ಕನ್ನಡಪ್ರಭ ವಾರ್ತೆ ಮಂಡ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಪರಮಾಪ್ತ, ಡಾ.ರಾಮ ಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್.ಶಿವಣ್ಣ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಾಮನಿರ್ದೇಶನ ಮಾಡುವಂತೆ ಕಾಂಗ್ರೆಸ್ ಮುಖಂಡ ಶಿವನಂಜು ಮನವಿ ಮಾಡಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ ಹುಟ್ಟುಹಬ್ಬದ ಅಂಗವಾಗಿ ನಗರದ ಮಿಮ್ಸ್ ಆವರಣದಲ್ಲಿರುವ ಮಮತೆಯ ಮಡಿಲು ಅನ್ನದಾಸೋಹ ಕೇಂದ್ರದಲ್ಲಿ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಆಹಾರ ವಿತರಿಸಿ ಮಾತನಾಡಿದರು.
ಲೋಹಿಯಾ ವಿಚಾರ ವೇದಿಕೆ ಮೂಲಕ ಬಿ.ಎಸ್.ಶಿವಣ್ಣ ಅವರು ಜಿಲ್ಲೆಯಲ್ಲಿ ಸಾಮಾಜಿಕ ಕಳಕಳಿ ಇಟ್ಟುಕೊಂಡು ಕೆಲಸ ಮಾಡಿದ್ದಾರೆ. ತುಳಿತಕ್ಕೊಳಗಾದವವರು, ಬಡವರಿಗೆ ಸಾಕಷ್ಟು ನೆರವು ನೀಡಿ ಮೇಲೆತ್ತುವ ಕೆಲಸ ಮಾಡಿದ್ದಾರೆ ಎಂದರು.ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್ ಮಾತನಾಡಿ, ಶಿವಣ್ಣ ಅವರು ದಡದಪುರ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ, ವಿದ್ಯಾರ್ಥಿಗಳಿಗೆ ಪರಿಕರ ವಿತರಣೆ, ಗ್ರಾಮದಲ್ಲಿ ಶೌಚಾಲಯ ನಿರ್ಮಾಣ, ಹೊಗೆಮುಕ್ತ ಹಳ್ಳಿಗಳ ನಿರ್ಮಾಣಕ್ಕೆ ಗ್ಯಾಸ್ ವಿತರಣೆ ಸೇರಿದಂತೆ ಹತ್ತು ಹಲವು ಸಮಾಜಮುಖಿ ಕೆಲಸ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡರಾದ ಎನ್. ಸೋಮಶೇಖರ್, ಸಿ.ಎಂ.ದ್ಯಾವಪ್ಪ, ಹಳುವಾಡಿ ವೆಂಕಟೇಶ್, ನಟರಾಜು, ಮಹೇಶ್, ಚನ್ನೇಗೌಡ ಇತರರು ಭಾಗವಹಿಸಿದ್ದರು.ನಾಳೆ ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ಎಚ್ಚರಿಕೆ
ಮಂಡ್ಯಚುನಾವಣೆಯಲ್ಲಿ ಮಾತು ಕೊಟ್ಟಂತೆ ನಡೆದಿದ್ದೇವೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತರಿಗೆ ಕೊಟ್ಟ ಮಾತನ್ನು ಉಳಿಸದೆ ವಂಚಿಸಿರುವ ಪರಿಶಿಷ್ಟರ ವಿರೋಧಿ ಮುಖ್ಯಮಂತ್ರಿಗಳಿಗೆ ಮದ್ದೂರಿನಲ್ಲಿ ಜು.೨೮ರಂದು ಕಪ್ಪುಪಟ್ಟಿ ಪ್ರದರ್ಶನ ಮಾಡುವುದಾಗಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಅಂದಾನಿ ಸೋಮನಹಳ್ಳಿ ಎಚ್ಚರಿಕೆ ನೀಡಿದರು.
ಪರಿಶಿಷ್ಟ ಜಾತಿ ಪಂಗಡಗಳಿಗೆ ಮೀಸಲಿಟ್ಟಿದ್ದ ಹಣ ದುರ್ಬಳಕೆಯಾಗದಂತೆ ಅನ್ಯ ಉದ್ದೇಶಗಳಿಗೆ ಬಳಕೆ ಮಾಡದಂತೆ ಎಸ್ಸಿ, ಎಸ್ಟಿ ಉಪ ಕಾಯ್ದೆಯಡಿ ಅನ್ಯ ಉದ್ದೇಶಗಳಿಗೆ ಮೀಸಲಿರಿಸದ ಹಣವನ್ನು ಬಳಸಿಕೊಂಡು ವಿಧಾನ ಸಭಾ ಚುನಾವಣೆಯಲ್ಲಿ ಮತ ಗಳಿಸುವ ಉದ್ದೇಶದಿಂದ ಮುಖಂಡರಿಗೆ ಮಾತು ಕೊಟ್ಟು ವಂಚನೆ ಮಾಡಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.ಸುಪ್ರೀಂ ಕೋರ್ಟ್‌ನಿಂದ ದುರ್ಬಲಗೊಂಡಿರುವ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತಂದು ಗೆಜೆಟ್ ನೋಟಿಫಿಕೇಶಷನ್ ಹೊರಡಿಸಬೇಕು ಮತ್ತು ದಲಿತರ ಭೂ ರಕ್ಷಣೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಇರುವ ಖಾಲಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ಹುದ್ದೆ ಪಡೆದಿರುವವರನ್ನು ಕೂಡಲೇ ವಜಾಗೊಳಿಸಬೇಕು ಮತ್ತು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.ಮುಖಂಡರಾದ ಮೂರ್ತಿ ಕಂಚಿನಕೋಟೆ, ಶಿವು ಎಂ., ಟಿ.ಡಿ. ಬಸವರಾಜು, ಮುರುಗನ್ ಗೋಷ್ಠಿಯಲ್ಲಿದ್ದರು.