ರಸ್ತೆ ಅಭಿವೃದ್ಧಿಗಾಗಿ ಬಿಜೆಪಿ, ಕಾಂಗ್ರೆಸ್‌ ಫೈಟ್‌

KannadaprabhaNewsNetwork |  
Published : Sep 27, 2025, 12:00 AM IST
4445 | Kannada Prabha

ಸಾರಾಂಶ

ಮಹಾನಗರದ ರಸ್ತೆಯಲ್ಲಿ ಬಿದ್ದಿರುವ ತಗ್ಗು-ಗುಂಡಿಗಳು ಜನಜೀವನ ಹಿಂಡುತ್ತಿವೆ ಎಂಬ ವಿಷಯವಾಗಿಯೇ ಬಿಜೆಪಿ, ಕಾಂಗ್ರೆಸ್ ಸದಸ್ಯರು ಅಲ್ಲಿಯೇ ಇದ್ದ ಎಲ್‌ಇಎ ಕ್ಯಾಂಟೀನ್ ಬಳಿಯ ರಸ್ತೆ ಸಂಚಾರ ತಡೆದು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಧಾರವಾಡ:

ಇನ್ನೂ ಸಾಮಾನ್ಯ ಸಭೆ ಆರಂಭವೇ ಆಗಿರಲಿಲ್ಲ. ಆಗಲೇ ಮಹಾನಗರ ಪಾಲಿಕೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ರಸ್ತೆ ಅಭಿವೃದ್ಧಿ ವಿಚಾರವಾಗಿ ಪರಸ್ಪರ ಪ್ರತಿಭಟನೆ ನಡೆಸಿದ್ದು, ಈ ಬಾರಿಯ ಸಭೆ ವಿಶೇಷ.

ಇಲ್ಲಿನ ಮಹಾನಗರ ಪಾಲಿಕೆ ಕಚೇರಿಗೆ ಹೊಂದಿಕೊಂಡಿರುವ ರಸ್ತೆಯಲ್ಲಿ ಪ್ರತಿಭಟನೆ ಆರಂಭಗೊಂಡಿತು. ಮಹಾನಗರದ ರಸ್ತೆಯಲ್ಲಿ ಬಿದ್ದಿರುವ ತಗ್ಗು-ಗುಂಡಿಗಳು ಜನಜೀವನ ಹಿಂಡುತ್ತಿವೆ ಎಂಬ ವಿಷಯವಾಗಿಯೇ ಬಿಜೆಪಿ, ಕಾಂಗ್ರೆಸ್ ಸದಸ್ಯರು ಅಲ್ಲಿಯೇ ಇದ್ದ ಎಲ್‌ಇಎ ಕ್ಯಾಂಟೀನ್ ಬಳಿಯ ರಸ್ತೆ ಸಂಚಾರ ತಡೆದು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಬಿಜೆಪಿ ನೇತೃತ್ವದ ಮಹಾನಗರ ಪಾಲಿಕೆ ಆಡಳಿತವು ಈ ತಗ್ಗು-ಗುಂಡಿಗಳನ್ನು ಮುಚ್ಚುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸತು. ಆದರೆ, ಅಭಿವೃದ್ಧಿ ಕೆಲಸಗಳಿಗೆ ಕಾಂಗ್ರೆಸ್ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಈ ಪ್ರತಿಭಟನೆಗೆ ಬಿಜೆಪಿ ಸದಸ್ಯರು ಪ್ರತ್ಯುತ್ತರವಾಗಿ ಹೋರಾಟ ನಡೆಸಿದರು.

ಧಾರವಾಡ ನಗರದಿಂದ ಗ್ರಾಮೀಣ ಹಾಗೂ ಹೊರ ಜಿಲ್ಲೆಗಳಿಗೆ ತೆರಳುವ ವಾಹನಗಳಿಗೆ ಪ್ರಮುಖವಾದ ಈ ರಸ್ತೆ ಸ್ಥಿತಿಯನ್ನೇ ನೋಡಿ. ಇದೇ ರೀತಿ ಅವಳಿ ನಗರದ ರಸ್ತೆಗಳು ಹಾಳಾಗಿವೆ ಎಂದು ಆರೋಪಿಸಿದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಪಾಲಿಕೆ ಸದಸ್ಯರು, 100 ಮೀಟರ್ ಅಂತರದಲ್ಲಿಯೇ ಪ್ರತಿಭಟನಾ ಧರಣಿ ನಡೆಸಿದ್ದು ವಿಶೇಷ. ಈ ವೇಳೆ ಪರಸ್ಪರ ಘೋಷಣೆ ಕೂಗಿ ಪ್ರತಿಭಟನೆ ಮುಗಿಸಿದ ಉಭಯ ಪಕ್ಷಗಳ ಸದಸ್ಯರು ಅಲ್ಲಿಂದ ಪಾಲಿಕೆ ಸಾಮಾನ್ಯ ಸಭೆಗೆ ಹಾಜರಾದರು. ವಿಚಿತ್ರವೆಂದರೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಯಾರೂ ಪ್ರಶ್ನಿಸಲಿಲ್ಲ, ಉತ್ತರವನ್ನೂ ಪಡೆಯಲಿಲ್ಲ.

ರಸ್ತೆ ತಗ್ಗು-ಗುಂಡಿಗಳಿಗೆ ಪೂಜೆ ಸಲ್ಲಿಸಿ, ಹಾಡಾಡಿ ಅಳುವ ಮೂಲಕ ಪಾಲಿಕೆ ಆಡಳಿತದಲ್ಲಿ ಇರುವ ಬಿಜೆಪಿ ನಾಯಕರು ವಿಫಲತೆಯನ್ನು ಕೈ ಸದಸ್ಯರು ಎತ್ತಿ ತೋರಿಸಿದರು. ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಎಲಿಗಾರ, ಪಾಲಿಕೆ ಸದಸ್ಯ ರಾಜಶೇಖರ ಕಮತಿ, ಶಂಭು ಸಾಲಮನಿ, ದೀಪಾ ನೀರಲಕಟ್ಟಿ, ಸುವರ್ಣ ಕಲಕಂಟ್ಲ, ಪ್ರಕಾಶ ಘಾಟಗೆ, ಕವಿತಾ ಕಬ್ಬೇರ, ಮಂಜುನಾಥ ಬಡಕುರಿ, ಸೂರವ್ವ ಪಾಟೀಲ, ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಇತರರಿದ್ದರು.

ಬಿಜೆಪಿಯಿಂದ ಪ್ರತ್ಯುತ್ತರ ಪ್ರತಿಭಟನೆ:

ಹು-ಧಾ ಮಹಾನಗರದ ರಸ್ತೆಯ ತಗ್ಗು-ಗುಂಡಿಗಳ ವಿಚಾರವಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಬಿಜೆಪಿ ಪ್ರತ್ಯುತ್ತರವಾಗಿ ಪ್ರತಿಭಟನೆ ನಡೆಸಿ ಗಮನ ಸೆಳೆಯಿತು. ರಾಜ್ಯ ಸರ್ಕಾರ ಅನುದಾನ ನೀಡಿಲ್ಲ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕಾಣೆಯಾಗಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಸೂಕ್ತ ಅನುದಾನ ಬಿಡುಗಡೆ ಮಾಡಿಲ್ಲ, ಕಾಂಗ್ರೆಸ್ ಆಡಳಿತ ಅಧೋಗತಿಗೆ ಇಳಿದಿದೆ ಎಂದು ಬಿಜೆಪಿಗರು ಆರೋಪಿಸಿದರು. ಪ್ರತಿಭಟನೆಯಲ್ಲಿ ಪಾಲಿಕೆ ಸಭಾ ನಾಯಕ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯ ಶಂಕರ ಶಳಕೆ, ತಿಪ್ಪಣ್ಣ ಮಜ್ಜಗಿ, ಸಂಜಯ ಕಪಟಕರ, ಮಂಜುನಾಥ ನಡಟ್ಟಿ, ದೇವರಾಜ ಶಹಾಪೂರ ಸೇರಿದಂತೆ ಇತರರು ಇದ್ದರು.ಕಾಂಗ್ರೆಸ್ ಸರ್ಕಾರ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿಲ್ಲ, ರಸ್ತೆಯಲ್ಲಿ ಮಳೆಯಿಂದ ತಗ್ಗು-ಗುಂಡಿಗಳು ಬಿದ್ದು ಜನರು ಪರದಾಡುವ ಸ್ಥಿತಿ ಸದ್ಯದಲ್ಲಿದ್ದು, ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಅನುದಾನ ತರಲು ವಿಫಲವಾಗಿರುವ ಪಾಲಿಕೆ ಕಾಂಗ್ರೆಸ್ ಸದಸ್ಯರು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸುವುದು ಹಾಸ್ಯಾಸ್ಪದ.

ಈರೇಶ ಅಂಚಟಗೇರಿ, ಪಾಲಿಕೆ ಸಭಾ ನಾಯಕಹು-ಧಾ ಮಹಾನಗರ ಪಾಲಿಕೆಯಲ್ಲಿ ಕಳೆದ 30 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿ ಇಲ್ಲಿನ ರಸ್ತೆಗಳ ತಗ್ಗು-ಗುಂಡಿ ಮುಚ್ಚಲು ವಿಫಲವಾಗಿದೆ. ಪಾಲಿಕೆಯಲ್ಲಿ ದುರಾಡಳಿತ ನಡೆಸಿದ ಬಿಜೆಪಿ ಯಾವುದೇ ಅಭಿವೃದ್ಧಿ ಕೈಗೊಂಡಿಲ್ಲ, ಬಿಜೆಪಿ ಪಾಲಿಕೆ ಅಧಿಕಾರಿಗಳನ್ನು ಕೈಗೊಂಬೆ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿದೆ.

ಇಮ್ರಾನ್ ಎಲಿಗಾರ, ಪಾಲಿಕೆ ವಿಪಕ್ಷ ನಾಯಕ

PREV

Recommended Stories

ಹತ್ತು ವರ್ಷವಾದ್ರೂ ನೇಕಾರರ ಮನೆಗಳಿಗಿಲ್ಲ ಮುಕ್ತಿ
ಭೀಮಾನದಿ ನೀರಿನ ಹರಿವು ಮತ್ತೆ ಏರಿಕೆ