ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಡಾ. ರಾಜ್‌ಕುಮಾರ್ ಕಲಾಮಂದಿರಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಕದಳಿ ಮಹಿಳಾ ವೇದಿಕೆ ಚಾಮರಾಜನಗರ ಸಂಯುಕ್ತ ಆಶ್ರಯದಲ್ಲಿ ಆ. ೧೬ರಂದು ಮಾಜಿ ಶಾಸಕ ದಿ.ಎಂ.ಸಿ.ಬಸಪ್ಪನವರ ಜನ್ಮಶತಮಾನೋತ್ಸವ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆ. ೧೬ರಂದು ಬೆಳಗ್ಗೆ ೧೦-೩೦ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಮತ್ತು ಕೃತಿ ಲೋಕಾರ್ಪಣೆಯನ್ನು ಸುತ್ತೂರು ಶಿವರಾತ್ರಿದೇಶಿಕೇಂದ್ರಸ್ವಾಮೀಜಿ ನೆರವೇರಿಸಲಿದ್ದಾರೆ ಎಂದರು.
ದಿವ್ಯ ಸಮ್ಮುಖವನ್ನು ಪಡಗೂರು ಅಡವಿ ಮಠದ ಶಿವಲಿಂಗೇಂದ್ರ ಸ್ವಾಮಿಗಳು ವಹಿಸಲಿದ್ದು, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಸಿ. ಸೋಮಶೇಖರ ವಹಿಸಲಿದ್ದು, ಹಿರಿಯ ಸಾಹಿತಿ ಕೆ. ವೆಂಕಟರಾಜು ಎಂ.ಸಿ. ಬಸಪ್ಪನವರ ರಾಜಕಾರಣ ಮತ್ತು ಸಮಾಜ ಸೇವೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದರು.ದತ್ತಿ ಉಪನ್ಯಾಸವನ್ನು ಆಧ್ಯಾತ್ಮಿಕ ಚಿಂತಕರು ಮತ್ತು ನಿವೃತ್ತ ಮುಖ್ಯ ಅಭಿಯಂತರರು ಆದ ಶಂಕರ್ ದೇವನೂರು ಅವರು ನೀಡಲಿದ್ದು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ದುಗ್ಗಟ್ಟಿ ಮತ್ತು ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಉಪಸ್ಥಿತರಿದ್ದು, ಗಂಗಾಂಭಿಕೆ ಎಂ.ಸಿ. ಬಸಪ್ಪನವರು ಎಂ.ಸಿ.ಬಸಪ್ಪನವರ ಸ್ಮರಣಾರ್ಥ ೫ ಲಕ್ಷ ರು. ಗಳನ್ನು ದತ್ತಿ ನೀಡಲಿದ್ದಾರೆ, ಮುಂದಿನ ವರ್ಷದಿಂದ ವಿಚಾರ ಸಂಕಿರಣ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಎಂ.ಸಿ.ಬಸಪ್ಪನವರು (1925-2002) ಚಾಮರಾಜನಗರ ತಾಲೂಕು ಮಲೆಯೂರು ಗ್ರಾಮದ ಶ್ರೀ ಚಿಕ್ಕರಂಗಪ್ಪನವರ ಮಕ್ಕಳು. ಮಲೆಯೂರು ಚಿಕ್ಕರಂಗಪ್ಪನವರು ಸ್ವಾತಂತ್ರ ಹೋರಾಟಗಾರರು ಹಾಗೂ ಪ್ರಜಾಪ್ರತಿನಿಧಿ ಸಭೆಯ ಸದಸ್ಯರು ಕೂಡ ಆಗಿದ್ದವರು. ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಚಾಮರಾಜನಗರ ತಾಲೂಕಿನಿಂದ ಹೋರಾಟದಲ್ಲಿ ಪಾಲ್ಗೊಂಡು ಜೈಲು ಸೇರಿದ ಕೆಲವರಲ್ಲಿ ಇವರು ಒಬ್ಬರು. ಎಂ.ಸಿ.ಬಸಪ್ಪನವರ ಹಿನ್ನೆಲೆಯಲ್ಲಿಯೇ ಹೋರಾಟ ಹಾಗೂ ರಾಜಕಾರಣ ಎರಡೂ ಇದ್ದವು. ಬಿ.ಎ.ಐ.ಎಲ್ ಮುಗಿಸಿ ನಂಜನಗೂಡಿನಲ್ಲಿ ಭಾವ ಹನಿಯಂಬಳ್ಳಿ ಲಿಂಗಪ್ಪನವರ ಬಳಿ ಜೂನಿಯರ್ ಆಗಿ ಕೆಲವು ವರ್ಷ ವಕೀಲರಾಗಿ ಕೆಲಸವನ್ನು ಮಾಡಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ತಾಲೂಕಿನ ಗ್ರಾಮಾಭಿವೃದ್ಧಿ ಸಮಿತಿಯ ಸದಸ್ಯರೂ ಆಗಿದ್ದರು.ಸಮೊದಲ ಮಹಾ ಚುನಾವಣೆಯಲ್ಲಿ (೧೯೫೨) ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಆದರೆ ಗೆಲ್ಲಲಾಗಲಿಲ್ಲ. ಮೂರನೇ ಮಹಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಜಯಶಾಲಿಯಾಗಿ ವಿಧಾನಸಭೆ ಪ್ರವೇಶಿಸಿದರು.
೧೯೬೩ರ ಬೆಂಗಳೂರು ಗಾಜನ ಮನೆ ಅಧಿವೇಶನ ಸಂದರ್ಭದಲ್ಲಿ ಇವರು ಎಂಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇಂದಿರಾ ಗಾಂಧಿ ನೇತೃತ್ವದ ಆಡಳಿತ ಕಾಂಗ್ರೆಸ್ ನಿಂದ ಮುಕ್ತ ಆಹ್ವಾನವಿದ್ದರೂ ವೀರೇಂದ್ರ ಪಾಟೀಲರ ಜೊತೆಗೆ ತಮ್ಮನ್ನು ಗುರುತಿಸಿಕೊಂಡರು. ತುರ್ತು ಪರಿಸ್ಥಿತಿ ನಂತರ ಹುಟ್ಟಿಕೊಂಡ ಜನತಾ ಪಕ್ಷದೊಡನೆ ಗುರುತಿಸಿಕೊಂಡು ಅದರ ಗೆಲುವಿಗೆ ಶ್ರಮಿಸಿದರು. ೧೯೭೯ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಮತ್ತೊಮ್ಮೆ ವಿಧಾನಸಭೆಗೆ ಆಯ್ಕೆಯಾದರು. ಈ ನಡುವೆ ಒಂದು ಅವಧಿಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಸದಸ್ಯರಾಗಿದ್ದರು,ಜಾತ್ಯಾತೀತತೆ ಮತ್ತು ಪ್ರಜಾಪ್ರಭುತ್ವದಲ್ಲಿ ಪೂರ್ಣ ನಂಬಿಕೆ ಇದ್ದ ಇವರು ಕರ್ನಾಟಕ ಕಂಡ ಅತ್ಯುತ್ತಮ ವಿಧಾನಸಭಾ ಸದಸ್ಯರಲ್ಲಿ ಒಬ್ಬರು, ಗೆದ್ದಾಗಲೂ ಸೋತಾಗಲೂ ಪ್ರಭಾವಿ ರಾಜಕಾರಣೆಯಾಗಿ ಇದ್ದುದು ಇವರ ವ್ಯಕ್ತಿತ್ವದ ವೈಶಿಷ್ಟ ಎಂದರು.
ಎಂ.ಸಿ.ಬಸಪ್ಪನವರ ಜನ್ಮ ಶತಮಾನೋತ್ಸವದ ಅಂಗವಾಗಿ ಅವರ ಧರ್ಮಪತ್ನಿ ಗಂಗಾಂಬಿಕೆ ಎಂ.ಸಿ.ಬಸಪ್ಪ ಹಾಗೂ ಕುಟುಂಬಸ್ಥರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನಲ್ಲಿ ದತ್ತಿಯೊಂದನ್ನು ಸ್ಥಾಪಿಸಿ ಪ್ರತಿವರ್ಷ ಕಾರ್ಯಕ್ರಮಗಳು ನಡೆಯಲು ಅನುವು ಮಾಡಿಕೊಟ್ಟಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನಸ್ವಾಮಿ ದುಗ್ಗಟ್ಟಿ, ಆರ್. ಕುಮಾರಸ್ವಾಮಿ, ಆರ್. ಪುಟ್ಟಮಲ್ಲಪ್ಪ, ಎಂ.ಬಿ. ಸೋಮಶೇಖರ್, ಕೆ. ವೆಂಕಟರಾಜು, ಪುಟ್ಟರಾಜು, ಸುಂದರ್ ಇದ್ದರು.