ಕನ್ನಡಪ್ರಭ ವಾರ್ತೆ ಬೀರೂರು ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರಿಗೆ ಪುರಸಭೆಯು ಉಪಹಾರ ಉಚಿತವಾಗಿ ನೀಡುವಂತೆ ಸರ್ಕಾರ ನಿರ್ದೇಶನ ನೀಡಿದ್ದರೂ ಸಹ ಬೀರೂರು ಪುರಸಭೆ ಪೌರಕಾರ್ಮಿಕರನ್ನು ಉಪವಾಸ ಕೆಡತ್ತಿದೆ.ಕಳೆದ 6 ತಿಂಗಳಿನಿಂದ ಉಪಹಾರ ನೀಡದ ಪುರಸಭೆ, ಈ ಉಪಹಾರದ ವ್ಯವಸ್ಥೆಗೆ ಯಾರೂ ಸಹ ಗುತ್ತಿಗೆ ಆಧಾರಕ್ಕೆ ಅರ್ಜಿ ಸಲ್ಲಿಸದ ಪರಿಣಾಮ ಪುರಸಭೆ ಪೌರಕಾರ್ಮಿಕರು ಉಪವಾಸ ಕೆಡವಲು ಕಾರಣವಾಗುತ್ತಿದೆ. ಬೀರೂರು ಪುರಸಭೆಯಲ್ಲಿ ಒಟ್ಟು 27 ಜನ ಹಾಗೂ ವಾಹನ ಚಾಲಕರು ಸೇರಿದಂತೆ 40 ಜನ ಕಾರ್ಮಿಕರಿದ್ದಾರೆ. ಪ್ರತಿ ದಿನ ಉಪಹಾರಕ್ಕೆ ₹35 ಸೇರಿದಂತೆ ಮೊಟ್ಟೆ ನೀಡಲು ಸರ್ಕಾರ ಸೂಚನೆ ನೀಡಿದೆ.
ಈ ಹಿಂದೆ ಗಂಗಣ್ಣ ಖಾನವಳಿಯವರು ಪುರಸಭೆ ಪೌರಕಾರ್ಮಿಕರಿಗೆ ಉಪಹಾರದ ಟೆಂಡರ್ ಪಡೆದಿದ್ದರು. ಆದರೆ ಗುಣಮಟ್ಟದ ಆಹಾರ ನೀಡದಿರುವ ಬಗ್ಗೆ ಪೌರಕಾರ್ಮಿಕರು ದೂರು ನೀಡಿದ ಹಿನ್ನಲೆ ಈ ವ್ಯವಸ್ಥೆ ನಿಂತು ಹೋಗಿದೆ. ಒಟ್ಟಾರೆ ಬೆಳಗಿನಿಂದ ಊರ ಕಸ ಗೂಡಿಸಿ ಬೆಂದು ಒಂದಿಷ್ಟು ಉಪಹಾರ ನೀಡದಿರುವ ಬಗ್ಗೆ ಪೌರಕಾರ್ಮಿಕರು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಸದಸ್ಯ, ಜನಪ್ರತಿನಿಧಿಗಳಾಗಲಿ ಯಾರು ನಮ್ಮ ಸಮಸ್ಯೆ ಬಗೆಹರಿಸಲು ಬರೋದಿಲ್ಲ. ಅವರ ವಾರ್ಡ್ ಮತ್ತು ಮನೆ ಮುಂದೆ ಕಸ ಎತ್ತೋಕೆ ಮಾತ್ರ ನಾವು ಸೀಮಿತರಾಗಿದ್ದೇವೆ. ಕಸ ಗುಡಿಸಿ ಪಟ್ಟಣವನ್ನು ಸ್ವಚ್ಛ ಮಾಡುವ ನಮ್ಮನ್ನು ಕಸಕ್ಕಿಂತ ಕೀಳಾಗಿ ನೋಡುತ್ತಿದ್ದಾರೆ ಎನ್ನುವುದು ಪೌರಕಾರ್ಮಿಕರ ಅಳಲು.ಈ ಹಿಂದೆ ಪ್ರತಿ ದಿನ 10ಕ್ಕೆ ಪುರಸಭೆಯಿಂದ ಬೆಳಗಿನ ಉಪಹಾರ ನೀಡಲಾಗುತ್ತಿತ್ತು. ಆದರೆ ಕಳೆದ 6 ತಿಂಗಳಿನಿಂದ ಯಾವುದೇ ಉಪಹಾರ ನೀಡದ ಪರಿಣಾಮ ನಾವೇ ನಮ್ಮ ಸ್ವಂತ ಹಣ ಖರ್ಚು ಮಾಡಿ ಉಪಹಾರ ಸೇವಿಸುತ್ತಿದ್ದೇವೆ. ನಮ್ಮಂತ ಬಡ ಕಾರ್ಮಿಕರ ಕಷ್ಟ ಕೇಳುವವರು ಯಾರಿಲ್ಲ ಎನ್ನುತ್ತಾರೆ ಹೆಸರೇಳಲಿಚ್ಚಿಸದ ಪೌರ ಕಾರ್ಮಿಕ.ಈ ಹಿಂದಿನ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಇದೂವರೆಗೂ ಯಾವುದೇ ಲೆಕ್ಕ ಮಂಡನೆ ಮಾಡದ ಪರಿಣಾಮ ಸಂಘ ಈ ಅವ್ಯವಸ್ಥೆ ಕಂಡಿದೆ. ಜೊತೆಗೆ ನಾವು ನಮ್ಮ ಸಮಸ್ಯೆಗಳಿಗೆ ಧ್ವನಿ ಎತ್ತಿದರೆ ನಮ್ಮ ಸಂಬಳ ಮತ್ತು ನಾವು ಮಾಡುವ ಕೆಲಸಗಳಿಗೆ ಕುತ್ತು ಬರುವ ಪರಿಸ್ಥಿತಿ ಇದ್ದು, ಜಿಲ್ಲಾಧಿಕಾರಿ ಪುರಸಭೆಗೆ ಆಗಮಿಸಿ ನಮ್ಮ ಸಮಸ್ಯೆ ಬಗೆಹರಿಸಬೇಕು. ಸರಿಯಾದ ಸಮಯಕ್ಕೆ ಉಪಹಾರ ನೀಡಿದ ಗುತ್ತಿಗೆದಾರನಿಗೆ ಬಿಲ್ ಪಾವತಿ ಮಾಡಿದ್ದರೆ ಬೇಕಾದಷ್ಟು ಹೊಟೇಲ್ ಮಾಲೀಕರು ಬಂದು ಟೆಂಡರ್ ನಲ್ಲಿ ಭಾಗವಹಿಸುತ್ತಿದ್ದರು. ಇವರ ನಿರ್ಲಕ್ಷ್ಯದಿಂದ ನಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿ ಕೊಳ್ಳುವಂತಾಗಿದೆ ಎನ್ನುತ್ತಾರೆ ಬೀರೂರು ಪುರಸಭೆ ಪೌರಕಾರ್ಮಿಕರು.ಕೋಟ್
ಕಳೆದ 6 ತಿಂಗಳ ಹಿಂದೆ ಪೌರಕಾರ್ಮಿಕರ ಉಪಹಾರ ನೀಡುವ ವ್ಯವಸ್ಥೆ ನಿಂತು ಹೋಗಿರುವ ಬಗ್ಗೆ ಮಾಹಿತಿ ಇದೆ. ಅಧಿಕಾರಿಗಳನ್ನ ಕೇಳಿದರೆ ಟೆಂಡರ್ ಮಾಡಿದ್ದ ವ್ಯಕ್ತಿಯ ಟೆಂಡರ್ ಮುಕ್ತಾಯವಾಗಿದ್ದು, ಮುಂದಿನ ಅವಧಿಗೆ ಟೆಂಡರ್ ಕರೆದರೂ ಯಾರೂ ಅರ್ಜಿ ಸಲ್ಲಿಸದ ಪರಿಣಾಮ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳ ಸಭೆ ನಡೆಸಿ ಪೌರಕಾರ್ಮಿಕರ ಸಮಸ್ಯೆ ಬಗೆಹರಿಸಲಾಗುವುದು.ವನಿತ ಮಧುಬಾವಿಮನೆ ಪುರಸಭೆ ಅಧ್ಯಕ್ಷೆ