ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಚಂದಗಾಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಗಳಿಗೆ ಜಿಪಂ ಸಿಇಒ ಕೆ.ಆರ್.ನಂದಿನಿ ಭೇಟಿ ನೀಡಿ ಬಿಸಿಯೂಟ ಯೋಜನೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.ಗ್ರಾಮಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಅವರು, ಎರಡೂ ಶಾಲೆಗಳಲ್ಲಿನ ಶೌಚಾಲಯ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಈಗಾಗಲೇ ಶೌಚಾಲಯ ನಿರ್ಮಾಣ ಮಾಡಲು ಅನುಮೋದನೆಯಾಗಿದ್ದರೂ ಸಹ ಕಾಮಗಾರಿ ಪ್ರಾರಂಭಿಸಿಲ್ಲದಿರುವ ಬಗ್ಗೆ ಸಂಬಂಧಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡು ತ್ವರಿತವಾಗಿ ಶೌಚಾಲಯ ನಿರ್ಮಿಸುವಂತೆ ಸೂಚಿಸಿದರು.
ಮಕ್ಕಳು ಕಡ್ಡಾಯವಾಗಿ ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳಿ. ಗೈರಾದ ಮಕ್ಕಳ ಪೋಷಕರನ್ನು ಕರೆದು ಮಾತನಾಡಿಸುವುದರೊಂದಿಗೆ ಮಕ್ಕಳು ಶಾಲೆ ಬಿಡದಂತೆ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳೆದ ಸಾಲಿಗಿಂತ ಉತ್ತಮ ಪ್ರಗತಿ ಸಾಧಿಸುವಂತೆ ಶಿಕ್ಷಕರಿಗೆ ಸಲಹೆ ನೀಡಿದರು.ಬಿಸಿಯೂಟ ಯೋಜನೆಯಡಿ ಮಕ್ಕಳಿಗೆ ನೀಡುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ಮಕ್ಕಳ ಅಭಿಪ್ರಾಯ ಪಡೆದರು. ಮೊಟ್ಟೆ ವಿತರಣೆ ಹಾಗೂ ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆ ಹಣ್ಣು ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದರು. ಉತ್ತಮ ಗುಣಮಟ್ಟ ಮೊಟ್ಟೆಗಳನ್ನು ವಿತರಿಸುವಂತೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ಸೂಚಿಸಿದರು.
ದಾನಿಗಳ ನೆರವಿನಿಂದ ಶಾಲೆಯ ಅಭಿವೃದ್ಧಿ:ಚಂದಗಾಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳ ನೆರವಿನಿಂದ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿಯನ್ನು ಸಹ ಪ್ರಾರಂಭಿಸಲಾಗಿದೆ ಎಂದರು.
ಬಸ್ ಸಮಸ್ಯೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ:ಚಂದಗಾಲು ಗ್ರಾಮದ ಶಾಲೆಗಳಿಗೆ ಅಕ್ಕ ಪಕ್ಕದ ಗ್ರಾಮಗಳಾದ ಪುಟ್ಟಿಕೊಪ್ಪಲು, ಬಿಳಿಗುಲಿ, ಉಪ್ಪಾರಕೊಪ್ಪಲು ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದು, ಶಾಲೆ ಆರಂಭವಾಗುವ ಮತ್ತು ಮುಕ್ತಾಯ ಸಮಯಕ್ಕಿಂತ ವಿಳಂಬವಾಗಿ ಬರುತ್ತಿದೆ. ಇದರಿಂದ ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗೆ ಬರಲು ಆಗುತ್ತಿಲ್ಲ ಹಾಗೂ ಶಾಲೆ ಬಿಟ್ಟ ನಂತರ ಒಂದು ಗಂಟೆ ಕಾಯುವ ಸ್ಥಿತಿ ಎದುರಾಗಿದೆ ಎಂದು ವಿದ್ಯಾರ್ಥಿಗಳು ದೂರಿದರು. ಈ ಬಗ್ಗೆ ಸಾರಿಗೆ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿ ಸಮಸ್ಯೆ ಸರಿಪಡಿಸಲು ತಿಳಿಸಿದರು.
೧೦೯೮ ಸಹಾಯವಾಣಿ ಬಗ್ಗೆ ಅರಿವು ಮೂಡಿಸಿ:ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಇಒ ಕೆ.ಆರ್.ನಂದಿನಿ, ಬಾಲ್ಯ ವಿವಾಹ ತಡೆಗಟ್ಟುವ ಸಲುವಾಗಿ ತೆರೆಯಲಾಗಿರುವ ೧೦೯೮ ಸಹಾಯವಾಣಿ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವಂತೆ ಹಾಗೂ ಮಕ್ಕಳಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುವಂತಹ ತರಬೇತಿ ಕಾರ್ಯಕ್ರಮ ಆಯೋಜಿಸುವಂತೆ ಶಾಲೆಯ ಮುಖ್ಯ ಶಿಕ್ಷಕರಿಗೆ ಸಲಹೆ ನೀಡಿದರು.
ಚಂದಗಾಲು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಿದ್ಯಾ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ್, ಶಾಲೆಯ ಮುಖ್ಯ ಶಿಕ್ಷಕಿ ಜಯಶೀಲಾ ಸೇರಿದಂತೆ ಇತರರು ಹಾಜರಿದ್ದರು.