ಕನ್ನಡಪ್ರಭ ವಾರ್ತೆ ವಿಜಯಪುರ
ಕಳೆದ ಹಲವು ದಶಕಗಳಿಂದ ಭೀಮಾತೀರದ ಹಂತಕರ ಹೆಸರಿನಲ್ಲಿ ಸಂಚಲನ ಸೃಷ್ಟಿಸಿದ್ದ ಬಾಗಪ್ಪ ಹರಿಜನ ಈಗ ದುಷ್ಕರ್ಮಿಗಳ ಹೊಡೆತಕ್ಕೆ ಪ್ರಾಣವನ್ನೇ ಬಲಿಕೊಟ್ಟಿದ್ದಾನೆ. ಹಲವಾರು ಕೊಲೆ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಬಾಗಪ್ಪನ ಮೇಲಿದ್ದವು. ಮಂಗಳವಾರ ರಾತ್ರಿ ದಾಳಿ ವಿಜಯಪುರದ ಮದಿನಾ ನಗರದಲ್ಲಿ ಬಾಡಿಗೆ ಮನೆಯಲ್ಲಿ ಬಾಗಪ್ಪ ವಾಸ ಮಾಡುತ್ತಿದ್ದ. ಫೆಬ್ರವರಿ 11 ರಾತ್ರಿ 8.50ರ ಸುಮಾರಿಗೆ ಮನೆಯಿಂದ ಹೊರಬರುತ್ತಿದ್ದಂತೆ ದುಷ್ಕರ್ಮಿಗಳು ಏಕಾಏಕಿ ಮಚ್ಚಿನಿಂದ ದಾಳಿ ಮಾಡಿದ್ದಾರೆ. ಸಿಕ್ಕ ಸಿಕ್ಕಲ್ಲಿ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ದುಷ್ಕರ್ಮಿಗಳು ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ. ಘಟನೆಯಿಂದ ಇಡಿ ವಿಜಯಪುರ ಸ್ತಬ್ಧವಾಗಿದೆ.ಬಾಗಪ್ಪನ ಹಿನ್ನೆಲೆ:
ಬಾಗಪ್ಪನ ಮೇಲಿದ್ದ ಪ್ರಕರಣಗಳು:
2020 ಜುಲೈ 19ರಂದು ಇಂಡಿಯ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆಗೆ ಮೂರು ಕೇಜಿ ಚಿನ್ನ ಅಥವಾ ₹5 ಕೋಟಿ ಹಣ ಕೊಡುವಂತೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದ ಆರೋಪವಿದೆ.
2001ರಲ್ಲಿ ಆಲಮೇಲ ಠಾಣೆ ವ್ಯಾಪ್ತಿ ಕೊಲೆ, ಸಾಕ್ಷಿಗಳ ಮೇಲೆ ಗುಂಡು ಹಾರಿಸಿದ್ದ ಆರೋಪ. 2003ರಲ್ಲಿ ಅಪ್ಜಲಪುರ ತಾಲೂಕಿನ ಶಿರೋಳದಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವಿತ್ತು.
ಹಂತಕ ಬಾಗಪ್ಪ ಹರಿಜನನ ಮೇಲೆ 2017 ಆಗಸ್ಟ್ 8ರಂದು ಜಿಲ್ಲಾ ನ್ಯಾಯಾಲಯದ ಆವರಣದಲ್ಲೇ ಬೆಳಗ್ಗೆ 10.40ಕ್ಕೆ ಗುಂಡಿನ ದಾಳಿ ನಡೆದಿತ್ತು. ಭೀಮಾತೀರದ ಹಂತಕ ಚಂದಪ್ಪ ಹರಿಜನ 2000ರಲ್ಲಿ ಪೊಲೀಸ್ ಎನಕೌಂಟರ್‌ಗೆ ಬಲಿಯಾದ ಬಳಿಕ 14 ವರ್ಷಗಳ ನಂತರದಲ್ಲಿ ಚಂದಪ್ಪನ ತಮ್ಮ ಬಸವರಾಜ ಹರಿಜನನ ಕೊಲೆಯಾಗಿತ್ತು. ಇದರಲ್ಲಿ ಬಾಗಪ್ಪ ಭಾಗಿಯಾಗಿದ್ದ ಎನ್ನಲಾಗಿತ್ತು. ಹೀಗೆ ಬಿಟ್ಟರೆ ಬಾಗಪ್ಪ ನಮ್ಮನ್ಯಾರನ್ನೂ ಉಳಿಸೋದಿಲ್ಲ ಎಂದುಕೊಂಡ ಚಂದಪ್ಪನ ಅಣ್ಣನ ಮಗನಾದ ಭೀಮಶ್ಯಾ ಹರಿಜನ ತನ್ನ ಪರಿಚಯಸ್ಥರಿಗೆ ಸುಪಾರಿ ನೀಡಿ ಕೊಲೆ ಮಾಡಲು ಯತ್ನಿಸಿದ್ದ. ಈ ವೇಳೆ ಸುಪಾರಿ ಪಡೆದಿದ್ದ ಪೀರಪ್ಪ ಹಡಪದ ಎಂಬಾತ ಬಾಗಪ್ಪನ ಮೇಲೆ ಕೋರ್ಟ್ ಆವರಣದಲ್ಲೇ ಮೂರು ಸುತ್ತು ಗುಂಡು ಹಾರಿಸಿದ್ದರೂ ಬಾಗಪ್ಪ ಚಿಕಿತ್ಸೆ ಪಡೆದು ಬದುಕುಳಿದಿದ್ದ. ಬಾಗಪ್ಪನ ಮೇಲೆ ಗುಂಡು ಹಾರಿಸಿದ್ದ ಪ್ರಕರಣದಲ್ಲಿ ಒಟ್ಟು ಆರು ಆರೋಪಿಗಳಿದ್ದರು.