ಸರ್ಕಾರ ವಜಾಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ಬಿಜೆಪಿ ದೂರು

KannadaprabhaNewsNetwork |  
Published : Mar 01, 2024, 02:17 AM IST
BJP | Kannada Prabha

ಸಾರಾಂಶ

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ದೇಶದ್ರೋಹಿಗಳಿಗೆ ರಾಜ್ಯ ಸರ್ಕಾರ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿರುವ ಪ್ರತಿಪಕ್ಷ ಬಿಜೆಪಿಯು ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ.

- ಪಾಕ್‌ ಪರ ಘೋಷಣೆ ಕೂಗಿದ ದೇಶದ್ರೋಹಿಗಳಿಗೆ ರಕ್ಷಣೆ ಆರೋಪ

- ಜಿಂದಾಬಾದ್‌ ಘೋಷಣೆ ಕುರಿತು ಎನ್‌ಐಎ ತನಿಖೆಗೂ ಆಗ್ರಹಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ದೇಶದ್ರೋಹಿಗಳಿಗೆ ರಾಜ್ಯ ಸರ್ಕಾರ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿರುವ ಪ್ರತಿಪಕ್ಷ ಬಿಜೆಪಿಯು ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ.ಅಲ್ಲದೆ, ಈ ಪ್ರಕರಣದ ಕುರಿತು ರಾಷ್ಟ್ರೀಯ ತನಿಖಾ ದಳದಿಂದ (ಎನ್‌ಐಎ) ತನಿಖೆ ನಡೆಸಬೇಕು ಎಂದೂ ರಾಜ್ಯಪಾಲರನ್ನು ಒತ್ತಾಯಿಸಿದೆ.ಗುರುವಾರ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಶಾಸಕರ ನಿಯೋಗವು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಸರ್ಕಾರದ ವಿರುದ್ಧ ದೂರು ಸಲ್ಲಿಸಿತು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಯೋತ್ಪಾದನಾ ಚಟುವಟಿಕೆ ಹೆಚ್ಚಿದೆ. ಮುಸ್ಲಿಂ ಮೂಲಭೂತವಾದಿಗಳು ಗಲಾಟೆ ಮಾಡುತ್ತಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕಿದವರನ್ನು ಬಂಧಿಸಿ ಎಂದು ಆಗ್ರಹಿಸಿದರೆ ಸರ್ಕಾರ ಅವರನ್ನು ಬಿಟ್ಟುಬಿಡಿ ಎಂದು ಪೊಲೀಸರಿಗೆ ಸೂಚಿಸಿದೆ. ಎಫ್ಎಸ್ಎಲ್ ವರದಿ ಪರಿಶೀಲನೆ ಎಂದು ಹೇಳಿ ಯಾವುದೋ ವಾಹಿನಿಯ ವೀಡಿಯೋ ಪಡೆದು ಪರೀಕ್ಷೆ ನಡೆಸಿ ಸುಳ್ಳು ವರದಿ ರೂಪಿಸಲಾಗುತ್ತಿದೆ. ಇದನ್ನು ಮುಚ್ಚಿ ಹಾಕಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಕಿಸ್ತಾನದ ಪರ ಜೈಕಾರದ ಸುದ್ದಿ ಮಾಧ್ಯಮಗಳಲ್ಲಿ ಬಂದು ಜನರಿಗೆ ಗೊತ್ತಾದರೂ ಜನರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹೀಗೆಯೇ ಬಿಟ್ಟರೆ ವಿಧಾನಸೌಧ ಕೂಡ ಭಯೋತ್ಪಾದಕರ ತಾಣವಾಗಲಿದೆ. ಕೆಂಗಲ್ ಹನುಮಂತಯ್ಯ ಅವರು ಕಟ್ಟಿದ ವಿಧಾನಸೌಧವನ್ನು ಉಳಿಸಲು ನಾವು ಹೋರಾಟ ಮಾಡುತ್ತಿದ್ದೇವೆ. ಸರ್ಕಾರದ ಕೆಲಸ ದೇವರ ಕೆಲಸ ಎಂದರೆ, ಈ ಸರ್ಕಾರ ಅದಕ್ಕೆ ಅಪಮಾನ ಮಾಡುತ್ತಿದೆ. ಈ ಪ್ರಕರಣ ಮುಚ್ಚಿಹಾಕಿ ದೇಶದ್ರೋಹಿಗಳಿಗೆ ರಕ್ಷಣೆ ನೀಡುವ ಇವರು ಭಂಡರು ಎಂದರು.ಆದ್ದರಿಂದ ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಪಾಕಿಸ್ತಾನದ ಪರ ಘೊಷಣೆ ಕೂಗಿರುವುದು ಮಾಧ್ಯಮಗಳಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ. ಆದರೆ, ಈ ಪ್ರಕರಣ ಮುಚ್ಚಿ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.ಘಟನೆ ನಡೆದು 48 ಗಂಟೆ ಕಳೆದರೂ ಯಾರನ್ನೂ ಬಂಧಿಸಿಲ್ಲ. ಬೇರೆ ಘಟನೆ ನಡೆದಾಗ ಎಫ್‌ಎಸ್‌ಎಲ್ ವರದಿಗಾಗಿ ಕಾಯದೇ ಮೊದಲು ಬಂಧಿಸುತ್ತಿದ್ದರು. ಇದರಲ್ಲಿ ಏನೂ ಇಲ್ಲ ಅಂದರೆ ಪೊಲಿಸರು ಏಕೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡರು. ರಾಜ್ಯದ ಜನರು ಪಾಕಿಸ್ತಾನ ಪರವಾದವನ್ನು ಆಯ್ಕೆ ಮಾಡಿಲ್ಲ. ಇದು ಕನ್ನಡಿಗರ ಹಾಗೂ ಭಾರತೀಯರ ಹಾಗೂ ಸಂವಿಧಾನ ವಿರೋಧಿ ಸರ್ಕಾರ ಈ ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.-ಕೋಟ್‌-ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ಎಫ್ಎಸ್ಎಲ್ ವರದಿ ಬಹಿರಂಗಪಡಿಸಲಿ. ಯಾರನ್ನೋ ರಕ್ಷಣೆ ಮಾಡಲು ಸರ್ಕಾರ ವರದಿಯನ್ನು ಮುಚ್ಚಿಡುವುದು ಬೇಡ. ಈಗಾಗಲೇ ಮಾಧ್ಯಮಗಳಲ್ಲಿ ಈ ಸುದ್ದಿ ಬಂದಿದೆ. ಈಗ ಜನರಿಗೆ ವರದಿ ನೀಡಲಿ -ಆರ್.ಅಶೋಕ್‌, ಪ್ರತಿಪಕ್ಷದ ನಾಯಕ

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...