ಹಕ್ಕಿ ಜ್ವರ ಭೀತಿ - ಕೋಳಿ ಮಾಂಸ ಖರೀದಿಗೆ ಹಿಂದೇಟು : ಬೇಡಿಕೆ ಕಡಿಮೆಯಾಗುತ್ತಿದ್ದಂತೆಯೇ ಬೆಲೆ ಕುಸಿತ

KannadaprabhaNewsNetwork | Updated : Mar 03 2025, 10:18 AM IST

ಸಾರಾಂಶ

ಬೇಡಿಕೆ ಕಡಿಮೆಯಾಗುತ್ತಿದ್ದಂತೆಯೇ ಬೆಲೆ ಕೂಡಾ ದಿಢೀರ್‌ ಕುಸಿತವಾಗಿದೆ. ಜನರು ಮೀನು ಸೇರಿದಂತೆ ಇತರ ಬದಲಿ ಮಾಂಸಗಳ ಖರೀಸುತ್ತಿದ್ದು, ಕೋಳಿ ಮಾಂಸ ಮಾರಾಟಗಾರರಿಗೆ ಭಾರಿ ನಷ್ಟ ಉಂಟಾಗಿದೆ.ಹಕ್ಕಿ ಜ್ವರದಿಂದಾಗಿ ವ್ಯಾಪಾರ ಕುಸಿದಿದೆ. ಕೋಳಿ ಮಾಂಸ ಮಾರಾಟ ಶೇ.40ರಿಂದ 50ರಷ್ಟು ಕುಸಿದಿದೆ.

 ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈಗಾಗಲೇ ತಾಲೂಕಿನ ವರದಹಳ್ಳಿಯಲ್ಲಿ ನೂರಾರು ಕೋಳಿಗಳ ಮಾರಣಹೋಮ ಮಾಡಲಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಸೇರಿದಂತೆ ಎಲ್ಲಡೆ ಹಕ್ಕಿ ಜ್ವರದ ಭೀತಿಯಿಂದ ಕೋಳಿ ಮಾರಾಟದ ಮೇಲೆ ತೀವ್ರ ಪರಿಣಾಮ ಬೀರಿದೆ. ಆರೋಗ್ಯದ ಕಾಳಜಿಯಿಂದಾಗಿ ಜನರು ಕೋಳಿ ಮಾಂಸ ಖರೀದಿಗೆ ಹಿಂದೇಟು ಹಾಕಿದ್ದಾರೆ.

ದರ ದಿಢೀರ್‌ ಕುಸಿತ ಬೇಡಿಕೆ ಕಡಿಮೆಯಾಗುತ್ತಿದ್ದಂತೆಯೇ ಬೆಲೆ ಕೂಡಾ ದಿಢೀರ್‌ ಕುಸಿತವಾಗಿದೆ. ಜನರು ಮೀನು ಸೇರಿದಂತೆ ಇತರ ಬದಲಿ ಮಾಂಸಗಳ ಖರೀಸುತ್ತಿದ್ದು, ಕೋಳಿ ಮಾಂಸ ಮಾರಾಟಗಾರರಿಗೆ ಭಾರಿ ನಷ್ಟ ಉಂಟಾಗಿದೆ.ಹಕ್ಕಿ ಜ್ವರದಿಂದಾಗಿ ವ್ಯಾಪಾರ ಕುಸಿದಿದೆ. ನಗರದ ಕೋಳಿ ಮಾರಾಟಗಾರ ಷರೀಪ್ ಪ್ರತಿಕ್ರಿಯೆ ನೀಡಿ, ಶಂಕಿತ ವೈರಸ್‌ನಿಂದ ಕೋಳಿ ಸಾವು ವರದಿಯಾದ ನಂತರ ಮಾರಾಟ ಶೇ.40ರಿಂದ 50ರಷ್ಟು ಕುಸಿದಿದೆ ಎಂದರು.

ಸದ್ಯ ಕೋಳಿ ಬೆಲೆಯಲ್ಲಿ ತೀವ್ರ ಕುಸಿವಾಗಿದೆ. ನಗರದಲ್ಲಿ ಬ್ರಾಯ್ಲರ್ ಕೋಳಿ ಬೆಲೆ ಕೆಜಿಗೆ 270 ರೂ.ಗಳಿಂದ 200 ರೂ.ಗಳಿಗೆ ಇಳಿದಿವೆ. ಆದರೂ ಮಾರಾಟ ಕಡಿಮೆಯಾಗಿದೆ. ಗ್ರಾಮಾಂತರದಲ್ಲಿ ಬೆಲೆ ಪ್ರತಿ ಕೆಜಿಗೆ 240 ರೂ.ಗಳಿಂದ 180 ರೂ.ಗಳಿಗೆ ಇಳಿದಿವೆ. ನಾಟಿ ಕೋಳಿಗಳನ್ನಂತೂ ಕೇಳುವವರೇ ಇಲ್ಲದಂತಾಗಿದೆ.ಕೋಳಿ ಸಾಕಣೆದಾರರಿಗೆ ನಷ್ಟ

ಜಿಲ್ಲೆಯ ಕೋಳಿ ಸಾಕಣೆದಾರರು ಈಗಾಗಲೇ ಭಾರಿ ನಷ್ಟದಲ್ಲಿದ್ದು, ತಮ್ಮ ವ್ಯವಹಾರಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ತಾಲ್ಲೂಕಿನ ವರದಹಳ್ಳಿಯಲ್ಲಿ ಕೋಳಿ ಸಾವು ಮತ್ತು ಮಾರಾಟ ಕುಸಿತವು ರೈತರಲ್ಲಿ ಭಯವನ್ನು ಉಂಟುಮಾಡಿದೆ. ಹೊಸದಾಗಿ ಸಾಕಣೆ ಮಾಡಲು ಕೂಡಾ ಯೋಚಿಸಬೇಕಾಗಿ ಬಂದಿದೆ. ಜಿಲ್ಲೆಯಲ್ಲಿ ವರದಹಳ್ಳಿ ಬಿಟ್ಟರೆ ಬೇರೆಡೆ ಎಲ್ಲೂ ಕೋಳಿಗೆ ಸಂಬಂಧಿಸಿದ ಅಸಹಜ ಸಾವುಗಳು ವರದಿಯಾಗಿಲ್ಲ. ಆದರೂ, ಜಿಲ್ಲೆಯಲ್ಲಿ ಹಕ್ಕಿ ಜ್ವರ ಹರಡುತ್ತಿರುವ ವದಂತಿಯಿಂದ ಮಾಂಸ ಪ್ರಿಯರು ಕೋಳಿ ಮಾಂಸ ತಿನ್ನುವುದರಿಂದ ದೂರ ಉಳಿದಿದ್ದಾರೆ. ಹಕ್ಕಿ ಜ್ವರದ ಭೀತಿಯಿಂದಾಗಿ ಜಿಲ್ಲೆಯ ಚಿಲ್ಲರೆ ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ಬೆಲೆ ಕುಸಿದಿದೆ. ವಿವಿಧ ಚಿಲ್ಲರೆ ಅಂಗಡಿಗಳಲ್ಲಿ ಕೋಳಿ ಮಾಂಸದ ಬೆಲೆ ಕೆಜಿಗೆ 20 ರಿಂದ 50 ರೂ.ಗಳಷ್ಟು ಕಡಿಮೆಯಾಗಿದೆ.

ಮೊಟ್ಟೆ ದರ, ಮಾರಾಟ ಕುಸಿತ

ಹಕ್ಕಿಜ್ವರದ ಆತಂಕದ ಹಿನ್ನೆಲೆ ಕೋಳಿ ಸಾಕಾಣಿಕೆ ಮೇಲೆ ಭಾರಿ ಹೊಡೆತ ಕೊಟ್ಟಿದೆ. ರೋಗದ ಭೀತಿ ನಡುವೆ ಕೋಳಿ ಮಾಂಸ ಹಾಗೂ ಮೊಟ್ಟೆಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.ಕೋಳಿ ಮಾಂಸ ಮತ್ತು ಮೊಟ್ಟೆಗಳ ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದಾರೆ. ಬೇಡಿಕೆ ತಗ್ಗಿದ ಬೆನ್ನಲ್ಲೇ ಬೆಲೆ ಇಳಿಕೆಮಾಡಿದರೂ ಯಾರು ಕೊಳ್ಳಲು ಮುಂದೆ ಬರುತ್ತಿಲ್ಲ. ಶಿವರಾತ್ರಿಹಬ್ಬ ಮುಗಿದ ನಂತರ ಬರುವ ಮೊದಲ ಭಾನುವಾರವಾಗಿದ್ದರಿಂದ ಇಂದು ಬಹಳ ಜನ ಕೋಳಿ ಮಾಂಸ ಖರೀದಿಗೆ ಬರುತ್ತಾರೆಂದು ವ್ಯಾಪಾರಿಗಳು ಭಾವಿಸಿದ್ದರು. ಆದರೆ ಅರ್ಧಕ್ಕರ್ಧ ಸಹಾ ಮಾರಾಟವಾಗಿಲ್ಲ. ಸಾಲ ಮಾಡಿ ತಂದಿರುವ ಕೋಳಿಗಳು ಬಿಕರಿಯಾಗದೇ ಉಳಿದಿವೆ. ಸಾಲ ತೀರಿಸುವುದು ಹೇಗೆ ಎಂದು ವ್ಯಾಪಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ.ಕೋಳಿ ಮಾಂಸ ತಿನ್ನಬಹುದು

ಕೋಳಿ ಮಾಂಸ ಉತ್ಪನ್ನಗಳ ಬಗ್ಗೆ ಸಾರ್ವಜನಿಕರಲ್ಲಿರುವ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಜಾಗೃತಿ ಮೂಡಿಸಲಾಗುತ್ತಿದೆ. ಹಕ್ಕಿಜ್ವರದ ಭಯದಲ್ಲಿ ಕೋಳಿ ಮಾಂಸ ಸೇವನೆಗೆ ಅಂಜುವ ಅಗತ್ಯವಿಲ್ಲ. ಬೇಯಿಸಿದ ಕೋಳಿ ಮಾಂಸದಲ್ಲಿ ಯಾವುದೇ ರೀತಿ ರೋಗಾಣುಗಳು ಇರುವುದಿಲ್ಲ. ಕೋಳಿ ಮಾಂಸವನ್ನು ಬೇಯಿಸಿ ತಿನ್ನುವುದರಿಂದ ಯಾವುದೇ ಅಪಾಯವಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್. ಮಹೇಶ್ ಕುಮಾರ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Share this article