ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಪಟ್ಟು

KannadaprabhaNewsNetwork |  
Published : Sep 25, 2024, 12:45 AM IST
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಮುಡಾ ಹಗರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊನೆ ಮೊಳೆಯಾಗಲಿದೆ ಎಂದು ಹೇಳಿದ್ದೆ. ಅದು ನಿಜವಾಗುವ ಸಮಯ ಬರುತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.

ಹುಬ್ಬಳ್ಳಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಮಂಗಳವಾರ ನಗರದಲ್ಲಿ ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇಲ್ಲಿನ ಅರವಿಂದ ನಗರದ ಬಿಜೆಪಿ ಕಾರ್ಯಾಲಯದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಕಾರವಾರ ರಸ್ತೆಯ ಇಎಸ್‌ಐ ಆಸ್ಪತ್ರೆಯ ವರೆಗೆ ನಡೆಯಿತು. ನಂತರ ಅಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ಭ್ರಷ್ಟ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ನಾನು ನಾನು ಕಳ್ಳ 14 ಪ್ಲಾಟ್ ಗುಳುಂ ಎಂಬ ಪೋಸ್ಟರ್ ಹಿಡಿದು ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ರಾಜ್ಯಪಾಲರು ಮುಖ್ಯಮಂತ್ರಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದಾಗ ದಲಿತ ಸಮುದಾಯದವರಾದ ಅವರ ಮೇಲೆ ಇಡೀ ಕಾಂಗ್ರೆಸ್ ಸರ್ಕಾರ ಮುಗಿ ಬಿದ್ದಿತ್ತು. ಅದನ್ನು ವಿರೋಧಿಸಿ ನ್ಯಾಯಾಲಯದ ಮೊರೆ ಹೋದರು. ಈಗ ನ್ಯಾಯಾಲಯದಲ್ಲಿ ರಾಜ್ಯಪಾಲರ ನಡೆ ಎತ್ತಿ ಹಿಡಿಯುವ ಮೂಲಕ ಎಲ್ಲರೂ ಕಾನೂನಿನ ಮುಂದೆ ಸಮಾನರು ಎಂದು ಸಾಬೀತಾಗಿದೆ ಎಂದರು.

ಮುಡಾ ಹಗರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊನೆ ಮೊಳೆಯಾಗಲಿದೆ ಎಂದು ಹೇಳಿದ್ದೆ. ಅದು ನಿಜವಾಗುವ ಸಮಯ ಬರುತ್ತಿದೆ. ಸಿದ್ದರಾಮಯ್ಯ ಈಗಲಾದರೂ ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಿ ತನಿಖೆಗೆ ಒಳಪಡಬೇಕು ಎಂದು ಒತ್ತಾಯಿಸಿದರು.

ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ರಾಜ್ಯಪಾಲರು ಉತ್ತಮ ನಿರ್ಧಾರ ಕೈಗೊಂಡಿದ್ದರಿಂದ ನ್ಯಾಯಾಲಯದ ತೀರ್ಪು ನ್ಯಾಯದ ಪರವಾಗಿ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ರಾಜೀನಾಮೆ ನೀಡಿ ಇಡೀ ರಾಜ್ಯದ ಜನರಿಗೆ ಕ್ಷಮೆಯಾಚಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ರಾಧಾ ಬಾಯಿ ಸಫಾರೆ, ಮಹೇಂದ್ರ ಕೌತಾಳ, ಸುನೀತಾ ಚವ್ಹಾಣ, ಶಿವು ಮೆಣಸಿನಕಾಯಿ ಸೇರಿದಂತೆ ಹಲವರಿದ್ದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!