ಕುಷ್ಟಗಿ: ಅಯೋಡಿನ್ ಅಂಶವಿರುವ ಆಹಾರ ಬಳಸುವ ಮೂಲಕ ಅಯೋಡಿನ್ ಕೊರತೆಯ ನ್ಯೂನತೆಗಳನ್ನು ತಡೆಗಟ್ಟಲು ಎಲ್ಲರೂ ಪ್ರಮುಖ ಪಾತ್ರ ವಹಿಸಬೇಕು ಎಂದು ಚಿಕ್ಕಮಕ್ಕಳ ತಜ್ಞ ಡಾ. ಮಹಾಂತೇಶ ಬುಕನಟ್ಟಿ ಹೇಳಿದರು.
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಸಹಭಾಗಿತ್ವದಲ್ಲಿ ನಡೆದ ರಾಷ್ಟ್ರೀಯ ಅಯೋಡಿನ್ ಕೊರತೆಯ ನ್ಯೂನತೆಗಳ ನಿಯಂತ್ರಣ ದಿನ ಹಾಗೂ ಸಪ್ತಾಹದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಅಯೋಡಿನ್ ಕೊರತೆಯಾದರೆ ಬುದ್ಧಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ದೈಹಿಕ ಮತ್ತು ಮಾನಸಿಕ ವಿಕಲತೆ, ಕುಂಠಿತ ಬೆಳವಣಿಗೆ, ಕಿವುಡು ಮತ್ತು ಮೂಕತನ, ಮೆಳ್ಳೆಗಣ್ಣು, ನಡಿಗೆಯಲ್ಲಿ ಲೋಪದೋಷಗಳು ಉಂಟಾಗುತ್ತವೆ. ವಯಸ್ಕರಲ್ಲಿ ನಿಶ್ಯಕ್ತಿ, ಕಾರ್ಯ ನಿರ್ವಹಣೆಯ ವೈಫಲ್ಯ ಸೇರಿದಂತೆ ವಿವಿಧ ನ್ಯೂನತೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಸೇವಿಸುವ ಆಹಾರದಲ್ಲಿ ಪ್ರೋಟಿನ್ ಅಂಶ ಒಳಗೊಂಡಂತೆ ಅಯೋಡಿನ್ ಅಂಶ ಬಳಸಬೇಕು ಎಂದರು.ಇಂದಿನ ದಿನಗಳಲ್ಲಿ ಜನರು ಹೆಚ್ಚಾಗಿ ರಸ್ತೆ ಬದಿಯ ಆಹಾರ ಪದಾರ್ಥಗಳ ಮೊರೆ ಹೋಗುತ್ತಿದ್ದು, ಇದರಿಂದ ಹೊಟ್ಟೆ ನೋವು ಸಂಬಂಧಿ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಶುಚಿಯಾದ ಆಹಾರ ಸೇವಿಸಬೇಕು. ತಾವು ಸೇವಿಸುವ ಆಹಾರ ಸ್ವಚ್ಛವಾಗಿದ್ದರೆ, ಪ್ರೋಟಿನ್‌ಯುಕ್ತವಾಗಿದ್ದರೆ ಯಾವುದೇ ರೀತಿಯಲ್ಲೂ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುವುದಿಲ್ಲ. ಪ್ರೋಟಿನ್‌ಯುಕ್ತ ಹಣ್ಣುಗಳನ್ನು ಸೇವಿಸಿ, ರಸ್ತೆ ಬದಿಯ ಮುರುಕು ತಿಂಡಿಗಳು, ಬೇಕರಿ ತಿನಿಸುಗಳಿಗೆ ಮೊರೆ ಹೋಗಿ ತಮ್ಮ ಆರೋಗ್ಯ ಕೆಡಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಟಿಎಚ್‌ಒ ಡಾ. ಆನಂದ ಗೋಟೂರು, ತಾಲೂಕಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಚಂದ್ರಕಲಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸೋಮಶೇಖರ ಮೇಟಿ, ಪ್ರಯೋಗಾಲಯ ತಜ್ಞ ಬಾಲಾಜಿ ಬಳಿಗಾರ, ಎಪಿಡೆಮಿಯೊಲಾಜಿಸ್ಟ್ ಡಾ. ಪ್ರಶಾಂತ, ಸವಿತಾ ಉಪ್ಪಾರ, ಶಿಲ್ಪಾ ಇದ್ದರು.