ಕಾರಿಗೆ ಹಗ್ಗ ಕಟ್ಟಿ ಎಳೆಯುವುದರ ಮೂಲಕ ವಿನೂತನ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಇಂಧನ ದರ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಚಿತ್ರದುರ್ಗದಲ್ಲಿ ವಿನೂತನ ಪ್ರತಿಭಟನೆ ನಡೆಸಿ, ಹೆಚ್ಚಳ ಮಾಡಿರುವ ಪೆಟ್ರೋಲ್ ಹಾಗೂ ಡೀಸೆಲ್ ದರ ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಿದರು.
ನಗರದ ಗಾಂಧಿ ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ಕಾರೊಂದಕ್ಕೆ ಹಗ್ಗ ಕಟ್ಟಿ ಎಳೆಯುವುದರ ಮೂಲಕ ಸರ್ಕಾರದ ನಡೆಗೆ ವ್ಯಂಗ್ಯವಾಡಿದರು. ಮಾನವ ಸರಪಳಿ ನಿರ್ಮಿಸಿ ಆಕ್ರೋಶ ಹೊರ ಹಾಕಿದರು.ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ ಮಾತನಾಡಿ, ಗ್ಯಾರಂಟಿಗಳನ್ನು ನಿರ್ವಹಣೆ ಮಾಡಲು ಸಾಧ್ಯವಾಗದ ರಾಜ್ಯ ಸರ್ಕಾರ ವಿಪರೀತ ತೆರಿಗೆ ಶುಲ್ಕ ಹೆಚ್ಚಳದ ಅಭಿಯಾನವನ್ನೇ ಆರಂಭಿಸಿದೆ. ಹಲವಾರು ಕ್ಷೇತ್ರಗಳ ತೆರಿಗೆ ಹೆಚ್ಚಿಸಿದೆ. ಕರ್ನಾಟಕದ ಜನರ ಬದುಕನ್ನೇ ದುಸ್ತರವನ್ನಾಗಿ ಮಾಡಿದ ಜನ ವಿರೋಧಿ ಸರಕಾರ ವಾಗಿದೆ ಎಂದು ದೂರಿದರು.
ಆಸ್ತಿ ತೆರಿಗೆಯನ್ನು ಶೇ.20ರಿಂದ ಶೇ.120 ವರೆಗೆ ಹೆಚ್ಚಿಸಿದ್ದಾರೆ. ಮೋಟಾರು ವಾಹನ ತೆರಿಗೆಯನ್ನು ಶೇ. 40ರಿಂದ ಶೇ.80ರಷ್ಟು ಹೆಚ್ಚಿಸಿದ್ದಾರೆ. ಅಬಕಾರಿ ತೆರಿಗೆ (ಮದ್ಯ) ಶೇ.20ರಿಂದ ಶೇ.400ವರೆಗೆ ಹೆಚ್ಚಳವಾಗಿದೆ. ಮಹಿಳೆಯರ ಬಸ್ ಪ್ರಯಾಣ ದರ ಉಚಿತ ಎನ್ನುತ್ತಲೇ ಗಂಡಸರ ಬಸ್ ಪ್ರಯಾಣ ದರ ಏರಿಸಿದ್ದಾರೆ ಎಂದು ಮುರಳಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಬಿಜೆಪಿ ನಗರಾಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮಾಜಿ ಕಾರ್ಯದರ್ಶಿ ಮಲ್ಲಿಕಾರ್ಜನ್, ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾರೆಡ್ಡಿ, ಬಿಜೆಪಿ ಮಾಧ್ಯಮ ವಕ್ತಾರರಾದ ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುರೇಶ್ ಸಿದ್ದಾಪುರ, ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್, ಬಸಮ್ಮ, ಮಂಜುಳ, ನಗರಸಭಾ ಸದಸ್ಯರಾದ ಶ್ರೀನಿವಾಸ್, ಹರೀಶ್, ಸುರೇಶ್, ಕೃಷ್ಣಮೂರ್ತಿ, ಮಾಜಿ ಸದಸ್ಯ ರವಿಶಂಕರ್, ಸೀತಾರಾಂ ರೆಡ್ಡಿ, ಗಾ.ನಾ ಲಿಂಗರಾಜು, ನಂದಿ ನಾಗರಾಜ್ ಭಾಗವಹಿಸಿದ್ದರು.