ನರೇಗಲ್ಲ: ಸ್ಥಳೀಯ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ಕೆವಿ ಮತ್ತು ಬಿಎಂ ಉಚಿತ ಪ್ರಸಾದ ನಿಲಯದ ೧೫.೦೬ ಎಕರೆ ಜಮೀನಿನಲ್ಲಿ ೧೧.೧೯ ಎಕರೆ ಜಮೀನು ವಕ್ಫ್ ಆಸ್ತಿ ಎಂದು ದಾಖಲಾಗಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಇದು 2019-2020ರಲ್ಲಿಯೇ ದಾಖಲಾಗಿದೆ ಎಂಬ ಮಾಹಿತಿ ಇತ್ತೀಚೆಗೆ ಚರ್ಚೆಗೆ ಬಂದಿದ್ದು ಅದು ಶ್ರೀಮಠದ ಭಕ್ತರನ್ನು ರೊಚ್ಚಿಗೆಬ್ಬಿಸುವಂತೆ ಮಾಡಿದೆ.
ಹಿಂದಿನ ಪೀಠಾಧಿಪತಿಗಳಾಗಿದ್ದ ಲಿಂ. ಅಭಿನವ ಅನ್ನದಾನ ಮಹಾಸ್ವಾಮಿಗಳ ಅವಧಿಯಲ್ಲಿ ೨೦೧೯-೨೦ರಲ್ಲಿ ಸರ್ವೆ ನಂ. ೪೧೦/೨ಬಿ ಇದರ ಪಹಣಿಯಲ್ಲಿ ರೆಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ನಮೂದಾಗಿದ್ದನ್ನು ಅರಿತ ಶ್ರೀಗಳು ಅಂದು ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಆ ವೇಳೆ ಕೊರೋನಾ ಹಿನ್ನೆಲೆ ಹೋರಾಟ ನನೆಗುದಿಗೆ ಬಿದ್ದಿತ್ತು. ಮುಂದೆ ಅವರ ಆರೋಗ್ಯ ಏರುಪೇರಾದ ಹಿನ್ನೆಲೆ ಹಾಗೆ ಹಿಂದಕ್ಕೆ ಸರಿದಿತ್ತು. ಮುಂದೆ ಅವರು ದೈವಾದೀನರಾದರು. ನೂತನ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಅಧಿಕಾರ ವಹಿಸಿಕೊಂಡು ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ.
ಹೋರಾಟದ ಮುನ್ಸೂಚನೆಶ್ರೀಮಠದ ಪ್ರಸಾದ ನಿಲಯದ ಆಸ್ತಿಗೆ ವಕ್ಫ್ ಹೆಸರು ದಾಖಲಾದ ಹಿನ್ನೆಲೆ ಹಾಲಕೆರೆ ಗ್ರಾಮಸ್ಥರು ಹೋರಾಟಕ್ಕೆ ಮುಂದಾಗಿದ್ದಾರೆ. ಶ್ರೀಗಳು ಬಡಮಕ್ಕಳಿಗೆ ಸಂಸ್ಕಾರ ಶಿಕ್ಷಣದ ಜತೆಗೆ ಪ್ರಸಾದವನ್ನು ಒದಗಿಸಬೇಕು ಎಂಬ ಮಹತ್ತರ ಯೋಜನೆಗೆ ಭಕ್ತರು ಹಾಗೂ ರೈತರು ಮುಂದಾಗಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನತೆಗೆ ಉಪಯೋವಾಗಲಿ ಎಂದು ಭೂದಾನ ಮಾಡಿದ್ದು, ವಕ್ಫ್ ಹೆಸರು ನಮೂದಿಸಿರುವುದು ಸರಿಯಲ್ಲ. ನಾವು ನಮ್ಮ ಮಠದ ಆಸ್ತಿಯನ್ನು ಬಿಟ್ಟು ಕೊಡುವುದಿಲ್ಲ. ಇದಕ್ಕೆ ಎಂತಹ ಹೋರಾಟಕ್ಕೂ ನಾವು ಸಿದ್ಧ. ಬೇಕಾದರೆ ಪ್ರಾಣ ಬಿಟ್ಟೇವು ಆದರೆ ಶ್ರೀಮಠದ ಆಸ್ತಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ನೆರೆದಿದ್ದ ಭಕ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ವಕ್ಫ್ ಬೋರ್ಡಿಗೆ ಧಿಕ್ಕಾರ ಕೂಗಿದರು.
ಸೊನ್ನದ ಕುಟುಂಬದಿಂದ ಭೂದಾನಹಿರಿಯ ಅನ್ನದಾನ ಶ್ರೀಗಳು ಸ್ವಾತಂತ್ರ್ಯ ಪೂರ್ವದಲ್ಲಿಯೇ ಜೋಳಿಗೆ ಹಿಡಿದು ಮನೆ ಮನೆ ತಿರುಗಿ ಭಿಕ್ಷಾಟನೆ ಮಾಡಿ ಪ್ರಸಾದ ನಿಲಯ ಸ್ಥಾಪನೆ ಮಾಡಿದ್ದಾರೆ. ಶಿಕ್ಷಣವೇ ಇಲ್ಲದ ಕಾಲಘಟ್ಟದಲ್ಲಿ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿದ್ದ ಶ್ರೀಗಳ ಕಾರ್ಯಕ್ಕೆ ಅಂದಿನ ಭಕ್ತಾದಿಗಳಲ್ಲೊಬ್ಬರಾದ ಸೊನ್ನದವರ ಕುಟುಂಬ ಭೂದಾನ ಮಾಡಿದ್ದಾರೆ. ೬೫-೭೦ ವರ್ಷಗಳ ಹಿಂದೆಯೇ ದಾನ ಮಾಡಿದ್ದ ಜಮೀನು, ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಕೆವಿ ಮತ್ತು ಬಿಎಂ ಪ್ರಸಾದ ನಿಲಯದ ಒಟ್ಟು ೧೫.೦೬ ಎಕರೆ ಜಮೀನಿನಲ್ಲಿ ೧೧.೧೯ ಎಕರೆ ಜಮೀನು ೨೦೧೯-೨೦ರಲ್ಲಿ ವಕ್ಫ್ ಎಂದು ನಮೂದಾಗಿದೆ. ಈ ಕುರಿತು ಶ್ರೀಮಠಕ್ಕೆ ಯಾವುದೇ ನೋಟಿಸ್ ಬಂದಿಲ್ಲ. ಆದರೆ, ನಮ್ಮ ಮಠದ ಪ್ರಸಾದ ನಿಲಯ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾದದ್ದಲ್ಲ. ಈ ನಿಟ್ಟಿನಲ್ಲಿ ಈಗಿನ ಸರ್ಕಾರ ನಮ್ಮ ಶ್ರೀಮಠದ ಆಸ್ತಿಗೆ ಯಾವುದೇ ತೊಂದರೆ ಆಗದಂತೆ ಮತ್ತೆ ನಮಗೆ ದೊರಕಿಸಿ ಕೊಡುತ್ತದೆ ಎಂಬ ಭರವಸೆ ನಮಗಿದೆ ಎಂದು ಅವರು ಅನ್ನದಾನೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಶ್ರೀಗಳು ತಿಳಿಸಿದರು.ಮಠದ ಆಸ್ತಿನಾಡಿನಾದ್ಯಂತ ನಮ್ಮ ಮಠಗಳಿದ್ದು, ಅದರಲ್ಲಿ ಸಹಸ್ರಾರು ಸಂಖೆಯಲ್ಲಿ ಭಕ್ತರಿದ್ದಾರೆ. ಮುಂದಿನ ದಿನಮಾನಗಳಲ್ಲಿ ನಮ್ಮ ಮಠದ ಆಸ್ತಿ ನಮ್ಮನ್ನು ಬಿಟ್ಟು ಹೋಗದಂತೆ ಎಂತಹ ಹೋರಾಟಕ್ಕೂ ನಾವು ಸನ್ನದ್ಧವಾಗಿದ್ದೇವೆ ಎಂದು ಶ್ರೀಮಠದ ಭಕ್ತ ಶರಣಪ್ಪ ಕರಮುಡಿ ತಿಳಿಸಿದ್ದಾರೆ.