ಧಾರವಾಡ:
ಮನವಿ ಸಲ್ಲಿಸುವ ವೇಳೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಯತ್ನವು ನಡೆಯಿತು. ಈ ವೇಳೆ ಮಾತನಾಡಿದ ಶೆಟ್ಟರ್, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣದ ದುರ್ಬಳಕೆಯ ಆರೋಪ ಅತ್ಯಂತ ಗಂಭೀರ. ಇಂತಹ ಪ್ರಕರಣದಲ್ಲಿ ಸರ್ಕಾರ ನೈತಿಕ ಹೊಣೆಗಾರಿಕೆ ವಹಿಸಬೇಕು. ಗಂಭೀರ ಆರೋಪಗಳು ಎದುರಾಗಿರುವ ಸಂದರ್ಭದಲ್ಲಿ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿರುವುದು ಖಂಡನೀಯ. ಅವರನ್ನು ತಕ್ಷಣ ಸಚಿವ ಸಂಪುಟದಿಂದ ಕೈಬಿಡಬೇಕು ಹಾಗೂ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಗರಣದ ಕುರಿತು ಕಾಂಗ್ರೆಸ್ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣ ಯಾವುದೇ ಕಾರಣಕ್ಕೂ ದುರ್ಬಳಕೆಯಾಗಬಾರದು. ಜನರ ಹಣಕ್ಕೆ ಲೆಕ್ಕ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.ಮಾಜಿ ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ಜನರ ಹಣದ ದುರ್ಬಳಕೆಯ ಆರೋಪಗಳು ಎದುರಾಗಿರುವ ಸಂದರ್ಭದಲ್ಲಿ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿರುವುದು ಸರ್ಕಾರದ ನೈತಿಕತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ. ಈ ವಿಚಾರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕತ್ವವೂ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಬಡವರು ಹಾಗೂ ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣದ ರಕ್ಷಣೆಗೆ ಸರ್ಕಾರ ಬದ್ಧವಾಗಬೇಕು ಎಂದರು.
ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ ಮಾತನಾಡಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಶಿವಾನಂದ ಮೆಣಸಿನಕಾಯಿ, ಬಸವರಾಜ ಗರಗ, ಸಂತೋಷ ಚವ್ವಾಣ, ಮಂಜುನಾಥ ಕಾಟಕರ, ನಾಗೇಶ ಕಲಬುರ್ಗಿ, ಮಂಜುನಾಥ ಮಲ್ಲಿಗವಾಡ, ಮೋಹನ ರಾಮದುರ್ಗ, ಸಿದ್ದು ಕಲ್ಯಾಣಶೆಟ್ಟಿ, ಬಸವರಾಜ ಬಾಳಗಿ, ಶಿವಾನಂದ ಗುಂಡಗೋವಿ, ರಾಜು ಕಾಳೆ ಸೇರಿದಂತೆ ಪಕ್ಷದ ಪ್ರಮುಖ ಪದಾಧಿಕಾರಿಗಳು, ಪರಿಶಿಷ್ಟ ಪಂಗಡದ ಮುಖಂಡರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು. ಇದೇ ವೇಳೆ ಸಚಿವ ನಾಗೇಂದ್ರ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.
ಪ್ರತಿಭಟನೆಯ ಬಳಿಕ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಈ ವೇಳೆ ಕಡಿಮೆ ಸಂಖ್ಯೆಯಲ್ಲಿ ಪೊಲೀಸರಿದ್ದ ಕಾರಣ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಪ್ರಯತ್ನಿಸಿದ ಘಟನೆಯೂ ನಡೆಯಿತು. ಕೂಡಲೇ ಬಿಜೆಪಿ ಮುಖಂಡರನ್ನು ಒಳ ಹೋದ ಕಾರ್ಯಕರ್ತರನ್ನು ಹೊರಗೆ ಕರೆಯಿಸಲಾಯಿತು.
ಕಾಂಗ್ರೆಸ್ ಹೈ ಕಮಾಂಡ್‌ಗೆ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಹಣ ಕೊಟ್ಟು ಮಂತ್ರಿಗಳಾಗಿದ್ದಾರೆ. ಭ್ರಷ್ಟತೆಯ ಪ್ರತಿರೂಪ ಡಿ.ಕೆ. ಶಿವಕುಮಾರ ನೇತೃತ್ವದ ಸರ್ಕಾರವಾಗಿದ್ದರೂ ಲಂಚ ಪಡೆದರೆ ಕ್ರಮಕೈಗೊಳ್ಳುತ್ತೇನೆ ಎಂದು ಸಿಎಂ ಹೇಳುತ್ತಾರೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತಾಗಿದೆ ಎಂದು ಕಿಡಿಕಾರಿರುವ ಸಂಸದ ಜಗದೀಶ ಶೆಟ್ಟರ್, ಕೇಂದ್ರದಲ್ಲಿ ರಾಹುಲ್ ಗಾಂಧಿ ಅಪಕ್ವ ನಾಯಕ. ಅವರಿಂದ ಯಾವ ಹೋರಾಟ ಸಾಧ್ಯ. ಸರಿಯಾಗಿ ಚರ್ಚೆ ಮಾಡಲು ಬರುವುದಿಲ್ಲ. ಅತ್ತ ಸಂಸತ್ ಅಧಿವೇಶನ ಸರಿಯಾಗಿ ನಡೆಸಲು ಬಿಡುತ್ತಿಲ್ಲ ಎಂದು ಹರಿಹಾಯ್ದರು.