ಜನನ-ಮರಣ ನೋಂದಣಿ ಗದಗ ಜಿಲ್ಲೆಯಲ್ಲಿ ವಿಳಂಬ

KannadaprabhaNewsNetwork |  
Published : Jun 18, 2025, 01:11 AM IST
ಗದಗ ಜಿಲ್ಲಾಧಿಕಾರಿ ಕಚೇರಿ ಪೋಟೋ | Kannada Prabha

ಸಾರಾಂಶ

ಮಾನವ ಸೂಚ್ಯಂಕ ಅಭಿವೃದ್ಧಿ ಸೇರಿದಂತೆ ಪ್ರತಿಯೊಂದು ಅಗತ್ಯ ಕೆಲಸ ಕಾರ್ಯಗಳಿಗೆ ಅತ್ಯವಶ್ಯವಾಗಿ ಬೇಕಾಗಿರುವ ಜನನ ಮತ್ತು ಮರಣ ನೋಂದಣಿ ಮಾಡುವಲ್ಲಿ ಗದಗ ಜಿಲ್ಲಾ ವ್ಯಾಪ್ತಿಯಲ್ಲಿ ವ್ಯಾಪಕವಾದ ವಿಳಂಬವಾಗುತ್ತಿದ್ದು, ಇದರಿಂದಾಗಿ ಜಿಲ್ಲೆಯ ಸಮಗ್ರ ಬೆಳವಣಿಗೆಯಲ್ಲಿ ಸರ್ಕಾರದ ಯೋಜನೆಗಳ ಪಡೆಯುವಲ್ಲಿ ಅತೀವ ತೊಂದರೆಯಾಗುತ್ತಿದೆ.

ವಿಶೇಷ ವರದಿ

ಗದಗ: ಮಾನವ ಸೂಚ್ಯಂಕ ಅಭಿವೃದ್ಧಿ ಸೇರಿದಂತೆ ಪ್ರತಿಯೊಂದು ಅಗತ್ಯ ಕೆಲಸ ಕಾರ್ಯಗಳಿಗೆ ಅತ್ಯವಶ್ಯವಾಗಿ ಬೇಕಾಗಿರುವ ಜನನ ಮತ್ತು ಮರಣ ನೋಂದಣಿ ಮಾಡುವಲ್ಲಿ ಗದಗ ಜಿಲ್ಲಾ ವ್ಯಾಪ್ತಿಯಲ್ಲಿ ವ್ಯಾಪಕವಾದ ವಿಳಂಬವಾಗುತ್ತಿದ್ದು, ಇದರಿಂದಾಗಿ ಜಿಲ್ಲೆಯ ಸಮಗ್ರ ಬೆಳವಣಿಗೆಯಲ್ಲಿ ಸರ್ಕಾರದ ಯೋಜನೆಗಳ ಪಡೆಯುವಲ್ಲಿ ಅತೀವ ತೊಂದರೆಯಾಗುತ್ತಿದೆ.

ಜನನ ನೋಂದಣಿ, ನಿಗದಿತ ಸಮಯದಲ್ಲಿ ನೋಂದಣಿಯಾದ ಪ್ರಕರಣಗಳು ಶೇ 68.69 ಹಾಗೂ ಮರಣ ನೋಂದಣಿ ಕೂಡಾ ಇದಕ್ಕಿಂತ ಭಿನ್ನವಾಗಿಲ್ಲ. ಕೇವಲ ಶೇ. 67.23 ಮಾತ್ರ ಆಗಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತಲೂ ತೀರಾ ಕಳಪೆಯಾಗಿದ್ದು, ಇದರಿಂದಾಗಿ ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ.ಜನನ ವಿಭಾಗದಲ್ಲಿ 2025ರ ಜನವರಿಯಿಂದ ಮಾರ್ಚ್ ಅಂತ್ಯದವರೆಗೆ ಒಟ್ಟು 2170 ಜನನಗಳು ನಿಗದಿತ ಸಮಯದಲ್ಲಿ ನೋಂದಣಿಯಾಗಿವೆ. 21 ದಿನಗಳ ಮೇಲೆ 30 ದಿನದೊಳಗೆ 124 ಪ್ರಕರಣಗಳು, 30 ದಿನಗಳ ಮೇಲೆ ಒಂದು ವರ್ಷದೊಳಗೆ 470 ಪ್ರಕರಣಗಳು, ಒಂದು ವರ್ಷಕ್ಕೂ ಮೇಲ್ಪಟ್ಟು 395 ಪ್ರಕರಣಗಳು ನೋಂದಾಗಿವೆ. ಮರಣ ವಿಭಾಗದಲ್ಲಿ ಕೂಡಾ ಇದೇ ರೀತಿ ಇದೆ. 1494 ಮರಣಗಳು ನೋಂದಣಿಯಾಗಿದ್ದು ಅವುಗಳಲ್ಲಿ 21 ದಿನಗಳ ಮೇಲೆ 30 ದಿನದೊಳಗೆ 173 ಪ್ರಕರಣಗಳು, 30 ದಿನಗಳ ಮೇಲೆ ಒಂದು ವರ್ಷದೊಳಗೆ 382 ಪ್ರಕರಣಗಳು,

ಒಂದು ವರ್ಷಕ್ಕೂ ಮೇಲ್ಪಟ್ಟು 173 ಪ್ರಕರಣಗಳು ನೋಂದಣಿಯಾಗಿವೆ.

ಸರ್ಕಾರಿ ಆಸ್ಪತ್ರೆಗಳಲ್ಲೇ ವಿಳಂಬ: ಜನನ ಮತ್ತು ಮರಣ ನೋಂದಣಿ ವಿಳಂಬವಾಗುತ್ತಿರುವುದು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗಳಲ್ಲೇ ಎಂಬುದು ಸ್ಪಷ್ಟವಾಗಿದೆ. ಗದಗ ಜಿಲ್ಲಾಸ್ಪತ್ರೆಯಲ್ಲಿ 63, ನಾಗಾವಿ ಪ್ರಾಥಮಿಕ ಆರೋಗ್ಯ ಕೇಂದ್ರ 7, ಗಜೇಂದ್ರಗಡ ಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರ: 27, ನರೇಗಲ್ ಪ್ರಾಥಮಿಕ ಆರೋಗ್ಯ ಕೇಂದ್ರ 17, ಮುಂಡರಗಿ ಬಾಗೇವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ 6, ಶಿರಹಟ್ಟಿ ತಾಲೂಕು ಆಸ್ಪತ್ರೆ 7, ಬೆಳ್ಳಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರ 21 ಸೇರಿದಂತೆ ಒಟ್ಟು 148 ಪ್ರಕರಣಗಳು ಸರ್ಕಾರಿ ಆಸ್ಪತ್ರೆಗಳಿಂದಲೇ ವಿಳಂಬವಾಗಿವೆ. ನಗರ ಸ್ಥಳೀಯ ಸಂಸ್ಥೆಗಳಲ್ಲೂ ಇದೇ ಕಥೆ: ನಗರ ಸ್ಥಳೀಯ ಸಂಸ್ಥೆಗಳಲ್ಲಿನ ನೋಂದಣಿ ಘಟಕಗಳಲ್ಲೂ ವಿಳಂಬ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಗದಗ-ಬೆಟಗೇರಿ ನಗರಸಭೆ 427, ಮುಳಗುಂದ ಪಪಂ 6, ಗಜೇಂದ್ರಗಡ ಪುರಸಭೆ 18, ನರೇಗಲ್ ಪಪಂ: 16, ಲಕ್ಷೇಶ್ವರ ಪುರಸಭೆ 21, ನರಗುಂದ ಪುರಸಭೆ 16, ರೋಣ ಪುರಸಭೆ 8, ಶಿರಹಟ್ಟಿ ಪಪಂ: 6 ಒಟ್ಟು 518 ಪ್ರಕರಣಗಳು ನಗರ ಸ್ಥಳೀಯ ಸಂಸ್ಥೆಗಳಲ್ಲಿಯೇ ವಿಳಂಬವಾಗಿವೆ. ಇದರೊಟ್ಟಿಗೆ ಸರ್ಕಾರಿ ಆಸ್ಪತ್ರೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ವಿಳಂಬವಾಗಿರುವ 500 ಕ್ಕೂ ಹೆಚ್ಚು ಪ್ರಕರಣಗಳಿವೆ.

ನೋಂದಣಿ ವ್ಯವಸ್ಥೆ: ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 330 ನೋಂದಣಿ ಘಟಕಗಳು ಮತ್ತು 367 ಉಪ ನೋಂದಣಿ ಘಟಕಗಳಿದ್ದು, ಗ್ರಾಮ ಲೆಕ್ಕಿಗರು ನೋಂದಣಾಧಿಕಾರಿಗಳು ಹಾಗೂ ಪಿಡಿಒಗಳು, ಸಿಎಚ್‌ಸಿ ಮುಖ್ಯಸ್ಥರು ಉಪ ನೋಂದಣಾಧಿಕಾರಿಗಳಾಗಿರುತ್ತಾರೆ. ನಗರ ಪ್ರದೇಶಗಳಲ್ಲಿ 9 ನೋಂದಣಿ ಘಟಕ ಮತ್ತು 12 ಉಪ ನೋಂದಣಿ ಘಟಕಗಳಿದ್ದು, ಆರೋಗ್ಯ ನಿರೀಕ್ಷಕರು ನೋಂದಣಾಧಿಕಾರಿಗಳು ಹಾಗೂ ಆಸ್ಪತ್ರೆ ಮುಖ್ಯಸ್ಥರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪ ನೋಂದಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ನಮೂನೆ 1 (ಜನನ), ನಮೂನೆ 2 (ಮರಣ), ಮತ್ತು ನಮೂನೆ 3 (ನಿರ್ಜೀವ ಜನನ) ಗಳನ್ನು ಕಡ್ಡಾಯವಾಗಿ ಇ-ಜನ್ಮ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಬೇಕಿದೆ. ಆದರೆ ಅದು ಸಮರ್ಪಕವಾಗಿ ನಡೆಯುತ್ತಿಲ್ಲ.

ವಿಳಂಬದಿಂದಾಗುವ ಸಮಸ್ಯೆಗಳೇನು?: ಜನನ ಪ್ರಮಾಣಪತ್ರ ವಿಳಂಬ ಮಾಡುವುದರಿಂದ ಮಗುವಿನ ಗುರುತಿಗೆ ಕಾನೂನುಬದ್ಧ ಮಾನ್ಯತೆ ದೊರೆಯುವುದಿಲ್ಲ. ಆರೋಗ್ಯ ರಕ್ಷಣೆ, ಲಸಿಕೆಗಳು, ಶಾಲೆ ಪ್ರವೇಶ, ಮತ್ತು ಭವಿಷ್ಯದಲ್ಲಿ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಅಡ್ಡಿಯಾಗುತ್ತದೆ. ಮರಣ ಪ್ರಮಾಣಪತ್ರ ವಿಳಂಬದಿಂದಾಗಿ ಆಸ್ತಿ ಹಕ್ಕುಗಳ ವರ್ಗಾವಣೆ, ವಿಮಾ ಹಕ್ಕುಗಳು, ಕುಟುಂಬ ಪಿಂಚಣಿ ಪಡೆಯಲು ಅಡ್ಡಿ ಸೇರಿದಂತೆ ಕುಟುಂಬಗಳಿಗೆ ಅನಗತ್ಯ ಕಾನೂನು ತೊಡಕುಗಳು ಸೃಷ್ಟಿಯಾಗುತ್ತವೆ.

ಜನನ-ಮರಣ ನೋಂದಣಿ ಪ್ರಕ್ರಿಯೆ ಯಾವುದೇ ಕಾರಣಕ್ಕೂ ವಿಳಂಬವಾಗದೇ ನಿಗದಿತ ಸಮಯದಲ್ಲಿ ಜರುಗಿಸಬೇಕು. ಈ ಕುರಿತು ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ. ಸುಧಾರಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ