ಜನನ-ಮರಣ ಪ್ರಮಾಣ ಪತ್ರ ಶುಲ್ಕ 10 ಪಟ್ಟು ಹೆಚ್ಚಳ!

KannadaprabhaNewsNetwork |  
Published : Feb 12, 2025, 12:30 AM IST
೩೨ | Kannada Prabha

ಸಾರಾಂಶ

ಈ ತನಕ 5 ರು. ಇದ್ದ ಜನನ ಅಥವಾ ಮರಣ ಪ್ರಮಾಣ ಪತ್ರದ ಶುಲ್ಕ 50 ರು. ಆಗಿದ್ದು ಜನನ ಮರಣದ ವಿಚಾರದಲ್ಲೂ ಸರ್ಕಾರ ವಸೂಲಿ ಮಾಡುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ.2024 ಡಿ.31 ರಂದು ರಾಜ್ಯ ಸರ್ಕಾರ ಹೊರಡಿಸಿರುವ ಗಜೆಟ್ ನೋಟಿಫಿಕೇಶನ್ ನಲ್ಲಿ ಈ ತಿದ್ದುಪಡಿಗಳ ಬಗ್ಗೆ ಉಲ್ಲೇಖಿಸಲಾಗಿದೆ.

ಮೌನೇಶ ವಿಶ್ವಕರ್ಮ

ಕನ್ನಡಪ್ರಭ ವಾರ್ತೆ ಬಂಟ್ವಾಳ

ಹಲವು ದರ ಏರಿಕೆಗಳ ಬಳಿಕ ಇದೀಗ ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ಅಗತ್ಯವಿರುವ ಜನನ ಮತ್ತು ಮರಣ ಪ್ರಮಾಣ ಪತ್ರದ ಪ್ರತಿಯ ಶುಲ್ಕವನ್ನೂ ಹತ್ತುಪಟ್ಟು ಏರಿಸಿದೆ.

ಪರಿಣಾಮ ಈ ತನಕ 5 ರು. ಇದ್ದ ಜನನ ಅಥವಾ ಮರಣ ಪ್ರಮಾಣ ಪತ್ರದ ಶುಲ್ಕ 50 ರು. ಆಗಿದ್ದು ಜನನ ಮರಣದ ವಿಚಾರದಲ್ಲೂ ಸರ್ಕಾರ ವಸೂಲಿ ಮಾಡುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

2024 ಡಿ.31 ರಂದು ರಾಜ್ಯ ಸರ್ಕಾರ ಹೊರಡಿಸಿರುವ ಗಜೆಟ್ ನೋಟಿಫಿಕೇಶನ್ ನಲ್ಲಿ ಈ ತಿದ್ದುಪಡಿಗಳ ಬಗ್ಗೆ ಉಲ್ಲೇಖಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಅನುಮೋದನೆ ಪಡೆದು, 1999 ರ ಕರ್ನಾಟಕ ಜನನ ಮತ್ತು ಮರಣಗಳ ನಿಯಮಕ್ಕೆ ತಿದ್ದುಪಡಿ ತರಲು ಜನನ ಮರಣಗಳ ತಿದ್ದುಪಡಿ ನಿಯಮಗಳು, 2024 ನ್ನು ರಚಿಸಿದೆ. ಅದರಂತೆ ಕೈಗೊಳ್ಳಬೇಕಾದ ಹಲವು ಬದಲಾವಣೆಗಳನ್ನು ಅಧಿಸೂಚನೆಯ ಸುತ್ತೋಲೆಯಲ್ಲಿ‌ ವಿವರಿಸಲಾಗಿದೆ.

ಕಳೆದ 2024ರ ಡಿ.31 ರಂದು ಹೊರಡಿಸಿದ ಸುತ್ತೋಲೆಯಲ್ಲಿ ಈ ಬಗ್ಗೆ ಆದೇಶಗಳಿದ್ದರೂ, ಜನವರಿ ತಿಂಗಳ ಮಧ್ಯದಲ್ಲಿ ಈ‌ ಕುರಿತಾದ ಈ ಮೇಲ್‌ ಸಂದೇಶ ಅಧಿಕಾರಿಗಳಿಗೆ ತಲುಪಿದೆ. ಕಳೆದ ಫೆ.1 ರ ಬಳಿಕ‌ ಹೆಚ್ಚಳವಾಗಿರುವ ಶುಲ್ಕವನ್ನು ಅಧಿಕಾರಿಗಳು ನಾಗರಿಕರಿಂದ ವಸೂಲಿ ಮಾಡುತ್ತಿದ್ದಾರೆ.

ಜನನ ಅಥವಾ ಮರಣ ಪ್ರಮಾಣ ಪತ್ರವನ್ನು ನಿಗದಿತ ಅವಧಿಯಲ್ಲಿ‌ ನೋಂದಾಯಿಸಿದವರಿಗೆ ಉಚಿತ ಪ್ರಮಾಣ ಪತ್ರ ನೀಡುವ ಪದ್ಧತಿ ಹಿಂದಿನಂತೆ ಮುಂದುವರಿಯಲಿದ್ದು, ಆಗಾಗ್ಗೆ ಅಗತ್ಯ ಬೀಳುವ ಹೆಚ್ಚುವರಿ ಪ್ರತಿಗಳಿಗೆ ಈ ಶುಲ್ಕ ತಗುಲಲಿದೆ.

ಈ‌ ಮೊದಲು 5 ರು. ಪ್ರತಿಯ ಶುಲ್ಕ ಇದ್ದು, ಪ್ರತಿ ಬೇಕಾದವರು ಕಡಿಮೆ ಎಂದರೂ ಐದೈದು ಪ್ರತಿಗೆ ಬೇಡಿಕೆ ಇರಿಸುತ್ತಿದ್ದರು. ಆದರೆ ಸರ್ಕಾರದ ಬೆಲೆ ಏರಿಕೆಯಿಂದಾಗಿ ಅಗತ್ಯ ಇದ್ದಷ್ಟೇ ಕೊಂಡೊಯ್ಯುತ್ತಾರೆ, ಒಂದು ರೀತಿಯಲ್ಲಿ ಒಳ್ಳೇಯದೇ ಆಯಿತು ಎಂದು ಬಂಟ್ವಾಳ ತಾಲೂಕು ಕಚೇರಿ ಸಿಬ್ಬಂದಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

---------------------

ಸರ್ಕಾರದ ಕಾರ್ಯಾದೇಶ ಪಾಲಿಸುವುದು ನಮ್ಮ ಕೆಲಸ, ಸರ್ಕಾರದ ಸುತ್ತೋಲೆಯಂತೆ ನಮ್ಮ ಇಲಾಖೆ ಕಾರ್ಯ‌ನಿರ್ವಹಿಸುತ್ತಿದೆ.

-ಅರ್ಚನಾ ಭಟ್, ಬಂಟ್ವಾಳ ತಹಸೀಲ್ದಾರ್‌.-------

ಜನನ-ಮರಣ ಪ್ರಮಾಣ ಪತ್ರ ನೀಡುವ ವಿಚಾರದಲ್ಲಿ ಸರ್ಕಾರ ಬೆಲೆ ಏರಿಕೆ ಮಾಡಿದ್ದು ಸರಿಯಲ್ಲ, ಜನರ ಭಾವನೆ ಅರಿತುಕೊಳ್ಳಬೇಕಿತ್ತು.

-ಸನತ್ ಕುಮಾರ್ ರೈ, ಮಾಜಿ ಅಧ್ಯಕ್ಷ ಅನಂತಾಡಿ ಗ್ರಾ.ಪಂ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2 ವರ್ಷದೊಳಗೆ ಪುತ್ತೂರು ದೇವಳ ಬ್ರಹ್ಮಕಲಶ ಗುರಿ: ಅಶೋಕ್‌ ರೈ
ದೇಶಕ್ಕಾಗಿ ರಕ್ತ ಬಲಿದಾನ ನೀಡಿದವರು ಬಿಗ್‌ ಬಾಸ್‌: ದೋ. ಕೇಶವಮೂರ್ತಿ