ಕನ್ನಡಪ್ರಭ ವಾರ್ತೆ ಮಡಿಕೇರಿ
ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯನ್ನು ನಡೆಸಲು ತಕ್ಷಣ ಆದೇಶ ನೀಡುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.ನಗರದ ಸಹಕಾರ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರ ಮತ್ತು ಸಹಕಾರ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಪ್ರಮುಖರು, ನಿಗದಿತ ಸಮಯದಲ್ಲಿ ಚುನಾವಣೆ ನಡೆಸದೆ ಇರುವುದು ರಾಜಕೀಯ ಷಡ್ಯಂತ್ರ ಎಂದು ಆರೋಪಿಸಿದರು.ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಕೆ.ಜಿ.ಬೋಪಯ್ಯ, ರಾಜ್ಯದಲ್ಲಿ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಈಗಾಗಲೇ ಪೂರ್ಣಗೊಳ್ಳಬೇಕಿತ್ತು. ವೈದ್ಯನಾಥನ್ ಆಯೋಗದ ಶಿಫಾರಸ್ಸಿನ ಮೇರೆಗೆ ಅದಕ್ಕೆ ಪ್ರತ್ಯೇಕ ಚುನಾವಣಾ ಆಯೋಗವನ್ನು ಕೂಡ ಮಾಡಲಾಗಿದೆ. ಅದರಂತೆ ಹುದಿಕೇರಿ ಸಂಘಕ್ಕೂ ಚುನಾವಣಾ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಆಡಳಿತ ಮಂಡಳಿ ಅವಧಿ ಮುಗಿದ ನಂತರ ಕ್ಲರ್ಕ್ ಒಬ್ಬರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸುವ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಳ್ಳಾಗಿದೆ ಎಂದರು.ಜಿಲ್ಲೆಯಲ್ಲಿ ಇತರ ಸಹಕಾರ ಸಂಘಗಳ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಕಾಂಗ್ರೆಸ್ ಕುತಂತ್ರ ಮಾಡುತ್ತಿದೆ. ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ. ಆದರೂ ಯಾಕೆ ತನಿಖೆಯಲಾಗಿಲ್ಲ ಎಂದು ಪ್ರಶ್ನಿಸಿದರು.ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹಾಗೂ ಬಿಜೆಪಿ ಪ್ರಮುಖ ಮನು ಮುತ್ತಪ್ಪ ಮಾತನಾಡಿ, ಚುನಾವಣೆ ಘೋಷಿಸಿದರು ಎನ್ನುವ ಕಾರಣಕ್ಕೆ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಇದು ಕಾಂಗ್ರೆಸ್ ಆಡಳಿತದ ಕುತಂತ್ರ ಎಂದು ಆರೋಪಿಸಿದ ಅವರು ನಿಯಮಾನುಸಾರ ಸಂಘಕ್ಕೆ ತಕ್ಷಣ ಚುನಾವಣೆ ನಡೆಸಬೇಕೆಂದು ಆಗ್ರಹಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ರಾಬೀನ್ ದೇವಯ್ಯ, ವಿರಾಜಪೇಟೆ ಮಂಡಲ ಅಧ್ಯಕ್ಷ ಸುವಿನ್ ಗಣಪತಿ, ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ ಸರಿದಂತೆ ಮತ್ತಿತರರು ಇದ್ದರು.