ಬಾಗಲಕೋಟೆ, ದಾವಣಗೆರೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಮತಯಾಚನೆ

KannadaprabhaNewsNetwork |  
Published : Mar 29, 2026, 01:45 AM IST
ಪ್ರದೀಪ್‌ ಈಶ್ವರ್ ಪ್ರಚಾರ | Kannada Prabha

ಸಾರಾಂಶ

ಏ.9ರಂದು ನಡೆಯಲಿರುವ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ರಾಜಕೀಯ ನಾಯಕರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ/ದಾವಣಗೆರೆ:

ಏ.9ರಂದು ನಡೆಯಲಿರುವ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ರಾಜಕೀಯ ನಾಯಕರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

ಬಾಗಲಕೋಟೆಯಲ್ಲಿ ಪ್ರಚಾರ ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಡಾ। ವೀರಣ್ಣ ಚರಂತಿಮಠ ಪರ ಅವರ ಧರ್ಮಪತ್ನಿ ರಾಜೇಶ್ವರಿ, ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ, ಶ್ರೀರಾಮುಲು, ಸಂಸದ ಗೋವಿಂದ ಕಾರಜೋಳ ಭರ್ಜರಿ ಪ್ರಚಾರ ನಡೆಸಿದರು.

ದಾವಣಗೆರೆಯಲ್ಲೂ ಪ್ರಚಾರಕಣ ರಂಗೇರಿದ್ದು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆನೆಕೊಂಡದಲ್ಲಿ ಸಂಸದೆ ಡಾ। ಪ್ರಭಾ ಮಲ್ಲಿಕಾರ್ಜುನ್ ಪ್ರಚಾರ ನಡೆಸಿದರು.

ಇದೇ ವೇಳೆ, ತಾಕತ್ತಿದ್ದರೆ ದಾವಣಗೆರೆಗೆ ಬಾ ಎಂಬ ಮಾಜಿ ಮೇಯರ್ ಅಜಯ ಕುಮಾರ ಸವಾಲನ್ನು ಸ್ವೀಕರಿಸಿದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ ಈಶ್ವರ, ನಗರದ ಕೆ.ಬಿ.ಬಡಾವಣೆಯಲ್ಲಿ ಬಿಎಂಡಬ್ಲ್ಯು ಕಾರಿನ ಮೇಲೆ ನಿಂತು, ಕಾಂಗ್ರೆಸ್ ಬಾವುಟ ಹಿಡಿದು, ಸಮರ್ಥ ಪರ ಪ್ರಚಾರ ನಡೆಸಿ, ತೊಡೆತಟ್ಟಿದರು.

ಈ ಮಧ್ಯೆ, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ಪರ ಪ್ರಚಾರ ನಡೆಸಿದ ಬಿಜೆಪಿ ಮುಖಂಡ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ಪ್ರದೀಪ ಈಶ್ವರ ವಿರುದ್ಧ ಹರಿಹಾಯ್ದರು. ಈ ಕ್ಷಣದಿಂದಲೇ ಪ್ರದೀಪ ಈಶ್ವರಗೆ ಯಾವ ರೀತಿ ಗೌರವ ಕೊಡಬೇಕೆಂಬುದನ್ನು ಆ ಕ್ಷೇತ್ರದ ಜನ ನಿರ್ಧರಿಸುತ್ತಾರೆ ಎಂದರು. ಇದೇ ವೇಳೆ, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ಅವರು ಮನೆ, ಮನೆಗೆ ತೆರಳಿ ಪ್ರಚಾರ ನಡೆಸಿದರು.ನಾಳೆಯಿಂದ ಸಿಎಂ ಪ್ರಚಾರ:

ರಾಜ್ಯದಲ್ಲಿ ನಡೆಯಲಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪ್ರಚಾರ ಸೋಮವಾರದಿಂದ ರಂಗೇರುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಇತರ ನಾಯಕರು ಚುನಾವಣಾ ಪ್ರಚಾರದ ಕಣಕ್ಕಿಳಿಯುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರದಿಂದ ಉಪಚುನಾವಣೆ ಪ್ರಚಾರದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಮೊದಲಿಗೆ ಬಾಗಲಕೋಟೆಯಲ್ಲಿ ಪ್ರಚಾರ ಆರಂಭಿಸಲಿರುವ ಸಿದ್ದರಾಮಯ್ಯ, ನಂತರ ದಾವಣಗೆರೆಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಮತದಾರರನ್ನು ಸೆಳೆಯುವ ಕೆಲಸ ಮಾಡಲಿದ್ದಾರೆ. ಸೋಮವಾರ ಸಿದ್ದರಾಮಯ್ಯ ಅವರು ಬಾಗಲಕೋಟೆಗೆ ತೆರಳಿ ಪಕ್ಷದ ಅಭ್ಯರ್ಥಿ ಉಮೇಶ್‌ ಮೇಟಿ ಪರವಾಗಿ ಎರಡು ದಿನಗಳ ಕಾಲ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ. ಅದಾದ ನಂತರ ದಾವಣಗೆರೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ್‌ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಸದ್ಯ ಚುನಾವಣೆ ಪ್ರಚಾರಕ್ಕಾಗಿ ಡಿ.ಕೆ. ಶಿವಕುಮಾರ್ ಅವರು ಅಸ್ಸಾಂ ಪ್ರವಾಸದಲ್ಲಿದ್ದಾರೆ. ಭಾನುವಾರ ರಾತ್ರಿ ಅಥವಾ ಸೋಮವಾರ ವಾಪಾಸುವ ನಿರೀಕ್ಷೆಯಿದೆ. ರಾಜ್ಯಕ್ಕಾಗಮಿಸಿದ ನಂತರ ಅವರು ಬಾಗಲಕೋಟೆ ಅಥವಾ ದಾವಣಗೆರೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗುವ ಸಾಧ್ಯತೆಗಳಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಣ್ಣಿಗೇರಿ ಪುರಸಭೆಯಿಂದ ಜನರ ಮೇಲೆ ತೆರಿಗೆ ಬಾರ
ದ್ವಿಭಾಷಾ ನೀತಿ ಎಲ್ಲರೂ ಒಪ್ಪಲೇಬೇಕು: ಸಿಎಂ