ದ್ವಿಭಾಷಾ ನೀತಿಯಿಂದ ಕನ್ನಡ ಬೆಳವಣಿಗೆಗೆ ಸಹಕಾರಿ: ಶ್ರೀದೇವಿ

KannadaprabhaNewsNetwork |  
Published : Jul 27, 2025, 12:00 AM IST
26ಕೆಎಂಎನ್‌ಡಿ-7ಮಂಡ್ಯದ ಸ್ವರ್ಣಸಂದ್ರದಲ್ಲಿರುವ ಎಇಟಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ದ್ವಿಭಾಷಾ ನೀತಿಯ ಅನಿವಾರ್ಯತೆ ವಿಚಾರ ಮಂಥನ ಕಾರ್ಯಕ್ರಮವನ್ನು ನಿವೃತ್ತ ಪ್ರಾಧ್ಯಾಪಕಿ ಪ್ರೊ.ಶ್ರೀದೇವಿ ಉದ್ಘಾಟಿಸಿದರು. | Kannada Prabha

ಸಾರಾಂಶ

ದ್ವಿಭಾಷಾ ನೀತಿಯನ್ನು ಕಡ್ಡಾಯಗೊಳಿಸುವುದರಿಂದ ಪ್ರತಿಯೊಬ್ಬರು ಶಿಕ್ಷಣದಲ್ಲಿ ಕನ್ನಡ ಕಲಿಯುವುದು ಕಡ್ಡಾಯಗೊಳಿಸಿದಂತಾಗುತ್ತದೆ. ತ್ರಿಭಾಷಾ ನೀತಿಯಿಂದ ಮಕ್ಕಳಿಗೆ ಮಾನಸಿಕ ಒತ್ತಡ ಉಂಟಾಗುತ್ತಿದ್ದು, ದ್ವಿ-ಭಾಷಾ ನೀತಿಯು ಮಕ್ಕಳ ಆರೋಗ್ಯದ ದೃಷ್ಟಿಯಿಂದಲೂ ಉಪಯುಕ್ತವಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶಿಕ್ಷಣದಲ್ಲಿ ದ್ವಿ-ಭಾಷಾ ನೀತಿಯನ್ನು ಜಾರಿಗೆ ತರುವುದರ ಮೂಲಕ ಕನ್ನಡದ ಬಳಕೆಗೆ ಮತ್ತೆ ಪ್ರಾಮುಖ್ಯತೆ ದೊರೆತು ಭಾಷೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ಶ್ರೀದೇವಿ ಅಭಿಪ್ರಾಯಪಟ್ಟರು.

ಭೂಮಿ ಬೆಳಗು ಸಾಂಸ್ಕೃತಿಕ ಸಂಘದಿಂದ ನಗರದ ಸ್ವರ್ಣಸಂದ್ರದ ಎಇಟಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ನಡೆದ ದ್ವಿಭಾಷಾ ನೀತಿಯ ಅನಿವಾರ್ಯತೆ ವಿಚಾರ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದ್ವಿಭಾಷಾ ನೀತಿಯನ್ನು ಕಡ್ಡಾಯಗೊಳಿಸುವುದರಿಂದ ಪ್ರತಿಯೊಬ್ಬರು ಶಿಕ್ಷಣದಲ್ಲಿ ಕನ್ನಡ ಕಲಿಯುವುದು ಕಡ್ಡಾಯಗೊಳಿಸಿದಂತಾಗುತ್ತದೆ ಎಂದರು.

ತ್ರಿಭಾಷಾ ನೀತಿಯಿಂದ ಮಕ್ಕಳಿಗೆ ಮಾನಸಿಕ ಒತ್ತಡ ಉಂಟಾಗುತ್ತಿದ್ದು, ದ್ವಿ-ಭಾಷಾ ನೀತಿಯು ಮಕ್ಕಳ ಆರೋಗ್ಯದ ದೃಷ್ಟಿಯಿಂದಲೂ ಉಪಯುಕ್ತವಾಗುತ್ತದೆ. ಇದರಿಂದ ಕನ್ನಡ ಭಾಷೆಯ ಬಳಕೆ ಮತ್ತು ಅಧ್ಯಯನವನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ವಿವರಿಸಿದರು.

ದ್ವಿ ಭಾಷಾ ನೀತಿಯಿಂದ ಮಕ್ಕಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುವುದರಿಂದ ಶೈಕ್ಷಣಿಕ ಗುಣಮಟ್ಟ ಸುಧಾರಿಸುವ ಜೊತೆಗೆ ಕನ್ನಡ ಭಾಷೆಯ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವುದಕ್ಕೆ ಸಹಕಾರಿಯಾಗುತ್ತದೆ ಎಂದರು.

ಪ್ರಸ್ತುತ ದಿನಮಾನದಲ್ಲಿ ಮಕ್ಕಳು ಮಾತೃಭಾಷೆಯ ಜೊತೆಗೆ ಇಂಗ್ಲಿಷ್ ಕಲಿಕೆಯು ಅಗತ್ಯವಾಗಿದ್ದು ದೀಪಾ ಬಸ್ತಿ ಅವರ ಇಂಗ್ಲಿಷ್ ಅನುವಾದದ ಮೂಲಕವೇ ಬಾನು ಮುಷ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಲಭಿಸಿತು ಎನ್ನುವುದನ್ನು ಮನಗಾಣಬೇಕು. ಶಿಕ್ಷಣದಲ್ಲಿ ಯಾವುದೇ ಗೊಂದಲ ಮೂಡಿಸದೆ ದ್ವಿಭಾಷಾ ನೀತಿಯನ್ನು ಜಾರಿ ಮಾಡಿ ಕನ್ನಡ ಭಾಷೆಯ ಉಳಿವಿಗೆ ಶ್ರಮಿಸಬೇಕು ಎಂದರು.

ಚಿಂತಕ ಡಾ. ಕೆ.ಪಿ.ನಟರಾಜ್ ವಿಚಾರ ಮಂಡಿಸಿ ಮಾತನಾಡಿ, ತ್ರಿಭಾಷಾ ಸೂತ್ರ ಗುಲಾಮಗಿರಿಯ ಸಂಕೇತವಾಗಿದ್ದು ಇದರಿಂದ ಬಿಡುಗಡೆ ಹೊಂದುವ ಮನಸ್ಥಿತಿ ಕನ್ನಡಿಗರಲ್ಲಿ ಕ್ಷೀಣಿಸುತ್ತಿರುವುದು ವಿಷಾದನೀಯ ಸಂಗತಿ. ಕನ್ನಡಿಗರೆಲ್ಲರೂ ಕೂಡ ದ್ವಿಭಾಷಾ ನೀತಿಯ ಪರವಾಗಿರುವಂತೆ ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಪ್ರಾಧ್ಯಾಪಕ ಎಚ್.ಪಿ.ಧರ್ಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಂಗಲ ಎಂ.ಯೋಗೀಶ್, ಸಹಾಯಕ ಪ್ರಾಧ್ಯಾಪಕರುಗಳಾದ ಸುಕೇಶ್, ದಯಾನಂದ್, ಮೋಹನ್‌ದಾಸ್, ವಾಣಿ, ಶ್ರೆದೇವಿ, ರಕ್ಷಿತಾ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ