ಕನ್ನಡಪ್ರಭ ವಾರ್ತೆ ಮಂಗಳೂರು
ಈ ಚುನಾವಣೆಯಲ್ಲಿ ಬಿಜೆಪಿ ಸದಸ್ಯರಾಗಿರುವ ಜಿಲ್ಲೆಯ ಎಲ್ಲ ಸಹಕಾರಿಗಳೂ ಸಕ್ರಿಯರಾಗಿ ತೊಡಗಿಸಿಕೊಂಡು ಪಕ್ಷದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರನ್ನು ಗೆಲ್ಲಿಸಲು ಶ್ರಮಿಸಬೇಕು ಎಂದು ಬಿಜೆಪಿ ದ.ಕ ಜಿಲ್ಲಾ ಸಹಕಾರಿ ಪ್ರಕೋಷ್ಠದ ಸಂಚಾಲಕ ಟಿ.ಜಿ ರಾಜಾರಾಂ ಭಟ್ ಹಾಗೂ ಸಹಸಂಚಾಲಕರಾದ ಶ್ರೀನಿವಾಸ ಶೇಟ್ ಮತ್ತು ರಕ್ಷಿತ್ ಶೆಟ್ಟಿ ಅವರು ಮನವಿ ಮಾಡಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್.ಡಿ.ಎ. ಸರ್ಕಾರವನ್ನು 400ಕ್ಕಿಂತಲೂ ಹೆಚ್ಚು ಸ್ಥಾನಗಳೊಂದಿಗೆ ಮರಳಿ ಅಧಿಕಾರಕ್ಕೆ ತರುವಲ್ಲಿ ಸಹಕಾರಿಗಳು ಪ್ರಯತ್ನಿಸಬೇಕೆಂದು ಹೇಳಿದರು.
ನೂರಾರು ವರ್ಷಗಳ ಇತಿಹಾಸವಿರುವ ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ಸಹಕಾರಿ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಸಹಕಾರಿ ಸಚಿವಾಲಯವನ್ನು ಸ್ಥಾಪಿಸಿ ಗೃಹ ಸಚಿವ ಅಮಿತ್ ಷಾ ರವರನ್ನು ಸಹಕಾರಿ ಮಂತ್ರಿಗಳಾಗಿ ನೇಮಕ ಮಾಡುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಹೊಸತನದ ಸಂಚಲನ ಉಂಟುಮಾಡಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ದೇಶವ್ಯಾಪಿಯಾಗಿ ಒಂದು ದೇಶ ಒಂದೇ ಬೈಲಾ ಮತ್ತು ಒಂದು ದೇಶ ಒಂದೇ ಸಾಫ್ಟ್‌ವೇರ್ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಈ ದೇಶದ ಎಲ್ಲಾ ಸಹಕಾರಿ ಸಂಘಗಳನ್ನು ಏಕರೂಪಕ್ಕೆ ತಂದಿದ್ದಾರೆ. ಆ ಮೂಲಕ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಸಹಕಾರಿ ಸಚಿವ ಅಮಿತ್ ಶಾ ಕಾರಣರಾಗಿದ್ದಾರೆ.ಈ ರೀತಿ ದೇಶದ ಸಮಸ್ತ ಸಹಕಾರಿಗಳು ಹಾಗೂ ರೈತರ ಮೊಗದಲ್ಲಿ ಸಂತಸಕ್ಕೆ ಕಾರಣರಾಗಿರುವ ನರೇಂದ್ರ ಮೋದಿ ಸರ್ಕಾರವನ್ನು ಮೂರನೆಯ ಅವಧಿಗೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಹಕಾರಿ ಪರಿವಾರದ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಸ್ತರದ ಸಹಕಾರ ಸಂಸ್ಥೆಗಳ ಪ್ರತಿನಿಧಿಗಳು ಇನ್ನು ಉಳಿದ ದಿನಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕೆಂದು ಸಹಕಾರಿ ಪ್ರಕೋಷ್ಠದ ಸಂಚಾಲಕರು ಕೋರಿದ್ದಾರೆ.