ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಪ್ರಥಮ ಬುಡಕಟ್ಟು ಸಮುದಾಯದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ತಿಳಿಸಿದರು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸ್ವಾತಂತ್ರ್ಯ ಹೋರಾಟ ಬಿರ್ಸಾ ಮುಂಡಾ ಜಯಂತಿ ಕಾರ್ಯಕ್ರಮದಲ್ಲಿ ಬಿರ್ಸಾ ಮುಂಡಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಬ್ರಿಟೀಷರ ವಿರುದ್ಧ ಹೋರಾಟ ಮಾಡುವ ಮೂಲಕ ಬುಡಕಟ್ಟು ಜನಾಂಗದ ನಾಯಕರಾಗಿದ್ದರು. ಬ್ರಿಟಿಷರು ಬುಡಕಟ್ಟು ಜನಾಂಗದವರ ಜಮೀನುಗಳನ್ನು ವಶಪಡಿಸಿಕೊಂಡು ಅವರನ್ನು ಶೋಷಣೆ ಮಾಡುತ್ತಿದ್ದರು. ಇದರ ವಿರುದ್ಧ ಧ್ವನಿಯತ್ತಿದ ಮುಂಡಾ ಬ್ರಿಟಿಷರ ವಿರುದ್ಧ ತೀವ್ರ ಹೋರಾಟ ಮಾಡಿ ಬುಡಕಟ್ಟು ಸಮುದಾಯಕ್ಕೆ ಜಮೀನುಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.ಕ್ರಿಸ್ತ ಧರ್ಮಕ್ಕೆ ಕಾರಣಾಂತರಗಳಿಂದ ಮತಾಂತರಕೊಂಡರೂ ನಂತರ ದಿನಗಳಲ್ಲಿ ತಪ್ಪಿನ ಅರಿವಾಗಿ ಹಿಂದೂ ಧರ್ಮಕ್ಕೆ ಸೇರ್ಪಡೆಯಾದರು. ತನ್ನ ಬುಡಕಟ್ಟು ಜನಾಂಗ ಮತಾಂತರ ಆಗದಂತೆ ತಡೆಯುವ ಜೊತೆಗೆ ಅವರಲ್ಲಿ ಜಾಗೃತಿ ಮೂಡಿಸಿ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಮಹಾನ್ ನಾಯಕ ಎಂದರು.
ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್.ಸುಂದರ್ ಮಾತನಾಡಿ, ಬಿರ್ಸಾ ಮುಂಡಾ ನಮ್ಮ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಾ ನಾಯಕರು. ಗೋರಿಲ್ಲಾ ಯುದ್ಧವನ್ನು ಚೆನ್ನಾಗಿ ಕರಗತಮಾಡಿಕೊಂಡಿದ್ದ ಮುಂಡಾ ಅವರು ಬುಡಕಟ್ಟು ಸಮುದಾಯಗಳ ಆಶಾಕಿರಣವಾಗಿದ್ದರು. ದೊಡ್ಡ ಪಡೆಯನ್ನು ಕಟ್ಟಿ ಬ್ರಿಟಿಷರ ಸೈನ್ಯಕ್ಕೆ ಸವಾಲು ಹಾಕಿದ ವೀರಯೋಧ. ಬ್ರಿಟಿಷರ ವಿರುದ್ಧ ಪಿರಂಗಿ, ಮುದ್ದುಗುಂಡುಗಳಿದ್ದರೂ ಕೆಚ್ಚೆದೆ ಹೋರಾಟ ಮಾಡಿ, ಬಿಲ್ಲು ಬಾಣಗಳನ್ನು ಬಿಟ್ಟು ಅವರನ್ನು ಹಿಮ್ಮೆಟಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಬಿರ್ಸಾ ಮುಂಡಾ ಅವರ ಇತಿಹಾಸವನ್ನು ತಿಳಿಸುವ ಜೊತೆಗೆ ಇಂಥ ಒಬ್ಬ ಮಹಾನ್ ಹೋರಾಟಗಾರ ಬುಡಕಟ್ಟು ಸಮುದಾಯದಲ್ಲಿ ಇದ್ದ ಎಂಬುದನ್ನು ಜಗಜ್ಜಾಹೀರು ಮಾಡಿ, ಪ್ರತಿ ವರ್ಷ ನ.೧೫ ರಂದು ರಾಷ್ಟ್ರಾದ್ಯಂತ ಬಿರ್ಸಾ ಮುಂಡಾ ಜಯಂತಿ ಆಚರಣೆ ಮಾಡಿ, ಬುಡಕಟ್ಟು ಸಮುದಾಯಗಳಿಗೆ ಸವಲತ್ತುಗಳನ್ನು ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಇಂಥ ಮಹಾನ್ ನಾಯಕರ ಹೋರಾಟ ಮತ್ತು ಜೀವನ ಚರಿತ್ರೆ ನಮ್ಮೆಲ್ಲರಿಗೂ ಅದರ್ಶವಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಜಯಸುಂದರ್, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಬಸವನಪುರ ಮಹೇಶ್, ಜಿಲ್ಲಾ ಉಪಾಧ್ಯಕ್ಷ ಹರದನಹಳ್ಳಿ ಚಂದ್ರು. ಜಿಲ್ಲಾ ಕಾರ್ಯದರ್ಶಿ ಬೆಂಡರವಾಡಿ ಕಿರಣ್, ಕೋಶಾಧ್ಯಕ್ಷ ರಘು, ಟೈಲರ್ ರಾಜೇಶ್ , ರಾಘವೇಂದ್ರ , ರವಿ, ಸತೀಶ್ ತಿಲಕ್, ನಾರಾಯಣಸ್ವಾಮಿ , ಮಾದೇಶ್, ಮಲ್ಲು, ಮೂರ್ತಿ ಮೊದಲಾದವರು ಇದ್ದರು.