ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಹೊರವಲಯದ ಖಾಸಗಿ ಹೊಟೇಲ್‌ನಲ್ಲಿ ಮಾಧ್ಯಮಗೋಷ್ಠಿ ನಡೆಸಿ, ಜಿಲ್ಲಾಧ್ಯಕ್ಷರ ಕಾರ್ಯಶೈಲಿಯಿಂದ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಬಲ ಕಳೆದುಕೊಳ್ಳುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಸಮರ್ಥವಾಗಿ ಹೋರಾಟವನ್ನು ರೂಪಿಸುವಲ್ಲಿ ವಿಫಲರಾಗಿದ್ದಾರೆ. ಕಾಂಗ್ರೆಸ್‌ಗೆ ಸಹಕಾರ ನೀಡುತ್ತಾ, ನಮ್ಮ ಪಕ್ಷದ ಸಂಘಟನೆಯನ್ನು ಬಲಿ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ಜಗನ್ನಾಥ್ ಮಾತನಾಡಿ, ಜಿಲ್ಲಾಧ್ಯಕ್ಷ ಆನಂದ್ ಸ್ವಾಮಿ ಅವರು ವೈಫಲ್ಯದಿಂದ ಮತದಾರರು ಪಕ್ಷದಿಂದ ವಿಮುಖರಾಗುತ್ತಿದ್ದಾರೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಇಡೀ ಕಾಂಗ್ರೆಸ್ ಸರ್ಕಾರವೇ ಇಲ್ಲಿಗೆ ಬಂದು ನೂರಾರು ಕೋಟಿ ಅಭಿವೃದ್ಧಿ ಭರವಸೆಗಳನ್ನು ನೀಡಿತ್ತು. ಆದರೆ ಚನ್ನಪಟ್ಟಣ ಪ್ರಸ್ತುತ ಒಂದು ರಸ್ತೆ ಗುಂಡಿಯನ್ನು ಸಲ ಮುಚ್ಚಲು ಆಗುತ್ತಿಲ್ಲ. ಇದರ ವಿರುದ್ಧ ಹೋರಾಟ ಮಾಡಲು ಚನ್ನಪಟ್ಟಣ ಮೂಲದವರೇ ಆಗಿರುವ ಅಧ್ಯಕ್ಷರು ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದಾದರೂ ಏಕೆ ಎಂದು ಪ್ರಶ್ನಿಸಿದರು.ಸಿ.ಪಿ.ಯೋಗೇಶ್ವರ್ ಅವರು ಕಾಂಗ್ರೆಸ್‌ಗೆ ಹೋದಾಗ, ಇವರೂ ಹೋಗಬೇಕಿತ್ತು. ಆದರೆ, ಪಕ್ಷದಲ್ಲೇ ಇದ್ದುಕೊಂಡು ಬಿಜೆಪಿ ಸಂಘಟನೆಗೆ ಧಕ್ಕೆ ತರುತ್ತಿದ್ದಾರೆ. ಯೋಗೇಶ್ವರ್‌ಗೆ ಬೆಂಬಲ ನೀಡುತ್ತ, ನಮ್ಮ ಕಾರ್ಯಕರ್ತರನ್ನು ನಿರ್ಲಕ್ಷ್ಯದಿಂದ ಕಾಣುತ್ತಿದ್ದಾರೆ. ನೈಜ ಕಾರ್ಯಕರ್ತರ ಯಾವುದೇ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತಿಲ್ಲ. ಆನಂದಸ್ವಾಮಿ ಜಿಲ್ಲಾಧ್ಯಕ್ಷ ಹುದ್ದೆಗೆ ಅಸಮರ್ಥರು, ಅವರಿಂದ ವರಿಷ್ಠರು ಕೂಡಲೆ ರಾಜೀನಾಮೆ ಪಡೆದು ಪಕ್ಷ ಮತ್ತು ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕು ಎಂದರು.
ಇನ್ನೆರಡು ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ಬರಲಿವೆ. ಈ ಹಂತದಲ್ಲೂ ಪಕ್ಷವನ್ನು ಸಂಘಟಿಸಲು ಮುಂದಾಗುತ್ತಿಲ್ಲ. ಕೋರ್ ಕಮಿಟಿ ರಚನೆ ಮಾಡಲಾಗಿದೆ. ಅಲ್ಲೂ ಸಹ ಪಕ್ಷದ ಹಿರಿಯನ್ನು ಕಡೆಗಣಿಸಲಾಗಿದೆ. ಇವರಿಂದ ಪಕ್ಷದ ಪರ ಒಲವಿರುವ ಮತದಾರರು ವಿಮುಖರಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮುರಳೀಧರ್, ಶಿವಮಾದು ಮಾತನಾಡಿದರು. ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಪ್ರಕಾಶ್, ನಗರ ಘಟಕದ ಅಧ್ಯಕ್ಷ ದರ್ಶನ್, ಕಾರ್ಯದರ್ಶಿ ಸಂಜಯ್ ಜೈನ್, ಪ್ರಮುಖರಾದ ಮೈತ್ರಿ ಗೌಡ, ಸಾನ್ವಿ, ದೇವಿಕ, ರಾಮಾಂಜನೇಯ, ಸೀನಪ್ಪ, ಚಂದ್ರಶೇಖರ್ ರೆಡ್ಡಿ, ರಮೇಶ್ ಹಲವರು ಹಾಜರಿದ್ದರು.