ಸಂಡೂರು: ಬಿಜೆಪಿ ತೆಗೆದುಕೊಂಡ ತೀರ್ಮಾನದಿಂದ ಮನಸ್ಸಿಗೆ ತುಂಬ ನೋವಾಗಿದೆ. ನನ್ನನ್ನು ಬೆಳೆಸಿದವರು ಕಾರ್ಯಕರ್ತರು. ಕ್ಷೇತ್ರದಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಅ.೨೩ರಂದು ನನ್ನ ನಿರ್ಧಾರ ತಿಳಿಸುವೆ ಎಂದು ಬಿಜೆಪಿ ಟಿಕೆಟ್ ವಂಚಿತ ಕೆ.ಎಸ್. ದಿವಾಕರ್ ತಿಳಿಸಿದರು.
ಪಟ್ಟಣದಲ್ಲಿನ ತಮ್ಮ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.೨೦೧೨ರಿಂದ ನಾನು ಕ್ಷೇತ್ರದಲ್ಲಿದ್ದು, ಜನರ ಪ್ರೀತಿ, ವಿಶ್ವಾಸ ಗಳಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಯಾಗಬೇಕು. ಇಲ್ಲಿನ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಬೇಕು ಎಂಬುದು ನನ್ನ ಆಶಯವಾಗಿದೆ. ಆದರೆ, ೨೦೧೮, ೨೦೨೩ ಹಾಗೂ ಈಗಿನ ಉಪ ಚುನಾವಣೆಯಲ್ಲಿಯೂ ನನಗೆ ಬಿಜೆಪಿ ಟಿಕೆಟ್ ತಪ್ಪಿದೆ. ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಪ್ರಾಬಲ್ಯ ಅಳಿಸಿ, ಇತಿಹಾಸ ನಿರ್ಮಿಸುವ ಸಂಕಲ್ಪ ತೊಟ್ಟಿದ್ದೆ. ಆದರೆ, ಪಕ್ಷ ಟಿಕೆಟ್ ನೀಡದೇ ಅನ್ಯಾಯ ಮಾಡಿದೆ ಎಂದರು.
ಮೂರನೇ ಬಾರಿಗೆ ಟಿಕೆಟ್ ಕೈತಪ್ಪಲು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಒಳ ಒಪ್ಪಂದವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೆ.ಎಸ್. ದಿವಾಕರ್, ನಾನು ಕೂಡ ಜನರಿಂದ ಈ ಮಾತನ್ನು ಕೇಳಿದ್ದೇನೆ. ಕಳೆದ ಬಾರಿ ನಾನು ಕೆಆರ್‌ಪಿಪಿ ಪಕ್ಷದಿಂದ ಸ್ಪರ್ಧಿಸಿ ೩೨ ಸಾವಿರ ಮತ ಪಡೆದಿದ್ದೇನೆ. ಸೋತರೂ ಫಲಿತಾಂಶ ಘೋಷಣೆಯಾದ ಮಾರನೇ ದಿನದಿಂದಲೂ ನಾನು ಕ್ಷೇತ್ರದಲ್ಲಿದ್ದೇನೆ. ಕಾರ್ಯಕರ್ತರ ಕಷ್ಟ-ಸುಖಗಳಿಗೆ ಸ್ಪಂದಿಸುವ ಕೆಲಸದಲ್ಲಿ ತೊಡಗಿದ್ದೇನೆ. ಈ ಬಾರಿ ನನಗೆ ೫೦೦೦ ಸದಸ್ಯರನ್ನು ಮಾಡುವ ಗುರಿ ನೀಡಿದ್ದರು. ನಾನು ೯೮೦೦ ಸದಸ್ಯರನ್ನು ನೊಂದಣಿ ಮಾಡಿಸಿದ್ದೇನೆ ಎಂದು ತಿಳಿಸಿದರು.ಬಂಗಾರು ಹನುಮಂತು ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷರಾಗಿದ್ದು, ನಮ್ಮಂತವರನ್ನು ಬೆಂಬಲಿಸಿ, ಬೆಳೆಸಬೇಕಿತ್ತು. ಈಗ ಆ ಕಾರ್ಯ ಆಗಿಲ್ಲ. ಪಕ್ಷದಲ್ಲಿನ ದೊಡ್ಡವರೇ ನನ್ನನ್ನು ತುಳಿದಿದ್ದಾರೆ. ಕಾರ್ಯಕರ್ತರು ನನ್ನನ್ನು ಬೆಳೆಸಿದ್ದಾರೆ. ಹೀಗಾಗಿ ಕಾರ್ಯಕರ್ತರ ಅಭಿಪ್ರಾಯ ಪಡೆಯುತ್ತೇನೆ. ಅವರು ಸ್ಪರ್ಧಿಸು ಎಂದು ತಿಳಿಸಿದರೆ, ಸ್ಪರ್ಧಿಸಲು ಸಿದ್ಧ. ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಪಡೆದು ಅ.೨೩ರಂದು ನನ್ನ ನಿರ್ಧಾರ ತಿಳಿಸುವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡರು ಸಂಪರ್ಕಿಸಿರುವ ಕುರಿತು ಕೇಳಲಾದ ಪ್ರಶ್ನೆಗೆ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿನ ಅಸಮಾಧಾನಿತ ಮುಖಂಡರು ನನ್ನ ಸಂಪರ್ಕದಲ್ಲಿದ್ದಾರೆ. ಆದಾಗ್ಯೂ ನಾನು ಕಾರ್ಯಕರ್ತರ ಅಭಿಪ್ರಾಯದಂತೆ ನಡೆದುಕೊಳ್ಳುವೆ ಎಂದು ತಿಳಿಸಿದರು.ಸಂಡೂರಿನಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಭಾನುವಾರ ಬಿಜೆಪಿ ಟಿಕೆಟ್ ವಂಚಿತ ಕೆ.ಎಸ್. ದಿವಾಕರ್ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.