ಕನ್ನಡಪ್ರಭ ವಾರ್ತೆ ಮಂಡ್ಯ
ಹಾವು ಮತ್ತು ನಾಯಿ ಕಡಿತದ ಚುಚ್ಚುಮದ್ದು ಮತ್ತು ಔಷಧವನ್ನು ಆಸ್ಪತ್ರೆಗಳಲ್ಲಿ ದಾಸ್ತಾನು ಇಟ್ಟುಕೊಳ್ಳುವಂತೆ ನೋಡಿಕೊಳ್ಳಿ ಎಂದು ವೈದ್ಯಾಧಿಕಾರಿಗಳಿಗೆ ಜಿಪಂ ಸಿಇಒ ಕೆ.ಆರ್.ನಂದಿನಿ ಸೂಚಿಸಿದರು.ತಾಲೂಕಿನ ಚಂದಗಾಲು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಾಗಿ ಹಾವು ಹಾಗೂ ನಾಯಿ ಕಡಿತದಿಂದ ರೈತರು ಬಳಲುತಿದ್ದಾರೆ. ಅಂತಹವರಿಗೆ ಶೀಘ್ರ ಔಷಧ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಸಲಹೆ ನೀಡಿದರು.
ಔಷಧಗಳು ಹಾಗೂ ಅವುಗಳ ಮುಕ್ತಾಯ ದಿನಾಂಕದ ಬಗ್ಗೆ ಮಾಹಿತಿ ಪಡೆದರು. ಸೂಕ್ತ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಚಿಕಿತ್ಸೆ ದೊರೆತದಲ್ಲಿ ರೋಗಿಗಳು ನಗರ ಪ್ರದೇಶದ ಆಸ್ಪತ್ರೆಗಳಿಗೆ ಅಲೆಯುವುದು ತಪ್ಪುತ್ತದೆ ಎಂದು ಸಲಹೆ ನೀಡಿದರು.ಆಶಾ ಕಾರ್ಯಕರ್ತರು ತಮ್ಮ ವ್ಯಾಪ್ತಿಯ ಮನೆಗಳಿಗೆ ಖುದ್ದು ಭೇಟಿ ನೀಡಿ ಡೆಂಘೀ, ಮಲೇರಿಯಾ ಜ್ವರಗಳ ಬಗ್ಗೆ ಅರಿವು ಮೂಡಿಸಬೇಕು. ಗರ್ಭಿಣಿ ಸ್ತ್ರೀಯರಿಗೆ ಕಾಲ ಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವಂತೆ ಹಾಗೂ ಮಕ್ಕಳಿಗೆ ನಿಗದಿತ ಅವಧಿಯಲ್ಲಿ ಲಸಿಕೆಗಳನ್ನು ಹಾಕಿಸುವಂತೆ ಮಾಹಿತಿ ನೀಡಿದರು.
ಹೊಸ ಕಟ್ಟಡ ನಿರ್ಮಾಣ ಶೀಘ್ರ ಪ್ರಾರಂಭಿಸಲು ಸೂಚನೆ:ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಹಳೆಯದಾಗಿದ್ದು, ಹೊಸ ಕಟ್ಟಡ ಮಂಜೂರಾಗಿರುತ್ತದೆ. ಪ್ರಸ್ತುತ ಆಸ್ಪತ್ರೆ ಇರುವ ಸ್ಥಳದ ಸಮಸ್ಯೆ ನ್ಯಾಯಾಲಯದಲ್ಲಿರುವುದರಿಂದ ಈಗಾಗಲೇ ಮತ್ತೊಂದು ನಿವೇಶನ ಮಂಜೂರಾಗಿರುತ್ತದೆ. ಆ ಸ್ಥಳದಲ್ಲಿ ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಹೇಮಂತ್‌ರಾಜ್ ಮಾಹಿತಿ ನೀಡಿದರು.
ಇದೇ ವೇಳೆ ಸಿಬ್ಬಂದಿ ಹಾಜರಾತಿ, ಔಷಧ ಸಂಗ್ರಹಣೆ, ಒಳ ಹಾಗೂ ಹೊರ ರೋಗಿಗಳಿಗೆ ಸಂಬಂಧಿಸಿದ ದಾಖಲಾತಿಗಳು, ಆಸ್ಪತ್ರೆಯ ಸ್ವಚ್ಚತೆ, ತ್ಯಾಜ್ಯಗಳ ನಿರ್ವಹಣೆ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಗೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಿದರು.ಪಿಡಿಒ ವಿದ್ಯಾ, ಗ್ರಾಪಂ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಇತರರು ಹಾಜರಿದ್ದರು.