ಕನ್ನಡಪ್ರಭ ವಾರ್ತೆ ಮಂಡ್ಯ
ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಐವಾನ್ ಡಿಸೋಜಾ ರಾಜ್ಯಪಾಲರ ಬಗ್ಗೆ ಬಾಯಿಗೆ ಬಂದಂತೆ ಹರಟಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಯುವ ಮೋರ್ಚಾ ಅಧ್ಯಕ್ಷ ಎಚ್.ಎಂ.ರಘುಗೌಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಮನವಿ ನೀಡಿದರು.
ನಂತರ ಎಚ್.ಎಂ.ರಘುಗೌಡ ಮಾತನಾಡಿ, ಶಾಸಕರಾಗಿರುವ ಐವಾನ್ ಡಿಸೋಜಾ ಅವರು ಆ ಸ್ಥಾನಕ್ಕೆ ಗೌರವ ತರುವ ರೀತಿಯಲ್ಲಿ ಮಾತನಾಡದೆ, ಸಾಂವಿಧಾನಿಕ ಹುದ್ದೆಯಲ್ಲಿರುವವರು ಕಾನೂನಾತ್ಮಕವಾಗಿ ನಡೆದುಕೊಂಡಾಗ ಬಾಂಗ್ಲಾದೇಶದ ಪ್ರಧಾನಿ ರೀತಿ ಕರ್ನಾಟಕದಿಂದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ವಿರುದ್ಧ ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಎಐಸಿಸಿ ಕಾರ್ಯದರ್ಶಿ ಐವಾನ್ ಡಿಸೋಜಾ ಅವರು ಬಾಂಗ್ಲಾ ದೇಶದ ಪ್ರಧಾನ ಮಂತ್ರಿಯನ್ನು ಆ ರಾಷ್ಟ್ರದಿಂದ ಹೊರಹಾಕಿದಂತೆ ಕರ್ನಾಟಕದಿಂದ ರಾಜ್ಯಪಾಲರನ್ನು ಕಳುಹಿಸುತ್ತೇವೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ದೂರಿದರು.ಶಾಸಕ ಐವಾನ್ ಡಿಸೋಜಾ ಅವರು ರಾಜ್ಯದಲ್ಲಿ ಅಶಾಂತಿಯ ವಾತಾವರಣ ಉಂಟು ಮಾಡುವ ಹೇಳಿಕೆ ನೀಡಿ ತಪ್ಪು ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರ ಜೊತೆಗೂಡಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜೊತೆಗೆ ಮಾಧ್ಯಮಗಳಲ್ಲಿಯೂ ಪ್ರಕಟವಾಗಿದೆ, ಬಾಂಗ್ಲಾ ದೇಶದಲ್ಲಿ ನಡೆದ ಹಿಂಸಾತ್ಮಕ ಘಟನೆ ಮಾದರಿಯಲ್ಲೇ ಕರ್ನಾಟಕದಲ್ಲಿಯೂ ಸೃಷ್ಟಿಯಾಗಲಿದೆ. ರಾಜ್ಯಪಾಲರನ್ನು ರಾಜ್ಯದಿಂದ ಹೊರಹಾಕುವುದಾಗಿ ರಾಷ್ಟ್ರ ವಿರೋಧಿ ಹೇಳಿಕೆ ನೀಡಿ ಕೆಲವರನ್ನು ಪ್ರಚೋದಿಸುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾದರೆ ಅದಕ್ಕೆ ಶಾಸಕ ಐವಾನ್ ಡಿಸೋಜಾ ಅವರೇ ಕಾರಣ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಂಜು, ಪ್ರದೀಪ್, ದಯಾಕರ್, ಮೋಹನ್, ನಾಗರಾಜು, ನಂದಿ, ಪ್ರಸನ್ನ, ಶಿವಕುಮಾರ್, ಚಂದ್ರು ಭಾಗವಹಿಸಿದ್ದರು.