ಬಿಸಿಯೂಟ ಸಿಬ್ಬಂದಿ ಗೌರವಧನ ಹೆಚ್ಚಿಸಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Feb 6, 2024 1:31 AM

ಸಾರಾಂಶ

ರಾಜ್ಯ ಸರ್ಕಾರ ಚುನಾವಣೆ ಮುನ್ನ ನೀಡಿದ ಭರವಸೆಯಂತೆ ಬಜೆಟ್‌ನಲ್ಲಿ ₹6 ಸಾವಿರ ಗೌರವಧನ ಹೆಚ್ಚಿಸಬೇಕು ಎಂದು ಒತ್ತಾಯಿಸಲಾಯಿತು.

ಬಳ್ಳಾರಿ: ರಾಜ್ಯದ ಕಾಂಗ್ರೆಸ್ ಸರ್ಕಾರ ಚುನಾವಣೆ ಮುನ್ನ ನೀಡಿದ ಭರವಸೆಯಂತೆ ಅಕ್ಷರ ದಾಸೋಹ ಬಿಸಿಯೂಟ ನೌಕರರಿಗೆ ಈ ಬಾರಿಯ ಬಜೆಟ್‌ನಲ್ಲಿ ₹6 ಸಾವಿರ ಗೌರವಧನ ಹೆಚ್ಚಿಸಬೇಕು. ಬಿಸಿಯೂಟ ತಯಾರಕರಿಗೆ ವರ್ಷದ 12 ತಿಂಗಳು ಗೌರವಧನ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಸಂಘದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಬಿಸಿಯೂಟ ತಯಾರಕರು ಹಾಗೂ ಸಹಾಯಕರು ಬಹುತೇಕರು ಒಂಟಿ ಮಹಿಳೆಯರಾಗಿದ್ದು, ವಿಧವೆಯರು ಆಗಿದ್ದಾರೆ. ಇವರೆಲ್ಲರೂ ಗೌರವಧನ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಸರ್ಕಾರ ನೀಡುವ ₹3600 ಗೌರವಧನ ಯಾವುದಕ್ಕೂ ಸಾಲುವುದಿಲ್ಲ. ಈ ಹಿಂದಿನ ಬಿಜೆಪಿ ಸರ್ಕಾರ ₹1 ಸಾವಿರ ಗೌರವಧನ ಹೆಚ್ಚಳ ಮಾಡುವ ಭರವಸೆ ನೀಡಿತ್ತು. ಆದರೆ, ನುಡಿದಂತೆ ನಡೆಯಲಿಲ್ಲ.

ರಾಜ್ಯದ ಕಾಂಗ್ರೆಸ್ ಸರ್ಕಾರ ಚುನಾವಣೆ ಮುನ್ನ ಭರವಸೆ ನೀಡಿದಂತೆ ಗೌರವಧನ ಹೆಚ್ಚಳ ಮಾಡಬೇಕು. ಆಗ ಮಾತ್ರ ಒಂದಷ್ಟು ಆರ್ಥಿಕ ಸಂಕಷ್ಟದಿಂದ ಪಾರಾಗುತ್ತಾರೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಇದೇ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಸಂಘದ ರಾಜ್ಯಾಧ್ಯಕ್ಷೆ ಎ. ಶಾಂತಾ ಅವರು, ರಾಜ್ಯ ಸರ್ಕಾರ ಚುನಾವಣೆ ಮುನ್ನ ನೀಡಿದ ಭರವಸೆಯಂತೆ ಬಜೆಟ್‌ನಲ್ಲಿ ₹6 ಸಾವಿರ ಗೌರವಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರದ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವವರು ಹಾಗೂ ಸಹಾಯಕರನ್ನು ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆಯ ಅನ್ವಯ ಶೆಡ್ಯೂಲ್‌ನಲ್ಲಿ ತಂದು ಆ ಹುದ್ದೆಗೆ ನಿಗದಿಪಡಿಸಿರುವಷ್ಟು ಮಾಸಿಕ ವೇತನ, ಇಪಿಎಫ್, ಇಎಸ್‌ಐ ಸೌಲಭ್ಯಗಳನ್ನು ನೀಡಬೇಕು ಎಂದು ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ. ಎನ್. ಪ್ರಮೋದ್ ಆಗ್ರಹಿಸಿದರು.

ಸಂಘಟನೆಯ ಜಿಲ್ಲಾ ಪ್ರಮುಖರಾದ ಗೀತಾ, ಮಂಜುಳಾ, ಬ್ಯಾಲಿಚಿಂತೆ ನಾಗರತ್ನ, ಲಕ್ಷ್ಮಿ, ಅನಸೂಯಮ್ಮ ಸೇರಿದಂತೆ ವಿವಿಧ ಶಾಲೆಗಳ ಬಿಸಿಯೂಟ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

Share this article