ಕನ್ನಡಪ್ರಭ ವಾರ್ತೆ ಮಂಡ್ಯ/ಮದ್ದೂರು
ಈಗಿರುವ ಮೈಷುಗರ್ ಕಾರ್ಖಾನೆ ಯಂತ್ರೋಪಕರಣಗಳು ಸರಿಯಾಗಿಲ್ಲ. ಹೊಸ ಯಂತ್ರೋಪಕರಣಗಳನ್ನು ತರಲು ಹಣ ಬೇಕಿದೆ. ಇನ್ನೂ ಕಾರ್ಮಿಕರಿಗೆ ವಿಆರ್‌ಎಸ್ ಹಣ ಬಾಕಿ ಕೊಟ್ಟಿಲ್ಲ. ಪರಿಸ್ಥಿತಿ ಹೀಗಿರುವಾಗ ಇದೆಲ್ಲವನ್ನೂ ಸರಿಪಡಿಸುವ ಬಗ್ಗೆ ಆಲೋಚನೆ ಮಾಡದೆ ಹೊಸ ಕಾರ್ಖಾನೆ ನಿರ್ಮಿಸಲು ಹೊರಟಿರುವುದರ ಹಿಂದೆ ಏನೇನು ನಡೆಯಬಹುದು ಎಂಬುದನ್ನು ಊಹಿಸಿಕೊಳ್ಳಿ ಎಂದು ಮದ್ದೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಹೊಸ ಕಾರ್ಖಾನೆ ಆರಂಭಿಸಿದ ಮೇಲೆ ಈ ಕಾರ್ಖಾನೆಯನ್ನು ಏನು ಮಾಡುತ್ತಾರೆ. ಮಹಾರಾಜರ ಕೊಡುಗೆ ಎಂದು ಬೀಗ ಹಾಕಿ ಇಟ್ಟುಕೊಳ್ಳುತ್ತಾರಾ ಎಂದು ಪ್ರಶ್ನಿಸಿದ ಸುಮಲತಾ, ರಸ್ತೆ, ಸೇತುವೆ, ಕುಡಿಯುವ ನೀರು ಸೇರಿದಂತೆ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ ಎಂದು ಶಾಸಕರು ಪೇಚಾಡುತ್ತಿದ್ದಾರೆ. ಆ ಸಮಸ್ಯೆಗಳಿಗೆ ಪರಿಹಾರ ಕೊಡದೆ ೫೦೦ ಕೋಟಿ ರು. ಹಣದಲ್ಲಿ ಹೊಸ ಕಾರ್ಖಾನೆ ಮಾಡುತ್ತೇವೆ ಎಂದು ಹೇಳುವುದರಲ್ಲಿ ಅರ್ಥವಿದೆಯೇ ಎಂದು ಪ್ರಶ್ನಿಸಿದರು.ಮೊದಲು ಈಗಿರುವ ಕಾರ್ಖಾನೆಯ ಯಂತ್ರೋಪಕರಣಗಳನ್ನು ದುರಸ್ತಿಪಡಿಸಿ ಅಥವಾ ಬದಲಾಯಿಸಿ ಕಾರ್ಖಾನೆ ಸುಗಮವಾಗಿ ಕಾರ್ಯಾಚರಣೆ ಮಾಡುವಂತೆ ಮಾಡಲಿ. ಕಾರ್ಖಾನೆಗಿರುವ ಸಾಲ, ಕಾರ್ಮಿಕರ ವಿಆರ್‌ಎಸ್ ಹಣವನ್ನೆಲ್ಲಾ ತೀರಿಸಲಿ. ಆನಂತರ ಹೊಸ ಕಾರ್ಖಾನೆ ಬಗ್ಗೆ ಆಲೋಚಿಸಲಿ ಎಂದರು.
ಚಾಲನೆಗೊಳ್ಳದೆ ನಿಂತಿದ್ದ ಮೈಷುಗರ್ ಕಾರ್ಖಾನೆ ಆರಂಭಿಸಲು ಕರ್ನಾಟಕದಿಂದ ದೆಹಲಿವರೆಗೆ ಹೋರಾಟ ಮಾಡಿದೆ. ಅವರ ಸ್ವಾರ್ಥ ಹಾಗೂ ದೂರದೃಷ್ಟಿಯ ಲೋಪದಿಂದ ಕಾರ್ಖಾನೆಗೆ ಈ ದುರ್ಗತಿ ಒದಗಿಬಂದಿದೆ. ಕಾರ್ಖಾನೆ ಉಳಿಸಲು ನನ್ನ ಐದು ವರ್ಷಗಳ ಹೋರಾಟಕ್ಕೆ ಬೆಲೆಯೇ ಇಲ್ಲದಂತೆ ಮಾಡಿದರು. ಅವರು ಮಾಡಿದ ಸ್ವಾರ್ಥ ರಾಜಕಾರಣದಿಂದ ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ಟೀಕಿಸಿದರು.
ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗಲೇ ಒ ಅಂಡ್ ಎಂಗೆ ಒಪ್ಪಿಗೆ ಸೂಚಿಸಿದ್ದರೆ ನಾಲ್ಕು ವರ್ಷಗಳಲ್ಲಿ ಎಷ್ಟು ಸುಧಾರಣೆಯಾಗುತ್ತಿತ್ತು. ಇದರಿಂದ ನಿಜವಾಗಿಯೂ ಸಂಕಷ್ಟ ಅನುಭವಿಸಿದವರು ರೈತರು ಎಂದು ಬೇಸರದಿಂದ ನುಡಿದರು.