯಕ್ರಮ ಇದಾಗಿರುವುದರಿಂದ ಯಾವೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ನಿರ್ಲಕ್ಷ್ಯ ವಹಿಸದೆ ಇದು ನಾವೇ ಆಯೋಜಿಸಿರುವ ಆರೋಗ್ಯ ಶಿಬಿರ ಎನ್ನುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.

ಕೊಪ್ಪ ಹೋಬಳಿ ಸೇರಿದಂತೆ ತಾಲೂಕಿನಲ್ಲಿ 180ಕ್ಕೂ ಹೆಚ್ಚು ಆಶಾ ಕಾರ್ಯಕರ್ತರು ಕರ್ತವ್ಯ ನಿರ್ವಹಿಸುತ್ತಿದ್ದು, ಒಬ್ಬ ಆಶಾ ಕಾರ್ಯಕರ್ತೆ ಅನಾರೋಗ್ಯದಿಂದ ಬಳಲುತ್ತಿರುವ ಕನಿಷ್ಠ 125 ಮಂದಿಯನ್ನು ಶಿಬಿರಕ್ಕೆ ಕರೆತರಬೇಕು. ಇದಕ್ಕೆ ಆಯಾ ಗ್ರಾಪಂ ಪಿಡಿಒಗಳು, ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಬೇಕು ಎಂದರು.

ಬೃಹತ್ ಆರೋಗ್ಯ ಶಿಬಿರಕ್ಕೆ ಸಂಬಂಧಿಸಿದಂತೆ ಪಿಡಿಒಗಳು ಗ್ರಾಪಂನಲ್ಲಿ ಸಭೆ ನಡೆಸಿ ತಮ್ಮ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಕಸವಿಲೇವಾರಿ ವಾಹನಗಳ ಮೂಲಕ ಹೆಚ್ಚು ಪ್ರಚಾರ ನಡೆಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಜನರಲ್ಲಿ ಅರಿವು ಮೂಡಿಸಬೇಕು ಎಂದರು.

ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಗ್ರಾಪಂ ಪಿಡಿಒಗಳೊಂದಿಗೆ ಸಂಪರ್ಕದಲ್ಲಿದ್ದು ಟೀಂ ವರ್ಕ್ ಮಾಡಿ ಸೋಮವಾರದೊಳಗೆ 20 ಸಾವಿರಕ್ಕೂ ಹೆಚ್ಚು ಶಿಬಿರಾರ್ಥಿಗಳ ಪಟ್ಟಿ ಸಿದ್ಧಪಡಿಸಬೇಕು ಎಂದರು.

ಶಿಬಿರಕ್ಕೆ ಬರುವ ಪ್ರತಿಯೊಬ್ಬರಿಗೂ ಊಟದ ವ್ಯವಸ್ಥೆ ಇರುತ್ತದೆ. ನೋಂದಾಯಿಸಲು 50 ಕೇಂದ್ರಗಳನ್ನು ತೆರೆಯಲಾಗುವುದು. ಆರೋಗ್ಯ ತಪಾಸಣೆ ಮುಗಿದ ನಂತರ ಜನರನ್ನು ಸುರಕ್ಷಿತವಾಗಿ ಬಸ್‌ಗಳಲ್ಲಿ ಕರೆದೊಯ್ದು ಊರಿಗೆ ಬಿಡಲಾಗುವುದು. ಈ ಬಗ್ಗೆ ಯಾವುದೇ ಗೊಂದಲ ಮಾಡಿಕೊಳ್ಳಬಾರದು ಎಂದರು.

ಅನಾರೋಗ್ಯದಿಂದ ಬಳಲುತ್ತಿರುವ ಜನರನ್ನು ಶಿಬಿರಕ್ಕೆ ಕರೆತರಲು ಪ್ರತಿ ಗ್ರಾಪಂಗಳಿಗೆ ಅಗತ್ಯ ಸಾರಿಗೆ ಬಸ್‌ಗಳನ್ನು ಒದಗಿಸಲಾಗುವುದು. ಪ್ರತಿ ಬಸ್‌ನಲ್ಲಿ ಪ್ರಥಮ ಚಿಕಿತ್ಸೆ ಕಿಟ್, ಕುಡಿಯುವ ನೀರು, ಬಿಸ್ಕೆಟ್, ಚಾಕೋಲೆಟ್ ಹಾಗೂ ಗ್ಲೂಕೋಸ್ ಪೌಡರ್ ವ್ಯವಸ್ಥೆ ಮಾಡಿರಬೇಕು. ಪ್ರತಿ ಬಸ್‌ಗೆ ಒಬ್ಬ ವಾಟರ್ ಮನ್ ನಿಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಬಿ.ಎಸ್.ಸತೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಲೋಕೇಶ್, ಸಿಡಿಪಿಒ ಕೃಷ್ಣಮೂರ್ತಿ, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಮಹೇಶ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಾಘವೇಂದ್ರ, ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ತಾಲೂಕಿನ ಮತ್ತು ಕೊಪ್ಪ ಹೋಬಳಿ ಗ್ರಾಪಂ ಪಿಡಿಒಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಕಂದಾಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ವಿಕಸಿತ ಭಾರತ’ಕ್ಕಾಗಿ ಸಂಕಲ್ಪಿಸಿ: ರಾಧಾಕೃಷ್ಣನ್‌
ಬಳ್ಳಾವರ ಗಂಗೂರು ಗ್ರಾಮಗಳ ಸುತ್ತ ನಿಲ್ಲದ ಕಾಡಾನೆಗಳ ಕಾಟ