ನಗರದಲ್ಲಿ ನಮೋ ಬ್ರಿಗೇಡ್‌ನಿಂದ ಬೈಕ್‌ ರ್‍ಯಾಲಿ

KannadaprabhaNewsNetwork | Published : Oct 13, 2023 12:15 AM

ಸಾರಾಂಶ

ಶ್ರೀ ದುರ್ಗಾಂಬಿಕಾ ದೇಗುಲ ಬಳಿ ರ್‍ಯಾಲಿಗೆ ಚಕ್ರವರ್ತಿ ಸೂಲಿಬೆಲೆ ಚಾಲನೆ, ರಾಜ್ಯಾದ್ಯಂತ 3,500 ಕಿಮೀಗೂ ಅಧಿಕ ಸಂಚಾರ

ಶ್ರೀ ದುರ್ಗಾಂಬಿಕಾ ದೇಗುಲ ಬಳಿ ರ್‍ಯಾಲಿಗೆ ಚಕ್ರವರ್ತಿ ಸೂಲಿಬೆಲೆ ಚಾಲನೆ, ರಾಜ್ಯಾದ್ಯಂತ 3,500 ಕಿಮೀಗೂ ಅಧಿಕ ಸಂಚಾರ

ಕನ್ನಡಪ್ರಭ ವಾರ್ತೆ ದಾವಣಗೆರೆ

ನರೇಂದ್ರ ಮೋದಿಯವರ ಮೂರನೇ ಅವಧಿಗೂ ಪ್ರಧಾನಿ ಮಾಡಬೇಕೆಂಬ ಸದುದ್ದೇಶದಿಂದ ನಮೋ ಬ್ರಿಗೇಡ್‌ನಿಂದ ಜನಗಣಮನ ನಮೋ 2.0 ಬೈಕ್ ರ್‍ಯಾಲಿಯನ್ನು ರಾಜ್ಯವ್ಯಾಪಿ ಹಮ್ಮಿಕೊಳ್ಳಲಾಗಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

ನಗರದ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಬಳಿ ಗುರುವಾರ ಬೆಳಿಗ್ಗೆ ಜನಗಣಮನ ನಮೋ 2.0 ಬೈಕ್ ರ್‍ಯಾಲಿಗೆ ಚಾಲನೆ ನೀಡಿ ಮಾತನಾಡಿ, ರಾಜ್ಯವ್ಯಾಪಿ ಈಗಾಗಲೇ ಬೈಕ್ ರ್‍ಯಾಲಿ ನಡೆಸಲಾಗಿದ್ದು, ಇದೀಗ ದಾವಣಗೆರೆಯಲ್ಲಿ ರ್‍ಯಾಲಿ ಹಮ್ಮಿಕೊಂಡಿದ್ದೇವೆ ಎಂದರು. ಬೈಕ್ ರ್‍ಯಾಲಿಯಲ್ಲಿ ನಾವು ಈಗ ಕೊನೆಯ ಹಂತದಲ್ಲಿದ್ದೇವೆ. ಸುಮಾರು 3,500 ಕಿಮೀಗೂ ಅಧಿಕ ಬೈಕ್ ರ್‍ಯಾಲಿ ಮಾಡಲಾಗಿದೆ. ಕೋಲಾರದಿಂದ ಆರಂಭವಾದ ಜನಗಣಮನ ನಮೋ 2.0 ಬೈಕ್ ರ್‍ಯಾಲಿ ಬೆಂಗಳೂರಿನಲ್ಲಿ ಮುಕ್ತಾಯವಾಗಲಿದೆ ಎಂದು ಹೇಳಿದರು.

ರ್‍ಯಾಲಿಗೂ ಮುನ್ನ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ, ಮುಂಭಾಗದ ಶ್ರೀಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ನಂತರ ದೇವಸ್ಥಾನ ಸಮೀಪದ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಚಕ್ರವರ್ತಿ ಸೂಲಿಬೆಲೆ ಬೈಕ್ ರ್‍ಯಾಲಿಗೆ ಚಾಲನೆ ನೀಡಿದರು. ಇದೇ ವೇಳೆ ಇಲ್ಲಿನ ಹಳೆ ಪಿಬಿ ರಸ್ತೆಯಲ್ಲಿ ಬುಧವಾರ ಸಂಜೆ ಧ್ವಜ ಕಟ್ಟುವ ವೇಳೆ ಕ್ರೇನ್‌ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಯುವಕ ಪೃಥ್ವಿರಾಜ್ ಗೌರವಾರ್ಥ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಎಲ್ಲರೂ 2 ನಿಮಿಷ ಮೌನ ಆಚರಿಸಿದರು.

ನಮೋ ಬ್ರಿಗೇಡ್‌ನ ಪವನ್ ಪ್ರೇರಣ, ಕಾರ್ತಿಕ್ ಮೋದಿ, ಚಂದ್ರು, ಚಂದ್ರಶೇಖರ, ಮಾರುತಿ, ಪಾಪಣ್ಣ, ಶಾರದಾ ಡೈಮಂಡ್‌ ಇತರರು ಇದ್ದರು. ಸುಮಾರು 250ಕ್ಕೂ ಹೆಚ್ಚು ಬೈಕ್‌ಗಳು ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದವು. ಭಾರತದ ತ್ರಿವರ್ಣ ಧ್ವಜ, ಕೇಸರಿ ಧ್ವಜ, ಮೋದಿ ಚಿತ್ರದ ಧ್ವಜ ಹಿಡಿದಿದ್ದ ಯುವಕರು, ಪ್ರಧಾನಿ ನರೇಂದ್ರ ಮೋದಿ ಚಿತ್ರದ ಟಿ ಶರ್ಟ್‌ ಧರಿಸಿ ಗಮನ ಸೆಳೆದರು. ಮೋದಿ ಸಾಧನೆಯ ಸ್ತಬ್ಧ ಚಿತ್ರ ಗಮನ ಸೆಳೆಯಿತು.

ನಗರದ ವಿವಿಧೆಡೆ ರ್‍ಯಾಲಿ ಸಂಚಾರ:

ದುಗ್ಗಮ್ಮ ದೇವಸ್ಥಾನ ಬಳಿಯಿಂದ ಆರಂಭವಾದ ಬೈಕ್ ರ್‍ಯಾಲಿ ಎಸ್‌ಕೆಪಿ ರಸ್ತೆ, ವೀರ ಮದಕರಿ ನಾಯಕ ವೃತ್ತ, ವೀರ ರಾಣಿ ಕಿತ್ತೂರು ಚನ್ನಮ್ಮ ರಸ್ತೆ, ಜಯದೇವ ವೃತ್ತ, ನಿಟುವಳ್ಳಿ ರಸ್ತೆ, ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನ, 60 ಅಡಿ ರಸ್ತೆ, ವಿದ್ಯಾನಗರ, ಡೆಂಟಲ್ ಕಾಲೇಜು ರಸ್ತೆ, ಡಾ.ಎಂ.ಸಿ.ಮೋದಿ ವೃತ್ತ, ಲಕ್ಷ್ಮೀ ಫ್ಲೋರ್ ಮಿಲ್ ಮಾರ್ಗವಾಗಿ ಎಸ್‌.ನಿಜಲಿಂಗಪ್ಪ ಬಡಾವಣೆಯ ಕರ್ನಲ್ ರವೀಂದ್ರನಾಥ ವೃತ್ತದ ಅಮರ್ ಜವಾನ್‌ ಸ್ಮಾರಕದ ಬಳಿ ಮುಕ್ತಾಯವಾಯಿತು. ಸುಮಾರು 25 ನಿಮಿಷಕ್ಕೂ ಹೆಚ್ಚು ಕಾಲ ಮೋದಿ ಸಾಧನೆ ಕುರಿತಂತೆ ಸೂಲಿಬೆಲೆ ಮಾತನಾಡಿದರು. ತಮ್ಮ ಕಾರ್ಯಕ್ರಮ ಯಾವುದೇ ರಾಜಕೀಯ ಪಕ್ಷದ ಪರವಾಗಿ ಅಲ್ಲವೆಂಬುದು ಸ್ಪಷ್ಟಪಡಿಸಿದರು. ರಾಕ್ಷಸಿ ಕೃತ್ಯವನ್ನು ಸಮರ್ಥನೆ ಮಾಡಿಕೊಳ್ಳುವುದೇನೂ ಕಾಂಗ್ರೆಸ್ಸಿಗೆ ದೊಡ್ಡ ವಿಷಯವೂ ಅಲ್ಲ. ಮಹಿಷ ದಸರಾಗೆ ಇಡೀ ಮೈಸೂರಿನ ಜನರು ಒಗ್ಗಟ್ಟಾಗಿ ಪ್ರತಿಭಟಿಸುತ್ತಿರುವುದು ಸ್ತುತ್ಯಾರ್ಹ ಸಂಗತಿ. ಮಹಿಷ ದಸರಾ ಆಯೋಜಕರಿಗೆ ಮೈಸೂರಿನ ಜನತೆಯಿಂದಲೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಚಕ್ರವರ್ತಿ ಸೂಲಿಬೆಲೆ, ಚಿಂತಕ

ರಾಕ್ಷಸರ ಸಮರ್ಥಿಸಿಕೊಳ್ಳುವ ಕಾಂಗ್ರೆಸ್‌: ಸೂಲಿಬೆಲೆ

ಮಹಿಷ ದಸರಾಗೆ ಮೈಸೂರಿನ ಜನರ ಒಗ್ಗಟ್ಟಿನ ವಿರೋಧಕ್ಕೆ ಸ್ವಾಗತ

ದಾವಣಗೆರೆ: ಮೈಸೂರಿನಲ್ಲಿ ಮಹಿಷ ದಸರ ಆಯೋಜನೆಗೆ ಮುಂದಾಗಿರುವ ಸಂಘಟಕರ ವರ್ತನೆಯನ್ನು ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ತೀವ್ರವಾಗಿ ಖಂಡಿಸಿದ್ದಾರೆ.

ನಗರದಲ್ಲಿ ಗುರುವಾರ ಬೈಕ್ ರ್‍ಯಾಲಿಗೆ ಚಾಲನೆ ನೀಡಿ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ರಾಕ್ಷಸರ ಸಮರ್ಥನೆ ಮಾಡುವುದೇನೂ ವಿಶೇಷವಲ್ಲ ಎಂದು ಕುಟುಕಿದರು. ಇದೊಂದೇ ಅಲ್ಲ, ಅತ್ತ ಪ್ಯಾಲಿಸ್ತೀನ್‌ರನ್ನು ಕಾಂಗ್ರೆಸ್ ಪಕ್ಷವು ಸಮರ್ಥಿಸಿಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷಕ್ಕಂತೂ ಇದೇನೂ ಹೊಸದೂ ಅಲ್ಲ ಎಂದು ಹೇಳಿದರು.

ಮಹಿಷ ದಸರಾ ಸಮರ್ಥನೆ ಮಾಡುವ ಹೊತ್ತಿನಲ್ಲೇ ಪ್ಯಾಲೇಸ್ತೀನ್‌ಗೂ ಕಾಂಗ್ರೆಸ್ ಬೆಂಬಲಿಸುತ್ತಿರುವುದು ಗೊತ್ತಾಗಿದೆ. ಪ್ಯಾಲೇಸ್ತೀನ್‌ನ ರಾಕ್ಷಸಿ ಕೃತ್ಯವನ್ನು ಕಾಂಗ್ರೆಸ್ ಪಕ್ಷದ ನೇತೃತ್ವದ ಐಎನ್‌ಡಿಐಎ(ಇಂಡಿಯಾ) ಕೂಟವು ಸಮರ್ಥಿಸಿಕೊಂಡಿದೆ ಎಂದು ಟೀಕಿಸಿದರು.

Share this article