ಕನ್ನಡಪ್ರಭ ವಾರ್ತೆ ತೇರದಾಳ (ರ-ಬ) ತೇರದಾಳ ಹಾಗೂ ಜಮಖಂಡಿಯಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ ಹಳಿಂಗಳಿ ಗ್ರಾಮದ ಸಂಜು ಬಸಪ್ಪ ತೇಲಿ ಎಂಬ ಆರೋಪಿಯನ್ನು ತೇರದಾಳ ಪೊಲೀಸರು ಬೈಕ್ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮದಡ್ಡಿ ನಾಕಾ ಬಳಿ ಸಂಶಯಾಸ್ಪದವಾಗಿ ಅಡ್ಡಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ ವೇಳೆ ₹೮೦ ಸಾವಿರ ಮೌಲ್ಯದ ಎರಡು ಬೈಕ್‌ಗಳನ್ನು ಕಳವು ಮಾಡಿರುವ ಬಗ್ಗೆ ಆರೋಪಿ ಒಪ್ಪಿಕೊಂಡಿದ್ದಾನೆ. ಅ.೭ರಂದು ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಪರಪ್ಪ ಮಾಳಿ ತೇರದಾಳ ಬಸ್ ನಿಲ್ದಾಣ ಬಳಿ ತಮ್ಮ ಸ್ಪ್ಲೆಂಡರ್ ಬೈಕ್ ನಿಲ್ಲಿಸಿದ್ದಾಗ ಅದು ಕಳವಾಗಿತ್ತು. ಈ ಕುರಿತು ತೇರದಾಳ ಠಾಣೆಯಲ್ಲಿ ಅವರು ಪ್ರಕರಣ ದಾಖಲಿಸಿದ್ದರು. ಜಮಖಂಡಿ ಡಿಎಸ್ಪಿ ಶಾಂತವೀರ. ಈ. ಹಾಗೂ ಸಿಪಿಐ ಸಂಜೀವ ಬಳಗಾರ ಅವರ ಮಾರ್ಗದರ್ಶನದಲ್ಲಿ ತೇರದಾಳ ಪಿಎಸ್‌ಐ ಅಪ್ಪು ಐಗಳಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಬ್ಬಂದಿ ಪಿ.ಎಚ್.ಗಣಿ, ಅಶೋಕ ಸವದಿ, ಎಲ್.ಸಿ.ಇಮ್ಮಡಿ, ಮಹಾನಿಂಗ ಬುಗಟಿ, ರಮೇಶ ಬಿರಾದಾರಪಾಟೀಲ, ನಾಗರಾಜ ಕಾಂಬಳೆ, ವಿಠ್ಠಲ ಮಾನೆ ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.