ಕನ್ನಡಪ್ರಭ ವಾರ್ತೆ ಔರಾದ್
ಪುಣ್ಯಭೂಮಿ ಧರ್ಮಸ್ಥಳದ ಪಾವಿತ್ರ‍್ಯಕ್ಕೆ ಕಳಂಕ ತರಲು ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ, ಷಡ್ಯಂತ್ರವನ್ನು ವಿರೋಧಿಸಿ ಬಿಜೆಪಿ ಮಂಡಲ ಘಟಕದ ವತಿಯಿಂದ ಔರಾದ್ (ಬಿ) ಪಟ್ಟಣದಲ್ಲಿ ಆ. 25ರಂದು ಸೋಮವಾರ ಬೃಹತ್ ಪ್ರತಿಭಟನೆ ನೆಡೆಸಲಾಯಿತು.ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಚವ್ಹಾಣ್ ಪಟ್ಟಣದ ಎಪಿಎಂಸಿ ವೃತ್ತದ ಬಳಿ ಪ್ರತಿಭಟನೆಗೆ ಚಾಲನೆ ನೀಡಿದರು. ಪ್ರಮುಖ ಮಾರ್ಗಗಳ ಮೂಲಕ ಪ್ರತಿಭಟನೆ ಬಸವೇಶ್ವರ ವೃತ್ತಕ್ಕೆ ಬಂದು ಕೊನೆಗೊಂಡಿತು.
ಪಕ್ಷದ ಕಾರ್ಯಕರ್ತರು, ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರು ಮಾನವ ಸರಪಳಿಯನ್ನು ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಹಿಂದುಗಳ ಭಾವನೆಗೆ ಧಕ್ಕೆ ತರುವ ಷಡ್ಯಂತ್ರ ರೂಪಿಸಿದ ಸಮಾಜ ವಿರೋಧಿ, ದೇಶ ವಿರೋಧಿಗಳ ಜಾಲದ ಪತ್ತೆಗಾಗಿ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕೆಂದು ತಹಸೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ‘ಧರ್ಮಕ್ಕೆ ಜಯವಾಗಲಿ, ದುಷ್ಟರ ಸಂಹಾರವಾಗಲಿ, ‘ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುವವರ ಬಂಧನ ಯಾವಾಗ ?’, ‘ಹಿಂದುಗಳ ಕೆಣಕಿದರೆ ಸಮರ ಎಡಪಂಥೀಯರೇ ಎಚ್ಚರ’ ಎನ್ನುವ ಫಲಕಗಳನ್ನು ಹಿಡಿದು ಘೋಷಗಳನ್ನು ಮೊಳಗಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರು ಮಾತನಾಡಿ, ಧರ್ಮಸ್ಥಳ ಕ್ಷೇತ್ರವು ಕರ್ನಾಟಕ ಮಾತ್ರವಲ್ಲ, ಇಡೀ ವಿಶ್ವದ ಸಮಸ್ತ ಹಿಂದುಗಳ ಶ್ರದ್ಧೆ, ಭಕ್ತಿ, ನಂಬಿಕೆಯುಳ್ಳ ಪವಿತ್ರ ಧಾರ್ಮಿಕ ಕೇಂದ್ರವಾಗಿದೆ. ಹಿಂದು ಧರ್ಮದ ಪುನರುತ್ಥಾನಕ್ಕಾಗಿ, ಮಾನವ ಉದ್ಧಾರಕ್ಕಾಗಿ ವಿಶಿಷ್ಟ ಸೇವೆ ಸಲ್ಲಿಸುತ್ತಿದೆ. ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಜನಸೇವೆಯೇ ಜನಾರ್ಧನ ಸೇವೆ ಎಂದು ಜನಪರ, ಜೀವಪರವಾದ ಕೆಲಸಕಾರ್ಯಗಳು ಮಾಡುತ್ತಿದ್ದಾರೆ. ಸಮಾಜ, ದೇಶ ವಿರೋಧಿಗಳು ಬಹು ದೊಡ್ಡ ಷಡ್ಯಂತ್ರ ಹೆಣೆದು ಧರ್ಮಸ್ಥಳದ ಪಾವಿತ್ರ‍್ಯಕ್ಕೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.ದೇಶ-ವಿದೇಶದ ಕೆಲ ಕಾಣದ ಕೈಗಳು ಇದರ ಹಿಂದೆ ಕೆಲಸ ಮಾಡುತ್ತಿರುವುದು ಆಘಾತ ಮೂಡಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದುಗಳ ಭಾವನೆಗೆ ಧಕ್ಕೆ ತರುವ, ಹಿಂದು ಹೋರಾಟ ಹತ್ತಿಕ್ಕುವ ಕಾರ್ಯ ನಿರಂತರವಾಗಿ ನಡೆದಿದೆ. ಹಿಂದುಗಳ ಹತ್ಯೆ, ಹಿಂದುಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗಿವೆ. ಸಮಾಜಘಾತುಕ ಶಕ್ತಿಗಳು ಸಕ್ರಿಯವಾಗಿವೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಕರುನಾಡು ಕ್ರಿಮಿನಲ್ ನಾಡು ಎಂಬಂತಾಗಿದೆ ಎಂದು ಬೇಸರ ಹೊರಹಾಕಿದರು.
ಧರ್ಮಸ್ಥಳದಲ್ಲಿ ನೂರಾರು ಹೆಣಗಳು ಹೂತಿರುವ ಬಗ್ಗೆ ಯಾರೋ ಕೆಲವರು ಎಬ್ಬಿಸಿದ ಗೊಂದಲ, ಅನಾಮಿಕ ನೀಡಿದ ತಲೆಬುಡವಿಲ್ಲದ ದೂರಿನ ಮೇಲೆ ಅಸ್ಥಿಪಂಜರ ಶೋಧ ನೆಪದಲ್ಲಿ ಸರ್ಕಾರ ಯಾವುದೇ ಪೂರ್ವಾಪರ ವಿಚಾರ ಮಾಡದೆ, ಆತುರಾತುರದಲ್ಲಿ ತನಿಖೆಗೆ ಎಸ್‌ಐಟಿ ರಚನೆ ಮಾಡಿದ್ದೇ ಹಾಸ್ಯಾಸ್ಪದ. ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಧರ್ಮಸ್ಥಳದ ನೆಲದಿಂದಲೇ ಕರ್ನಾಟಕದ ಜನತೆಗೆ ಬಹಿರಂಗ ಕ್ಷಮೆ ಕೋರಬೇಕೆಂದು ಒತ್ತಾಯಿಸಿದರು.ದೇಶ ವಿರೋಧಿಗಳ ಪತ್ತೆಗಾಗಿ ಕೇಂದ್ರದ ತನಿಖಾ ದಳದಿಂದ ತನಿಖೆ ನಡೆಸುವುದು ಅತಿ ಅಗತ್ಯವಿದೆ ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಮಂಡಲ ಪ್ರಭಾರಿ ಮಹೇಶ್ವರ ಸ್ವಾಮಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶಿವರಾಜ ಅಲ್ಮಾಜೆ, ಮುಖಂಡರಾದ ಧೊಂಡಿಬಾ ನರೋಟೆ, ಶಿವಾಜಿರಾವ್ ಪಾಟೀಲ, ಮಲ್ಲಪ್ಪ ದಾನಾ, ಅಶೋಕ ಮೇತ್ರೆ, ಬಸವರಾಜ ಹಳ್ಳೆ, ಸಿದ್ರಾಮಪ್ಪ ನಿಡೋದೆ, ದಯಾನಂದ ಘೂಳೆ, ಕೇರಬಾ ಪವಾರ, ಖಂಡೋಬಾ ಕಂಗಟೆ, ಸಂದೀಪ ಪಾಟೀಲ, ಗುಂಡಪ್ಪ ಮುಧಾಳೆ, ಪ್ರವೀಣ ಕಾರಬಾರಿ, ಪ್ರದೀಪ ಬಾಬಳಿ, ಗೌತಮ ತಾಂದಳೆ, ಸುಜಿತ ರಾಠೋಡ, ಅಶೋಕ ಶಂಬೆಳ್ಳಿ, ಬಾಲಾಜಿ ಠಾವರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.