- ಬೆಂಗಳೂರಲ್ಲಿ ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ ಸಮ್ಮುಖ ಜಿ.ಎಂ. ಸಿದ್ದೇಶ್ವರ ನೇತೃತ್ವದ ಗುಂಪು ನಿರ್ಧಾರ
- ಸದಾಶಿವ ನಗರದಲ್ಲಿ ಮಾಜಿ ಸಚಿವ ಕುಮಾರ ಬಂಗಾರಪ್ಪ ನಿವಾಸದಲ್ಲಿ ನಡೆದ ಸಭೆ
- ರೇಣುಕಾಚಾರ್ಯ-ರವೀಂದ್ರನಾಥ ಲಗಾನ್ ಟೀಂನಿಂದ ದಾವಣಗೆರೆ ಕ್ಷೇತ್ರದ ಸೋಲಾಯ್ತು - ಲಗಾನ್ ಟೀಂ ವಿರುದ್ಧ ಶಿಸ್ತು ಕ್ರಮ, ಜಿಲ್ಲಾಧ್ಯಕ್ಷರ ಬದಲಿಸಲು ಸಿದ್ದೇಶ್ವರ, ಹರೀಶ ಟೀಂ ಪಟ್ಟು- ಯಾರ ಜೊತೆಗೆ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ, ನಾನು ಪಕ್ಷದ ಪರವಾಗಿಯೇ ಇದ್ದೇನೆ: ಸಿದ್ದೇಶ್ವರ
ಕನ್ನಡಪ್ರಭ ವಾರ್ತೆ ದಾವಣಗೆರೆ
ಬೆಂಗಳೂರಿನ ಸದಾಶಿವ ನಗರದಲ್ಲಿ ಮಾಜಿ ಸಚಿವ ಕುಮಾರ ಬಂಗಾರಪ್ಪ ನಿವಾಸದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಇತರರ ಸಮಕ್ಷಮ ರಾಜ್ಯಮಟ್ಟದ ಸಭೆಯ ನಂತರ ದಾವಣಗೆರೆ ಲೋಕಸಭಾ ಕ್ಷೇತ್ರದ ಸೋಲಿನ ವಿಚಾರವಾಗಿ ಜಿಲ್ಲೆಯ ಮುಖಂಡರ ಸಭೆಯಲ್ಲಿ ಬಿಜೆಪಿ ಸೋಲಿಗೆ ಕಾರಣರಾದವರ ವಿರುದ್ಧ ಮೊದಲು ಶಿಸ್ತು ಕ್ರಮ ಆಗಬೇಕು. ಒಂದು ಗುಂಪಿನ ಕಡೆಗೆ ಒಲವು ಹೊಂದಿರುವ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡುವಂತೆ ರಾಷ್ಟ್ರೀಯ ನಾಯಕರನ್ನು ಒತ್ತಾಯಿಸಲು ಸಭೆ ನಿರ್ಧರಿಸಿತು ಎನ್ನಲಾಗಿದೆ.
ಆದರೆ, ಸಿದ್ದೇಶ್ವರ ಅದನ್ನು ನಿರಾಕರಿಸಿದ್ದಲ್ಲದೇ, ನಮ್ಮ ಬೇಡಿಕೆಗಳನ್ನು ಈಡೇರಿಸದ ಹೊರತು, ಯಾವುದೇ ಮಾತುಕತೆ ಇಲ್ಲವೆಂದು ಹೇಳಿ ಕಳಿಸಿದ್ದರು. ವಿಜಯೇಂದ್ರ ಜೊತೆ ಮಾತುಕತೆಯಾಗಿ ಹೊಂದಾಣಿಕೆಯಾಗಿದೆ ಎಂದು ಪುಕಾರು ಹಬ್ಬಿದೆ. ಆದರೆ, ನಾನು ಯಾರ ಜೊತೆಗೆ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ. ನಾನು ಪಕ್ಷದ ಪರವಾಗಿಯೇ ಇದ್ದೇನೆ. ನಾನು ಪಕ್ಷದ ಪರವಾಗಿ ಕೆಲಸ ಮಾಡುವವನು. ನಮ್ಮ ಗುಂಪು ಇದೆ. ಲೋಕಸಭೆ ಚುನಾವಣೆಯಲ್ಲಿ ಯಾರು ಪಕ್ಷವಿರೋಧಿ ಚಟುವಟಿಕೆ ಮಾಡಿದ್ದವರ ವಿರುದ್ಧ ಶಿಸ್ತುಕ್ರಮ ಆಗಬೇಕು, ಒಂದು ಕಡೆ ಗುರುತಿಸಿಕೊಂಡ ಜಿಲ್ಲಾಧ್ಯಕ್ಷರ ಬದಲಾವಣೆ ಆಗಬೇಕೆಂಬುದನ್ನು ಸ್ಪಷ್ಟವಾಗಿ ಹೇಳಿ ಕಳಿಸಿದ್ದೆ ಎಂದು ಸಿದ್ದೇಶ್ವರ ಸಭೆಯಲ್ಲಿ ಹೇಳಿದ್ದಾರೆಂದು ಗೊತ್ತಾಗಿದೆ.
ಹರಿಹರ ಶಾಸಕ ಬಿ.ಪಿ.ಹರೀಶ, ಜಗಳೂರು ಮಾಜಿ ಶಾಸಕ ಎಚ್.ಪಿ.ರಾಜೇಶ, ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಯಶವಂತ ರಾವ್ ಜಾಧವ್, ಎಸ್.ಎಂ. ವೀರೇಶ ಹನಗವಾಡಿ, ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ಹೊನ್ನಾಳಿ ಕ್ಷೇತ್ರದ ಎ.ಬಿ.ಹನುಮಂತಪ್ಪ, ಶಾಂತರಾಜ ಪಾಟೀಲ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಸಂಗನಗೌಡ, ದೇವೇಂದ್ರಪ್ಪ, ಬಾತಿ ದೊಗ್ಗಳ್ಳಿ ವೀರೇಶ, ಗುಡ್ಡೇಶ ಸೇರಿದಂತೆ ಸುಮಾರು 30 ಮುಖಂಡರು ಸಭೆಯಲ್ಲಿದ್ದರು.
(ಬಾಕ್ಸ್) * ಲಗಾನ್ ಟೀಂಗೆ ಶಿಸ್ತು ಕ್ರಮ, ಜಿಲ್ಲಾಧ್ಯಕ್ಷ ಬದಲಾಗಲಿ ದೆಹಲಿಯಲ್ಲಿ ನಮ್ಮ ನಾಯಕರಾದ ಅಮಿತ್ ಶಾ, ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಲಿದ್ದೇವೆ. ಜಿ.ಎಂ.ಸಿದ್ದೇಶ್ವರ, ರಮೇಶ ಜಾರಕಿಹೊಳಿ, ಕುಮಾರ ಬಂಗಾರಪ್ಪ ಸೇರಿದಂತೆ ನಮ್ಮೆಲ್ಲಾ ತಂಡದ ಸದಸ್ಯರು ಹೋಗುತ್ತೇವೆ. ದಾವಣಗೆರೆ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂಬುದಾಗಿ ನಮ್ಮ ರಾಷ್ಟ್ರೀಯ ನಾಯಕರಿಗೂ ಗೊತ್ತಿದೆ. ಆದರೆ, ಲಗಾನ್ ಟೀಂನವರ ಪಕ್ಷ ವಿರೋಧಿ ಚಟುವಟಿಕೆಯಿಂದ ಸೋಲುಂಟಾಗಿದೆ. ಈ ಎಲ್ಲ ವಿಚಾರ ನಾಯಕರಿಗೂ ಗೊತ್ತಿದೆ. ಲಗಾನ್ ಟೀಂ ವಿರುದ್ಧ ಶಿಸ್ತು ಕ್ರಮ, ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷರ ಬದಲಾವಣೆ ಇವು ನಮ್ಮ ಮುಖ್ಯ ಬೇಡಿಕೆಗಳು ಎಂಬುದಾಗಿ ಸಭೆಯಲ್ಲಿದ್ದ ಅನೇಕರ ಒತ್ತಾಯವಾಗಿತ್ತು.
-20ಕೆಡಿವಿಜಿ11:
ಬೆಂಗಳೂರಿನ ಸದಾಶಿವ ನಗರದಲ್ಲಿ ಮಾಜಿ ಸಚಿವ ಕುಮಾರ ಬಂಗಾರಪ್ಪ ನಿವಾಸದಲ್ಲಿ ರಮೇಶ ಜಾರಕಿಹೊಳಿ, ಜಿ.ಎಂ.ಸಿದ್ದೇಶ್ವರ, ಬಿ.ಪಿ.ಹರೀಶ ದಾವಣಗೆರೆ ಜಿಲ್ಲಾ ಬಿಜೆಪಿ ಮುಖಂಡರ ಜೊತೆ ಚರ್ಚೆ ನಡೆಯಿತು.