ಬಸರಾಳು, ದೇವಲಾಪುರ ಹೋಬಳಿಗೆ ಕಾವೇರಿ ನೀರು: ಶಾಸಕ ಪಿ.ರವಿಕುಮಾರ್

KannadaprabhaNewsNetwork |  
Published : Jul 27, 2025, 12:00 AM IST
೨೬ಕೆಎಂಎನ್‌ಡಿ-೪ಮಂಡ್ಯ ತಾಲೂಕು ಬಸರಾಳು ಗ್ರಾಮದಲ್ಲಿ ೧೬ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಇಂದಿರಾಗಾಂಧಿ ವಸತಿ ಶಾಲಾ ಕಟ್ಟಡವನ್ನು ಶಾಸಕ ಪಿ.ರವಿಕುಮಾರ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಸರ್ಕಾರಿ ವಸತಿ ಶಾಲೆಯನ್ನು ಪ್ರಾರಂಭಿಸಲು ಯೋಜನೆ ರೂಪಿಸಿತ್ತು. ಅದರಂತೆ ಈಗಾಗಲೇ ಕಟ್ಟಡ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಖಾಸಗಿ ಶಾಲೆಗಳು ಹೆಚ್ಚಿವೆ. ಆದರೂ, ಸರ್ಕಾರದ ವಸತಿ ಶಾಲೆಗಳಿಗೆ ದಾಖಲಾತಿ ಪಡೆಯಲು ಹೆಚ್ಚಿನ ಪೈಪೋಟಿ ಇದೆ. ಇಲ್ಲಿ ಎಲ್ಲ ಸೌಲಭ್ಯಗಳೂ ಇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀರಂಗಪಟ್ಟಣದ ಕಾವೇರಿ ನದಿಯಿಂದ ಬಸರಾಳು, ಹೊಣಕೆರೆ, ದೇವಲಾಪುರ ಸುತ್ತಮುತ್ತಲ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ೧೨೦೦ ಕೋಟಿ ರು. ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಭರವಸೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ತಾಲೂಕಿನ ಬಸರಾಳು ಗ್ರಾಮದಲ್ಲಿ ೧೬ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಇಂದಿರಾ ಗಾಂಧಿ ವಸತಿ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿ, ಬಸರಾಳು, ದೇವಲಾಪುರ ವ್ಯಾಪ್ತಿಯಲ್ಲಿ ಕಾವೇರಿ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಈ ಯೋಜನೆ ರೂಪಿಸಿದ್ದು, ಈಗಾಗಲೇ ಡಿಪಿಆರ್ ಕೂಡ ಆಗಿದೆ. ಒಂದು ವರ್ಷದಲ್ಲಿ ಈ ಯೋಜನೆ ಕಾರ್ಯಗತಗೊಳ್ಳಲಿದೆ ಎಂದರು.

ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಸರ್ಕಾರಿ ವಸತಿ ಶಾಲೆಯನ್ನು ಪ್ರಾರಂಭಿಸಲು ಯೋಜನೆ ರೂಪಿಸಿತ್ತು. ಅದರಂತೆ ಈಗಾಗಲೇ ಕಟ್ಟಡ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಖಾಸಗಿ ಶಾಲೆಗಳು ಹೆಚ್ಚಿವೆ. ಆದರೂ, ಸರ್ಕಾರದ ವಸತಿ ಶಾಲೆಗಳಿಗೆ ದಾಖಲಾತಿ ಪಡೆಯಲು ಹೆಚ್ಚಿನ ಪೈಪೋಟಿ ಇದೆ. ಇಲ್ಲಿ ಎಲ್ಲ ಸೌಲಭ್ಯಗಳೂ ಇವೆ. ಜೊತೆಗೆ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ಇದರಿಂದಾಗಿ ಸರ್ಕಾರಿ ಶಾಲೆಯ ಮಕ್ಕಳು ರ್ಯಾಂಕ್ ಪಡೆಯುತ್ತಿರುವುದನ್ನು ನೋಡುತ್ತಿದ್ದೇವೆ ಎಂದು ವಿವರಿಸಿದರು.

ಮಂಡ್ಯ ವಿಧಾನ ಸಭಾ ವ್ಯಾಪ್ತಿಯ ಬಸರಾಳು, ತಂಗಳಗೆರೆ, ತುಂಬಕೆರೆ ವಸತಿ ಶಾಲೆಗಳಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ದಾಖಲಾತಿ ನೀಡಲಾಗುತ್ತಿದೆ. ಇದು ಶಿಕ್ಷಣ ಇಲಾಖೆಯ ನಿಯಮವೂ ಆಗಿದೆ. ಪೋಷಕರು ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಾಸಕರಿಂದ ಶಿಫಾರಸ್ಸು ಪತ್ರ, ಅಥವಾ ದೂರವಾಣಿ ಕರೆ ಮಾಡಿಸಿದರೆ ದಾಖಲಾತಿ ಮಾಡಿಕೊಳ್ಳುವುದಿಲ್ಲ. ಈ ಬಗ್ಗೆ ಯಾರೂ ಅನ್ಯತಾ ಭಾವಿಸಿದೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಹೆಚ್ಚು ಅಂಕ ಪಡೆಯುವಂತೆ ಪ್ರೇರೇಪಿಸಿ ಎಂದರು.

ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿ ಎಂದು ಸಲಹೆ ನೀಡಿದ ಅವರು, ಖಾಸಗಿ ಶಾಲೆಗಳ ವ್ಯಾಮೋಹ ಕೈಬಿಡುವಂತೆ ಪೋಷಕರಿಗೆ ಸಲಹೆ ನೀಡಿದರು.

ಅಲ್ಪಸಂಖ್ಯಾತ ಇಲಾಖೆ ಸಚಿವ ಜಮೀರ್ ಅಹಮದ್ ಅವರೂ ಸಹ ನಮ್ಮ ತಾಲೂಕಿನ ಮಕ್ಕಳಿಗೆ ಇನ್ನೂ ಹೆಚ್ಚಿನ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಅಬ್ದುಲ್ ಕಲಾಂ ವಸತಿ ಶಾಲೆಯನ್ನು ಮಂಜೂರು ಮಾಡಿದ್ದಾರೆ. ಅದು ಸದ್ಯದಲ್ಲೇ ಮಂಡ್ಯ ನಗರದಲ್ಲಿ ಪ್ರಾರಂಭವಾಗಿದೆ. ತಾಲೂಕಿನ ಬಿ. ಹೊಸೂರು ಗ್ರಾಮದಲ್ಲಿ ೩೦ ಕೋಟಿ ರು. ವೆಚ್ಚದಲ್ಲಿ ಮುಂದಿನ ದಿನಗಳಲ್ಲಿ ಶಾಲೆಗೆ ಶಂಕುಸ್ಥಾಪನೆ ಮಾಡಿ ಉದ್ಘಾಟಿಸಲಾಗುವುದು ಎಂದರು.

ಈಗಾಗಲೇ ಬಸರಾಳು ಸುತ್ತಮುತ್ತಲ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ೧೦೦ ಕೋಟಿ ರು. ವೆಚ್ಚದಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮುಂದಿನ ಒಂದು ವರ್ಷದೊಳಗೆ ಎಲ್ಲ ರಸ್ತೆಗಳನ್ನೂ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಬಿ.ಹೊಸೂರು ಗ್ರಾಮದಲ್ಲಿ ಶಾಲೆಗೆ ಹೋಗುವ ರಸ್ತೆ ಸರಿಯಿಲ್ಲದ ಕಾರಣ ಸಮಸ್ಯೆಯಾಗಿರುವುದನ್ನು ನೋಡಿದ್ದೇನೆ. ಅದನ್ನೂ ಸಹ ಅಭಿವೃದ್ಧಿಪಡಿಸಿ ವಿದ್ಯಾರ್ಥಿಗಳು ಮುಖ್ಯ ರಸ್ತೆಯಿಂದ ಶಾಲೆಗೆ ಹೋಗುವ ರಸ್ತೆಯ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಕಾವ್ಯಶ್ರೀ, ತಾಪಂ ಮಾಜಿ ಸದಸ್ಯ ಮಂಜೇಶ್‌ಗೌಡ, ಬಸರಾಳು ಗ್ರಾಪಂ ಅಧ್ಯಕ್ಷ ಜವರಯ್ಯ, ಸದಸ್ಯರಾದ ರಾಜು, ಶಾಂತಮ್ಮ, ಪದ್ಮ, ಪ್ರದೀಪ್, ಇಂದಿರಾ ಗಾಂಧಿ ವಸತಿ ಶಾಲೆ ಪ್ರಾಂಶುಪಾಲ ಆರ್.ಪ್ರಭಾರ್, ಮುಖಂಡರಾದ ನಾಗೇಶ್, ಶಂಕರೇಗೌಡ, ಕೃಷ್ಣೇಗೌಡ, ದ್ಯಾಪ್ಸಂದ್ರ ಉಮೇಶ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ