ಹಳಿಯಾಳ: ಕಳೆದ ವರ್ಷ ಬರಗಾಲದಿಂದ ತತ್ತರಿಸಿದ್ದ ತಾಲೂಕಿನ ರೈತ ವರ್ಗ ಪ್ರಸಕ್ತ ವರ್ಷ ಆದ ಅತಿವೃಷ್ಟಿಯಿಂದಾಗಿ ಬೆಳೆದ ಬೆಳೆಗಳು ಸಂಪೂರ್ಣ ಹಾಳಾಗಿದ್ದರಿಂದ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದಾರೆ. ಅದಕ್ಕಾಗಿ ರಾಜ್ಯ ಸರ್ಕಾರ ಬೆಳೆಹಾನಿಯ ಪರಿಹಾರವನ್ನು ಕೊಡಬೇಕು ಹಾಗೂ ಕಬ್ಬಿಗೆ ಬೆಂಬಲ ಬೆಲೆಯನ್ನು ಘೋಷಿಸಬೇಕೆಂದು ಬಿಜೆಪಿ ಹಳಿಯಾಳ ಮಂಡಲ ರೈತ ಮೋರ್ಚಾ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.ಸೋಮವಾರ ಪಟ್ಟಣದಲ್ಲಿ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಿದ ಬಿಜೆಪಿ ಹಳಿಯಾಳ ಮಂಡಲ ರೈತ ಮೋರ್ಚಾ ಘಟಕದವರು ತಾಲೂಕಾಡಳಿತ ಸೌಧಕ್ಕೆ ತೆರಳಿ ಮುಖ್ಯಮಂತ್ರಿಯವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ಅವರಿಗೆ ಸಲ್ಲಿಸಿದರು.
ದಾಂಡೇಲಿ: ಐತಿಹಾಸಿಕವಾಗಿ ಬಲುದೀರ್ಘ ಚರಿತ್ರೆಯಿರುವ, ಎಲ್ಲ ಸಂಪತ್ತುಗಳೂ ಯಥೇಚ್ಛವಾಗಿ ದೊರಕುವ ಉತ್ತರ ಕನ್ನಡ ಜಿಲ್ಲೆಯು ಹಲವು ಕಾರಣಗಳಿಂದ ಹಲವು ರಂಗಗಳಲ್ಲಿ ಹಿಂದುಳಿದಿದೆ ಎಂಬುದು ವಾಸ್ತವ. ಆ ಕಾರಣಕ್ಕಾಗಿ ಅಭಿವೃದ್ಧಿಪರ ಹಲವಾರು ಮುನ್ನೋಟಗಳನ್ನಿಟ್ಟುಕೊಂಡು ನ. 23ರಂದು ದಾಂಡೇಲಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ನಾವು ನೀವು ಶೀರ್ಷಿಕೆಯಡಿಯಲ್ಲಿ ಜಿಲ್ಲಾ ಮಟ್ಟದ ಬೃಹತ್ ಸಮಾವೇಶವನ್ನು ನಡೆಸಲು ಸಮಾನ ಮನಸ್ಸಿನ ಸಂಘಟನೆಗಳೊಂದಾಗಿ ನಿರ್ಧರಿಸಲಾಗಿದೆ ಎಂದು ಸಮಾವೇಶದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ವಿಷಯದಲ್ಲಿ ಪ್ರಗತಿಪರ ಜನ ಚಳವಳಿಗೆ ಒಂದು ಮಹತ್ವದ ಸ್ಥಾನವಿದೆ. ಆ ಹಿನ್ನೆಲೆ ಈ ಸಮಾವೇಶವನ್ನು ಜಿಲ್ಲೆಯ ಅಭಿವೃದ್ಧಿಯ ಪರಿಕಲ್ಪನೆಗಳೊಂದಿಗೆ ಆಯೋಜಿಸಲಾಗಿದೆ. ಈವರೆಗೆ ಅಭಿವೃದ್ಧಿಯೇ ಆಗಿಲ್ಲ ಎಂದು ಹೇಳಲಾಗದು. ಮುಂದೆ ಆಗಬೇಕಾಗಿರುವ ಕೆಲಸಗಳ ಬಗ್ಗೆ ಹಕ್ಕೊತ್ತಾಯ ಮಾಡಲಾಗುವುದು. ಇದು ಯಾವುದೇ ರಾಜಕೀಯ ಪ್ರೇರಿತ ಅಥವಾ ರಾಜಕೀಯ ಪಕ್ಷದ ಬ್ಯಾನರ್ ಅಡಿಯಲ್ಲಿ ನಡೆಯುವ ಸಮಾವೇಶವಲ್ಲ ಎಂದರು.ಸ್ವಾಗತ ಸಮಿತಿ ಅಧ್ಯಕ್ಷೆ ಯಮುನಾ ಗಾಂವಕರ ಮಾತನಾಡಿ, ಭೂಸುಧಾರಣೆಗಾಗಿ, ದುಡಿಯುವ ಕೈಗಳಿಗೆ ಉದ್ಯೋಗಾವಕಾಶ, ಜಿಲ್ಲೆಯಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ಸಿಗಬೇಕು ಎಂದರು.
ಸಮಿತಿಯ ಗೌರವ ಸದಸ್ಯರಾದ ಕೀರ್ತಿ ಗಾಂವಕರ ಹಾಗೂ ಟಿ.ಎಸ್. ಬಾಲಮಣಿ ಸಮಾವೇಶದ ಯಶಸ್ಸಿಗೆ ಎಲ್ಲರೊಂದಾಗುವಂತೆ ಮಾತನಾಡಿದರು.ಈ ಸಂದರ್ಭದಲ್ಲಿ ಕೃಷ್ಣ ಪೂಜಾರಿ, ಕೀರ್ತಿ ಸಲೀಂ ಸಯ್ಯದ್, ಸ್ಯಾಮ್ಸನ್ ಡಿ., ಆಫ್ರಿನ್ ಕಿತ್ತೂರ, ರತ್ನದೀಪಾ ಎನ್.ಎಂ., ಆಸಿಫ್ ಮುಜಾವರ, ಮೌಲಾಲಿ ಮುಲ್ಲಾ, ಝೇವಿಯರ್ ಫ್ರಾನ್ಸಿಸ್ ಮಸ್ಕರಿನಸ್ ಮುಂತಾದವರಿದ್ದರು.