ಭಟ್ಕಳ: ಪುಟ್ಟ ಗಾಣಿಗ ಸಮಾಜ ಎಲ್ಲರ ಸಹಕಾರದಿಂದ ಮಣ್ಕುಳಿಯಲ್ಲಿ ಹನುಮಂತ ಮತ್ತು ಲಕ್ಷ್ಮೀನಾರಾಯಣ ದೇವರ ದೇವಸ್ಥಾನವನ್ನು ಪುನರ್ ನಿರ್ಮಿಸಿ ದೇವರ ಪ್ರತಿಷ್ಠೆ ಬ್ರಹ್ಮಕಲಶ ಮಾಡುವುದರೊಂದಿಗೆ 41 ಅಡಿ ಅಭಯ ಹನುಮಂತನ ಮೂರ್ತಿ ಪ್ರತಿಷ್ಠಾಪಿಸಿ ದೊಡ್ಡ ಕಾರ್ಯ ಮಾಡಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀ ಹೇಳಿದರು.
ಅವರು ಶುಕ್ರವಾರ ಮಧ್ಯಾಹ್ನ ಮಣ್ಕುಳಿ ಹನುಮಂತ ಮತ್ತು ಲಕ್ಷ್ಮೀನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ದೇವಸ್ಥಾನವನ್ನು ಚಿಕ್ಕ ಸ್ಥಳದಲ್ಲಿ ಸುಂದರವಾಗಿ ಮತ್ತು ಶಾಸ್ತ್ರೋಕ್ತವಾಗಿ ನಿರ್ಮಿಸಲಾಗಿದೆ. ಪುಟ್ಟ ಗಾಣಿಗ ಸಮಾಜ ಸಂಘಟಿತವಾಗಿ ಇಷ್ಟೊಂದು ದೊಡ್ಡ ದೇವಸ್ಥಾನ ನಿರ್ಮಿಸಿರುವುದು ಮಹತ್ಕಾರ್ಯವಾಗಿದೆ. ಇಲ್ಲಿ ಸಂಖ್ಯೆಗಿಂತ ಯೋಗ್ಯತೆ ಎದ್ದು ಕಂಡಿದೆ. ಅತೀ ಶ್ರೇಷ್ಠ ಎನಿಸಿದ ಈಶಾನ್ಯ ಧಿಕ್ಕಿನಲ್ಲಿ 41 ಅಡಿ ಎತ್ತರ ಅಭಯ ಹನುಮಂತನ ಮೂರ್ತಿಯನ್ನು ಸ್ಥಾಪಿಸಿರುವುದರಿಂದ ಎಲ್ಲರಿಗೂ ಒಳಿತುಂಟಾಗಲಿದೆ. ಹೆದ್ದಾರಿಯಲ್ಲಿ ಸಂಚರಿಸುವ ಜನರಿಗೆ ಬೃಹತ್ ಹನುಮಂತನ ದರ್ಶನದ ಭಾಗ್ಯ ಸಿಕ್ಕಿರುವುದು ಪುಣ್ಯವೇ ಎಂದು ಬಣ್ಣಿಸಿದ ಅವರು, ಭಾರತ ಮತ್ತು ಪಾಕಿಸ್ಥಾನದ ಯುದ್ದದ ಸನ್ನಿವೇಶ ಮತ್ತು ಏನಾಗುತ್ತದೋ ಎನ್ನುವ ಆತಂಕದ ಸಂದರ್ಭದಲ್ಲಿ ಮಣ್ಕುಳಿಯಲ್ಲಿ ಸ್ಥಾಪಿಸಿದ ಹನುಮಂತ ದೇವ ಮಣ್ಕುಳಿ, ಭಟ್ಕಳಕ್ಕಷ್ಟೇ ಅಲ್ಲದೇ ಇಡೀ ದೇಶಕ್ಕೆ ಅಭಯ ನೀಡಲಿದ್ದಾನೆ. ಆಂಜನೇಯನ ಕೃಪೆಯಿಂದಲೇ ಇಂತಹ ಸುಂದರ ದೇವಸ್ಥಾನವನ್ನು ನಿರ್ಮಿಸಲು ಸಾಧ್ಯವಾಗಿದೆ. ಗಾಣಿಗ ಸಮಾಜಕ್ಕೆ ಇದರಿಂದ ಒಳಿತಾಗುವುದರೊಂದಿಗೆ, ಆತ್ಮವಿಶ್ವಾಸ ಹೆಚ್ಚಾಗಲಿದೆ ಎಂದರು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಭಾಶ ಶೆಟ್ಟಿ ಮಾತನಾಡಿ, ಎಲ್ಲರ ಸಹಕಾರದಿಂದ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಶ್ರೀಗಳು ದೇವಸ್ಥಾನಕ್ಕೆ ಆಗಮಿಸಿ ಆಶೀರ್ವಚನ ನೀಡುತ್ತಿರುವುದು ನಮ್ಮ ಭಾಗ್ಯ ಎಂದರು.ವೇದಿಕೆಯಲ್ಲಿ ಪ್ರಮುಖರಾದ ಆನಂದ ಶೆಟ್ಟಿ, ನಾರಾಯಣ ಶೆಟ್ಟಿ, ಮಹೇಶ ಶೆಟ್ಟಿ ಗೋಕರ್ಣ, ರಾಮದಾಸ ಶೆಟ್ಟಿ, ಶಿವರಾಮ ಶೆಟ್ಟಿ, ಜೈರಾಮ ಶೆಟ್ಟಿ, ಗಣೇಶ ಶೆಟ್ಟಿ ಮುಂತಾದವರಿದ್ದರು. ಮನೋಜ ಶೆಟ್ಟಿ ಸ್ವಾಗತಿಸಿದರು. ರಾಜೇಶ ಶೆಟ್ಟಿ ವಂದಿಸಿದರು. ಇದಕ್ಕೂ ಪೂರ್ವದಲ್ಲಿ ಶ್ರೀಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ಶ್ರೀಗಳು ದೇವಸ್ಥಾನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.