ಹೊಸಕೋಟೆ: ತಾಲೂಕಿನಲ್ಲಿ ಒಟ್ಟು 40 ಗುತ್ತಿಗೆದಾರರು 260 ಕೋಟಿ ವೆಚ್ಚದ ಜಲ್ ಜೀವನ್ ಮಿಷನ್ ಯೋಜನೆ ಕಾಮಗಾರಿ ನಡೆದಿದ್ದು 30 ವರ್ಷಗಳ ಕಾಲ ಯಾವುದೇ ರೀತಿಯ ಸಮಸ್ಯೆ ಆಗಬಾರದು. ಗುಣಮಟ್ಟದ ಕೆಲಸ ಆಗಿದ್ದರೆ ಮಾತ್ರ ಬಿಲ್ ಮಂಜೂರು ಮಾಡಿ ಎಂದು ಶಾಸಕ ಶರತ್ ಬಚ್ಚೇಗೌಡ ಪಿಡಿಒಗಳಿಗೆ ಸೂಚಿಸಿದರು. ನಗರದ ತಾಪಂ ಸಭಾಂಗಣದಲ್ಲಿ ತಾಲೂಕಿನ 28 ಪಂಚಾಯತಿಗಳ ಪಿಡಿಒ, ಜೆಜೆಎಂ ಯೋಜನೆ ಕಾಮಗಾರಿಯ ಗುತ್ತಿಗೆದಾರರು ಹಾಗೂ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರು ಸ್ಥಳೀಯ ಪಂಚಾಯತಿ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಹಾಗೂ ಸಹಕಾರ ಪಡೆದು ಮುಂದಿನ 30 ವರ್ಷ ಯಾವುದೇ ಸಮಸ್ಯೆ ಆಗದಂತೆ ಗುಣಮಟ್ಟದ ಕೆಲಸ ಮಾಡಬೇಕು ಎಂದು ಹೇಳಿದರು. ನಾಲ್ಕು ತಿಂಗಳ ಹಿಂದೆ ಕೊರೆಸಿದ ಕೊಳವೆ ಬಾವಿಗೆ ಇನ್ನೂ ಮೋಟರ್ ಪಂಪ್ ಸೆಟ್ ಅಳವಡಿಸಿಲ್ಲ. ಕೊರೆಸಿದ ಕೊಳವೆ ಬಾವಿಯೊಳಗೆ ಮಣ್ಣು, ಕಲ್ಲು ಬಿದ್ದು ಮುಚ್ಚಿಹೋದಲ್ಲಿ ಯಾರು ಜವಾಬ್ದಾರಿ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಶಾಸಕ ಶರತ್ ಬಚ್ಚೇಗೌಡ, ವಿದ್ಯುತ್ ಸಮಸ್ಯೆ, ಪೈಪ್ ಗಳ ಸಮಸ್ಯೆ, ಗುತ್ತಿಗೆದಾರರ ಸಮಸ್ಯೆ ಎಲ್ಲವನ್ನು ಜಲ್ ಜೀವನ್ ಮಿಷನ್ ಯೋಜನೆಯ ಅಧಿಕಾರಿಗಳೇ ಉಸ್ತುವಾರಿ ವಹಿಸಬೇಕು ಎಂದು ಹೇಳಿದರು. ಜಲ್ ಜೀವನ್ ಯೋಜನೆಯ ಬಹಳಷ್ಟು ಗುತ್ತಿಗೆದಾರರು ಹೊರಗಿನಿಂದ ಬಂದವರಾಗಿದ್ದು, ಮುಂದಿನ ದಿನಗಳಲ್ಲಿ ಯೋಜನೆಯ ಗುಣಮಟ್ಟದಲ್ಲಿ ಯಾವುದಾದರೂ ಸಮಸ್ಯೆ ಬಂದಲ್ಲಿ ಅವರೇ ಜವಾಬ್ದಾರರಾಗಿರುತ್ತಾರೆ. ಆದುದರಿಂದ ಕಾಮಗಾರಿ ಮುಗಿದ ನಂತರ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವ ಸಂದರ್ಭದಲ್ಲಿ ಶೇಕಡ 15ರಷ್ಟು ಬಿಲ್ ಹಣ ತಡೆ ಹಿಡಿದು ಒಂದು ವರ್ಷ ನಂತರವಷ್ಟೇ ಉಳಿಕೆ ಹಣ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು. ಸಭೆಯಲ್ಲಿ ಜಲ್ ಜೀವನ್ ಮಿಷನ್ ಯೋಜನಾಧಿಕಾರಿ ಜಭಾನ್, ಎಇಇ ಮಹದೇವ್, ತಾಪಂ ಇಒ ಚಂದ್ರಶೇಖರ್, ಇಂಜಿನಿಯರ್ ದಿವ್ಯ ಇತರರು ಹಾಜರಿದ್ದರು. ಫೋಟೋ: 9 ಹೆಚ್‌ಎಸ್‌ಕೆ 3 ಹೊಸಕೋಟೆ ತಾಲೂಕು ಪಂಚಾಯತಿಯಲ್ಲಿ ಜಲ್ ಜೀವನ್ ಮಿಷನ್ ಯೋಜನೆ ಕಾಮಗಾರಿ ಸಂಭAದ ಹಮ್ಮಿಕೊಳ್ಳಲಾಗಿದ್ದ ಪಿಡಿಒ ಹಾಗೂ ಗುತ್ತಿಗೆದಾರರ ಸಭೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಮಾತನಾಡಿದರು.