ಕಾರಟಗಿ:
ರಸಗೊಬ್ಬರ ವಿತರಣೆಯಲ್ಲಿ ನಿರ್ಲಕ್ಷ್ಯ ವಹಿಸಿದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕರೆ ನೀಡಿದ್ದ ಕಾರಟಗಿ ಬಂದ್ ವಿಫಲವಾಗಿದ್ದು ಕೇವಲ ಪ್ರತಿಭಟನಾ ಮೆರವಣಿಗೆ ಸೀಮಿತವಾಗಿತ್ತು. ಶುಕ್ರವಾರ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ಎಂದಿನಂತೆ ನಡೆಯಿತು.ಬಂದ್ ಕರೆಗೆ ಸಾರ್ವಜನಿಕರು ಹಾಗೂ ರೈತರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಆರ್.ಜಿ. ರಸ್ತೆಯ ಎರಡು ಬದಿಯಲ್ಲಿ ವಿವಿಧ ಅಂಗಡಿಗಳು ಬೆಳಗ್ಗೆ ಎಂದಿನಂತೆ ಬಾಗಿಲು ತೆರೆದು ವಹಿವಾಟ ಪ್ರಾರಂಭಿಸಿದರು. ದಲಾಲಿ ಬಜಾರ್, ವಿಶೇಷ ಎಪಿಎಂಸಿ ಮಾರುಕಟ್ಟೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೆ, ಉಳಿದಂತೆ ಪಟ್ಟಣದ ಎಲ್ಲಡೆ ಯಾವುದೇ ಬಂದ್ ಗಂಭೀರತೆಯ ಪರಿಣಾಮ ಕಾಣಿಸಲಿಲ್ಲ.
ಬಿಜೆಪಿಯ ಪ್ರತಿಭಟನಾ ಮೆರವಣಿಗೆ ಮಾರ್ಗದ ಎರಡು ಬದಿಯಲ್ಲಿ ಅಂಗಡಿ-ಮುಂಗಟ್ಟುಗಳು ಅರ್ಧ ಮುಚ್ಚಿಕೊಂಡಿದ್ದವು. ಕೆಲವರು ಎಲ್ಲ ಬಾಗಿಲು ತೆರೆದು ವ್ಯಾಪಾರ ನಡೆಸಿದ್ದರು. ಮೆರವಣಿಗೆ ಮುಂದೆ ಸಾಗುತ್ತಿದ್ದಂತೆಯೇ ಅಂಗಡಿ-ಮುಂಗಟ್ಟು ತೆರೆದು ವ್ಯಾಪಾರ ನಡೆಸಿದರು. ವಾಹನಗಳ ಓಡಾಟ, ಶಾಲಾ-ಕಾಲೇಜ್ ಎಂದಿನಂತೆ ನಡೆದವು.ಪ್ರತಿಭಟನಾ ಮೆರವಣಿಗೆ:
ಎಪಿಎಂಸಿ ಯಾರ್ಡ್‌ನಿಂದ ಎತ್ತಿನ ಬಂಡಿ ಮೂಲಕ ಆರಂಭವಾದ ಪ್ರತಿಭಟನಾ ಮೆರವಣಿಗೆ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮುಖ್ಯ ರಸ್ತೆಯ ಮಾರ್ಗವಾಗಿ ಕನಕದಾಸ ವೃತ್ತಕ್ಕೆ ಬಂದು ತಲುಪಿತು. ನಂತರ ಕನಕದಾಸ ವೃತ್ತದಲ್ಲಿ ಯೂರಿಯಾ ರಸಗೊಬ್ಬರದ ಚೀಲವಿಟ್ಟು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಪಕ್ಷದ ಹಿರಿಯ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬಳಿಕ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಎಂ. ಕುಮಾರಸ್ವಾಮಿಗೆ ಸಲ್ಲಿಸಿದರು.ಬಿಜೆಪಿ ರೈತ ಮೊರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಮಾತನಾಡಿ, ರಾಜ್ಯಕ್ಕೆ ಈ ಹಂಗಾಮಿನಲ್ಲಿ ೧೨.೯೫ ಲಕ್ಷ ಮೆಟ್ರಿಕ್ ಯೂರಿಯಾ ಗೊಬ್ಬರದ ಅಗತ್ಯವಿತ್ತು. ಈ ಪೈಕಿ ಲಭ್ಯವಿರುವ ದಾಸ್ತಾನು ಆಧರಿಸಿ ಕೇಂದ್ರ ೧೧.೧೭ ಲಕ್ಷ ಮೆಟ್ರಿಕ್ ಟನ್ ಹಂಚಿಕೆ ಮಾಡಿತ್ತು. ಅದರಲ್ಲಿ ೮.೭೩ ಲಕ್ಷ ಮೆಟ್ರಿಕ್ ಟನ್ ಸರಬರಾಜು ಮಾಡಿದೆ. ಅದರಲ್ಲಿ ೫.೪೭ ಲಕ್ಷ ಮೆಟ್ರಿಕ್ ಟನ್ ರೈತರಿಗೆ ಹಂಚಿಕೆ ಮಾಡಿದೆ. ಇನ್ನುಳಿದ 2.50 ಲಕ್ಷ ಮೆಟ್ರಿಕ್ ಟನ್ ಗೊಬ್ಬರವನ್ನು ಕಾಳಸಂತೆಯಲ್ಲಿ ₹ 500ರಿಂದ ₹ 600ಕ್ಕೆ ಪ್ಲಾಸ್ಟಿಕ್, ಪ್ಲೈವುಡ್ ಸೇರಿದಂತೆ ಹಲವು ಕೈಗಾರಿಕೆಗಳಿಗೆ ಸರ್ಕಾರ ಮಾರಾಟ ಮಾಡಿದೆ. ಇತ್ತ ರೈತನ ಬಾಯಿಗೆ ಮಣ್ಣು ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೊಬ್ಬರ ಸಿಗದೆ ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ ಕೊಪ್ಪಳ ತಾಲೂಕಿನ ಕುಣಿಕೇರಿ ತಾಂಡಾದ ಚಂದ್ರಪ್ಪ ಬಡಗಿ ಮನಗೆ ಹೋಗಿ ಸಂತೈಸುವ ವ್ಯವಧಾನ ಸರ್ಕಾರಕ್ಕೆ ಇಲ್ಲ. ನಾವೇ ಹೋಗಿ ಎರಡು ಚೀಲ ಯೂರಿಯಾ ಕೊಟ್ಟು ಬಂದಿದ್ದೀವೆ ಎಂದ ಅವರು, ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಸರಬರಾಜಾಗುತ್ತಿರುವ ಬಿತ್ತನೆ ಬೀಜ ಕಳಪೆಯಿಂದ ಕೂಡಿದ್ದು ನಕಲಿ ರಸಗೊಬ್ಬರ ಕಂಪನಿಗಳು ತಲೆ ಎತ್ತಿವೆ. ರಾಜ್ಯಾದ್ಯಂತ ಸಂಚರಿಸಿ ಬೆಳೆ ಮತ್ತು ಬಿತ್ತನೆ ಮಾದರಿ ಪರಿಶೀಲಿಸಬೇಕಿದ್ದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಂಡ್ಯ ಜಿಲ್ಲೆಗೆ ಸೀಮಿತಗೊಂಡಿದ್ದಾರೆ ಎಂದು ಆರೋಪಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಮಾತನಾಡಿ, ನಾಟಿ ಕಾರ್ಯದಲ್ಲಿ ತೊಡಗಿರುವ ರೈತರಿಗೆ ಸಮರ್ಪಕವಾಗಿ ಯೂರಿಯಾ ದೊರಕುತ್ತಿಲ್ಲ. ರಾಜ್ಯ ಸರ್ಕಾರ ತಮ್ಮ ಬೆಂಬಲಿಗರ ಮೂಲಕ ಕಾಳಸಂತೆಯಲ್ಲಿ ಮಾರಾಟ ಮಾಡಿ ರೈತರಿಗೆ ಅನ್ಯಾಯ ಮಾಡಿದೆ. ಜಿಲ್ಲೆಯಲ್ಲಿ ಪೂರ್ಣಪ್ರಮಾಣದಲ್ಲಿ ರೈತರಿಗೆ ರಸಗೊಬ್ಬರ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಗಿರೇಗೌಡ ಹೋಸಕೇರಾ, ಗುರುಸಿದ್ಧಪ್ಪ ಯರಕಲ್, ದುರ್ಗೇಶ ಹೋಸಕೇರಾ, ನಾಗರಾಜ ಬಿಲ್ಗಾರ, ಮರಿಯಪ್ಪ ಸಾಲೋಣಿ ಮಾತನಾಡಿ, ರಸಗೊಬ್ಬರವನ್ನು ವೈಜ್ಞಾನಿಕವಾಗಿ ಶೇಖರಣೆ ಮಾಡದ ಪರಿಣಾಮ ಗೊಬ್ಬರದ ಅಭಾವ ಸೃಷ್ಟಿಯಾಗಿದೆ. ಕೆಲ ತಿಂಗಳ ಹಿಂದೆ ತಾಲೂಕಿನ ವಿವಿಧೆಡೆ ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಬೆಳೆಗೆ ಈ ವರೆಗೂ ಸರ್ಕಾರ ಪರಿಹಾರ ನೀಡದೆ ಇರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ.ಈ ವೇಳೆ ಬಿಜೆಪಿ ಮುಖಂಡರು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ರೈತ ಮೊರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.