ಹಾವೇರಿ: ಪ್ರತಿಯೊಬ್ಬ ದ್ವಿಚಕ್ರ ವಾಹನ ಚಾಲಕರೂ ಸುರಕ್ಷತೆಗೆ ಆದ್ಯತೆ ನೀಡಬೇಕು. ಸ್ವ ಕಾಳಜಿಯಿಂದ ಹೆಲ್ಮೆಟ್ ಧರಿಸಿ ಚಾಲನೆ ಮಾಡಬೇಕು. ಹಿಂಬದಿಯಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಗಾಗಿ ಸುರಕ್ಷತಾ ಸರಂಜಾಮು ಪರಿಚಯಿಸಲಾಗುತ್ತಿದೆ. ತಮ್ಮ ಮಕ್ಕಳನ್ನು ದ್ವಿ ಚಕ್ರವಾಹನದಲ್ಲಿ ಕರೆದೊಯ್ಯುವಾಗ ಸ್ವಯಂ ಪ್ರೇರಣೆಯಿಂದ ತಾನು ಮತ್ತು ತನ್ನ ಕುಟುಂಬದ ಸುರಕ್ಷತೆಗೆ ಆದ್ಯತೆ ನೀಡಿ, ಮಕ್ಕಳ ಸುರಕ್ಷತಾ ಸರಂಜಾಮು ಹಾಗೂ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಹೇಳಿದರು.
ನಗರದ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಶುಕ್ರವಾರ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿ ಸಹಯೋಗದಲ್ಲಿ ಆಯೋಜಿಸಲಾದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಿಕ ಅಂಗವಾಗಿ ದ್ವಿಚಕ್ರ ವಾಹನದಲ್ಲಿ ೯ ತಿಂಗಳಿನಿಂದ ೪ ವರ್ಷದ ಮಕ್ಕಳು ಪ್ರಯಾಣಿಸುವಾಗ ಸುರಕ್ಷತೆ ಕವಚ ಧರಿಸುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವಾಹನ ಚಾಲನೆ ಮಾಡುವಾಗ ನಿಮ್ಮ ಕುಟುಂಬದವರ ಹಾಗೂ ವಾಹನ ಹಿಂಬದಿ ಸವಾರರ ಬಗ್ಗೆ ಕಾಳಜಿ ವಹಿಸಬೇಕು. ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಅಪಘಾತ ತಡೆಗೆ ಮುಂದಾಗಬೇಕು. ಮಾಧ್ಯಮಗಳು ಸಹ ರಸ್ತೆ ಸಂಚಾರ ನಿಯಮ ಹಾಗೂ ಸುರಕ್ಷತೆ ಬಗ್ಗೆ ವ್ಯಾಪಕವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.
೯ ತಿಂಗಳಿನಿಂದ ನಾಲ್ಕು ವರ್ಷದ ಮಕ್ಕಳ ವರೆಗೆ ಬೈಕ್‌ನ ಹಿಂಬದಿಯಲ್ಲಿ ಕರೆದೊಯ್ಯುವಾಗ ಅಪಘಾತಗಳು ಹೆಚ್ಚಾಗಿ ಕಂಡುಬರುತ್ತದೆ. ಅಪಘಾತ ಪ್ರಮಾಣವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಮಕ್ಕಳ ಸುರಕ್ಷತಾ ಸರಂಜಾಮುಗಳನ್ನು ಆರಂಭದಲ್ಲಿ ಸ್ಥಳೀಯ ದ್ವಿಚಕ್ರ ವಾಹನ ವಿತರಕರ ನೆರವಿನಿಂದ ಉಚಿತವಾಗಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಲ್ಮೆಟ್ ಜತೆಗೆ ಮಕ್ಕಳ ಸುರಕ್ಷತಾ ಸರಂಜಾಮುಗಳನ್ನು ಖರೀದಿಸಿ ಸುರಕ್ಷತಾ ಪ್ರಯಾಣಕ್ಕೆ ಆದ್ಯತೆ ನೀಡಬೇಕು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳನ್ನು ಉಪಯೋಗಿಸಲಾಗುತ್ತದೆ. ಚಾಲಕರ ಸುರಕ್ಷತೆಗೆ ಹೆಲ್ಮೆಟ್ ಧರಿಸಬೇಕು. ಜಿಲ್ಲೆಯಲ್ಲಿ ಈ ವರ್ಷ ೨೭೬ ಅಪಘಾತಗಳು ಸಂಭವಿಸಿವೆ. ಬರುವ ಸಾಲಿನಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ಪ್ರಾದೇಶಿಕ ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಓಂಕಾರೇಶ್ವರಿ ಮಾತನಾಡಿ, ಪ್ರಥಮ ಬಾರಿಗೆ ಹಾವೇರಿ ಜಿಲ್ಲೆಯಲ್ಲಿ ಸುರಕ್ಷತೆ ಸರಂಜಾಮು ಬಿಡುಗಡೆ ಮಾಡಲಾಗುತ್ತಿದೆ. ಮಕ್ಕಳಿಗೆ ಈ ಸುರಕ್ಷತೆ ಸರಂಜಾಮು ಉಪಯೋಗವಾಗಲಿದೆ. ನೀವು ಜೀವಿಸಿ, ಬೇರೆಯವರು ಜೀವಿಸಲು ಬಿಡಿ, ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ರಸ್ತೆ ಅಪಘಾತಗಳನ್ನು ತಪ್ಪಿಸಿ ಎಂದರು.ಹಾವೇರಿ ಶಹರ ಪೊಲೀಸ್ ಠಾಣೆ ಸಿಪಿಐ ಮೋತಿಲಾಲ್ ಪವಾರ, ಜಿಲ್ಲಾ ವಾರ್ತಾಧಿಕಾರಿ ಡಾ. ಬಿ.ಆರ್. ರಂಗನಾಥ್, ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಮಹಾಬಲೇಶಪ್ಪ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿಗಳು, ರಮೇಶ ಆನವಟ್ಟಿ ಇತರರು ಉಪಸ್ಥಿತರಿದ್ದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಂಬಾಬಾ ಮುದ್ದೇಬಿಹಾಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.