- ಅಕ್ಕಪಕ್ಕದ ಅಂತರ್ಜಲಕ್ಕೂ ಕುತ್ತು
- ಸಂಪೂರ್ಣ ಬರಿದಾಗಿರುವ ನದಿಯ ಒಡಲುಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳ
ತುಂಗಭದ್ರಾ ನದಿಯ ಒಡಲು ಸಂಪೂರ್ಣ ಬರಿದಾಗಿದ್ದು, ಈಗ ನದಿಯುದ್ದಕ್ಕೂ ಕಾಲುದಾರಿ ಬಿದ್ದಿದೆ. ನದಿಯ ಆಚೆ, ಈಚೆಗೂ ಜನರು ಬೈಕ್, ಎತ್ತಿನ ಬಂಡಿಯಲ್ಲಿ ಓಡಾಡುತ್ತಿದ್ದಾರೆ.ಅದೆಷ್ಟೋ ವರ್ಷಗಳ ಬಳಿಕ ತೀವ್ರ ಬರದಿಂದಾಗಿ ತುಂಗಭದ್ರಾ ನದಿಯೇ ಬರಿದಾಗಿದೆ. ಹಿಂಗಾರು ಮಳೆಯೂ ಸಂಪೂರ್ಣ ಕೈಕೊಟ್ಟಿರುವುದರಿಂದ ನದಿಯಲ್ಲಿ ಹನಿ ನೀರು ಇಲ್ಲದಿರುವ ಸ್ಥಿತಿ ನಿರ್ಮಾಣವಾಗಿದೆ. ಕೊಪ್ಪಳ ತಾಲೂಕಿನಾದ್ಯಂತ ತುಂಗಭದ್ರಾ ನದಿ ಸಂಪೂರ್ಣ ಬರಿದಾಗಿದ್ದು, ಸುಮಾರು 15-20 ಕಿಮೀ ದೂರದಷ್ಟು ನದಿಯ ಸಂಪೂರ್ಣ ಬತ್ತಿ ಹೋಗಿದೆ. ಅಲ್ಲಿ ತೇವಾಂಶವೂ ಇಲ್ಲದಂತಾಗಿದೆ.
ತಾಲೂಕಿನ ಕಾತರಕಿ, ಗುಡ್ಲಾನೂರು, ಹಾದರಮಗ್ಗಿ, ಬೆಟಗೇರಿ ಸೇರಿದಂತೆ ಮೊದಲಾದ ಗ್ರಾಮಗಳುದ್ದಕ್ಕೂ ತುಂಗಭದ್ರಾ ನದಿ ಬತ್ತಿ ಹೋಗಿದೆ. ಇದರಿಂದ ಮೇ, ಜೂನ್ ತಿಂಗಳವರೆಗೂ ನೀರಿನ ಅಭಾವ ಎದುರಾಗಲಿದೆ. ತುಂಗಭದ್ರಾ ನದಿಯುದ್ದಕ್ಕೂ ಹತ್ತಾರು ಗ್ರಾಮಗಳು ಕುಡಿಯುವ ನೀರನ್ನು ಆಶ್ರಯಿಸಿವೆ. ಅಷ್ಟೇ ಅಲ್ಲ ನದಿಯ ಜಲಮೂಲದಿಂದ ಹತ್ತಾರು ಸಾವಿರ ಎಕರೆ ಪ್ರದೇಶದಲ್ಲಿ ರೈತರು ಬೆಳೆ ಬೆಳೆಯುತ್ತಾರೆ. ಈಗ ನದಿ ಸಂಪೂರ್ಣ ಬತ್ತಿರುವುದರಿಂದ ಅಕ್ಕಪಕ್ಕದ ಬೋರ್‌ವೆಲ್‌ನಲ್ಲಿಯೂ ನೀರು ಕಮ್ಮಿಯಾಗುತ್ತಿದೆ ಎನ್ನುತ್ತಾರೆ ರೈತರು.ಕುಡಿಯುವ ನೀರಿಗೂ ತತ್ವಾರ:
ತುಂಗಭದ್ರಾ ನದಿಯಿಂದ ನೆಲೋಗಿಪುರ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಸುಮಾರು 34 ಗ್ರಾಮಗಳಿಗೆ ನದಿ ನೀರಿನಿಂದಲೇ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ, ಈಗ ನದಿಯಲ್ಲಿಯೇ ನೀರಿಲ್ಲದೇ ಇರುವುದರಿಂದ ನದಿಯಲ್ಲಿಯೇ ಬೋರ್‌ವೆಲ್ ಹಾಕಿ, ಅದರ ಮೂಲಕ ನೀರು ಪೂರೈಕೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ.ತುಂಗಭದ್ರಾ ಡ್ಯಾಮ್ ಸಹ ಖಾಲಿ:
ತುಂಗಭದ್ರಾ ಜಲಾಶಯದಲ್ಲಿಯೂ ನೀರು ತಳ ಸೇರಿದ್ದು, ಈಗ ಕೇವಲ 4.25 ಟಿಎಂಸಿ ನೀರು ಮಾತ್ರ ಇದೆ. ಇದರಲ್ಲಿ ಒಂದು ಟಿಎಂಸಿ ಆಂಧ್ರಕ್ಕೆ ಸೇರಿದ್ದಾಗಿದ್ದರೆ ಇನ್ನೆರಡು ಟಿಎಂಸಿ ಡೆಡ್ ಸ್ಟೋರೇಜ್ ನೀರಾಗಿದ್ದು, ಇದನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಹಾಗೆಯೇ ಉಳಿದ ಒಂದು ಟಿಎಂಸಿ ನೀರಿನಲ್ಲಿಯೇ ಇನ್ನೆರಡು ತಿಂಗಳು ಕಳೆಯಬೇಕು. ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳದ ಬಹುತೇಕ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ಇದಿಷ್ಟೇ ನೀರು ಇರುವುದು ಎನ್ನುವುದು ಆತಂಕಕಾರಿ ಅಂಶವಾಗಿದೆ.ಭದ್ರಾ ನೀರು:
ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಭದ್ರಾ ಜಲಾಶಯದಿಂದ ನೀರು ತರುವ ಪ್ರಯತ್ನ ನಡೆದಿದೆ. ಈಗಾಗಲೇ ಅಲ್ಲಿಂದ ನೀರು ಬಿಡುಗಡೆ ಮಾಡಲಾಗಿದ್ದು, ಅದು ಸಿಂಗಟಾಲೂರು ಏತನೀರಾವರಿ ಯೋಜನೆಯ ವ್ಯಾಪ್ತಿಯವರೆಗೂ ಬರುತ್ತದೆ. ಅಲ್ಲಿಂದ ತುಂಗಭದ್ರಾ ಜಲಾಶಯಕ್ಕೆ ತಲುಪಲು ಸಿಂಗಟಾಲೂರು ಏತನೀರಾವರಿ ಯೋಜನೆಯಿಂದ ಬಿಡುಗಡೆ ಮಾಡಬೇಕಾಗುತ್ತದೆ. ಇದು ಬಂದರೆ ಅಷ್ಟೇ ತುಂಗಭದ್ರಾ ನದಿಯುದ್ದಕ್ಕೂ ಇರುವ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ ತಜ್ಞರು.ತುಂಗಭದ್ರಾ ನದಿಯಲ್ಲಿ ನೀರಿನ ಅಭಾವ ಇರುವುದರಿಂದ ಸಮಸ್ಯೆಯಾಗಿದ್ದು, ಭದ್ರಾ ಜಲಾಶಯದಿಂದ ನೀರು ತರುವ ಪ್ರಯತ್ನ ನಡೆದಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.