ಬಿಜೆಪಿಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ : ಸಿದ್ದರಾಮಯ್ಯ

KannadaprabhaNewsNetwork |  
Published : May 03, 2025, 12:17 AM ISTUpdated : May 03, 2025, 12:03 PM IST
2ಕೆಎಂಎನ್‌ಡಿ-1ಮಂಡ್ಯ ತಾಲೂಕಿನ ತೂಬಿನಕೆರೆ ಹೆಲಿಪ್ಯಾಡ್‌ಗೆ ಬಂದಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಎನ್‌.ಚಲುವರಾಯಸ್ವಾಮಿ, ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಇತರರೊಂದಿಗೆ ಆಗಮಿಸುತ್ತಿರುವುದು. | Kannada Prabha

ಸಾರಾಂಶ

ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ, ಬದ್ಧತೆಯೂ ಇಲ್ಲ. ಇತಿಹಾಸವನ್ನು ನೋಡುತ್ತಾ ಬನ್ನಿ ನೂರು ವರ್ಷಗಳಿಂದಲೂ ವಿರೋಧ ಮಾಡುತ್ತಾ ಬಂದಿದ್ದಾರೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ  

 ಮಂಡ್ಯ : ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ, ಬದ್ಧತೆಯೂ ಇಲ್ಲ. ಇತಿಹಾಸವನ್ನು ನೋಡುತ್ತಾ ಬನ್ನಿ ನೂರು ವರ್ಷಗಳಿಂದಲೂ ವಿರೋಧ ಮಾಡುತ್ತಾ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಶ್ರೀರಂಗಪಟ್ಟಣ ತಾಲೂಕಿನ ಅಲ್ಲಾಪಟ್ಟಣ ಗ್ರಾಮದಲ್ಲಿ ಮನೆ ದೇವರಾದ ಶ್ರೀ ಅನ್ನದಾನೇಶ್ವರ (ಶ್ರೀ ಬೀರೇಶ್ವರ) ದೇವಾಲಯದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ತೆರಳುವಾಗ ತೂಬಿನಕೆರೆ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಮಿಲ್ಲರ್ ಕಮಿಷನ್ ರಚಿಸಿದಾಗಿನಿಂದಲೂ ಇವತ್ತಿನವರೆಗೂ ವಿರೋಧ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್‌ಗೆ ನೂರು ವರ್ಷ ತುಂಬಿದ, ಅಂದಿನಿಂದಲೂ ಅವರು ಮೀಸಲಾತಿ ಒಪ್ಪಿಲ್ಲ ಎಂಬುದನ್ನು ಅರಿಯಬೇಕು ಎಂದರು.

ಜನಗಣತಿಯೊಂದಿಗೆ ಜಾತಿ ಗಣತಿ ಮಾಡುವುದಾಗಿ ಹೇಳಲಾಗಿದೆ. ಆದರೆ, ಯಾವಾಗ ಗಣತಿ ಮಾಡುತ್ತೇವೆ ಎಂಬುದನ್ನು ಹೇಳಿಲ್ಲ, 3 ತಿಂಗಳಲ್ಲಿ ಅಥವಾ 4 ತಿಂಗಳಲ್ಲಿ ಮಾಡುತ್ತಾರಾ ಎಂಬುದನ್ನು ಹೇಳಬೇಕು. ದೇಶದಲ್ಲಿ ಜಾತಿ ಗಣತಿ ನಡೆಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಾ ಬಂದಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಪತ್ರ ಬರೆದಿದ್ದರು. ಇದೀಗ ಜಾತಿ ಗಣತಿ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಆದರೆ, ಯಾವಾಗ ಗಣತಿ ನಡೆಸುತ್ತೇವೆ ಎಂಬುದನ್ನು ತಿಳಿಸಿಲ್ಲ. ಆದಷ್ಟು ಶೀಘ್ರ ಗಣತಿಯ ಸಮಯ ನಿಗದಿ ಮಾಡಲು ಮುಂದಾಗಬೇಕು ಎಂದರು.

ಮೀಸಲಾತಿ ಪ್ರಮಾಣ ಶೇ.50ರಷ್ಟು ಮೀರಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಜನಸಂಖ್ಯೆವಾರು ಮೀಸಲಾತಿ ಕಲ್ಪಿಸಬೇಕಿರುವುದು ಅನಿವಾರ್ಯ. ಹಾಗಾದಾಗ ಮಾತ್ರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮುನ್ನಡೆಯಲು ಸಾಧ್ಯ. ಇದರಿಂದ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು.

ಮನೆ ದೇವರ ದೇಗುಲ ಜೀಣೋದ್ಧಾರ:

ಶ್ರೀರಂಗಪಟ್ಟಣ ತಾಲೂಕಿನ ಅಲ್ಲಾಪಟ್ಟಣ ಗ್ರಾಮದಲ್ಲಿ ಮನೆ ದೇವರಾದ ಶ್ರೀ ಅನ್ನದಾನೇಶ್ವರ (ಶ್ರೀ ಬೀರೇಶ್ವರ) ದೇವಾಲಯದ ಪುನರ್ ಪ್ರತಿಷ್ಠಾಪನಾ ಕಾರ್ಯವನ್ನು ಸಿದ್ದರಾಮಯ್ಯ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ನಾವೆಲ್ಲ ಸೇರಿ ಅಲ್ಲಾಪಟ್ಟಣದಲ್ಲಿ ಅನ್ನದಾನೇಶ್ವರ ದೇಗುಲ ಜೀರ್ಣೋದ್ಧಾರ ಮಾಡಿದ್ದೇವೆ. ಅನ್ನದಾನೇಶ್ವರ ನಮ್ಮ ಮನೆಯ ಮೂಲ ದೇವರು. ಇಲ್ಲಿಂದ ಸಿದ್ದರಾಮೇಶ್ವರನ ಹೆಸರಲ್ಲಿ ತಾಯೂರಿನಲ್ಲಿ ನೆಲೆಸಿರುವ ಪ್ರತೀತಿ ಇದೆ. ಹಿಂದೆಲ್ಲ ತಾಯೂರಿನಲ್ಲಿ ಜಾತ್ರೆ ಮಾಡುತ್ತಿದ್ದೆವು. ಅಲ್ಲಿ ನಮ್ಮೂರಿನವರಿಗೂ ತಾಯೂರಿನವರಿಗೂ ಗಲಾಟೆ ಆಗಿ, ಅಲ್ಲಿಂದ ತಾಯೂರು ಬಿಟ್ಟು ನಮ್ಮೂರಿನಲ್ಲಿ ಸಿದ್ದರಾಮೇಶ್ವರ ಪೂಜೆ ಮಾಡುತ್ತಿದ್ದೇವೆ ಎಂದರು.

ಜಾನಪದ ಹಾಡು ಹಾಡಿದ ಸಿದ್ದು

‘ಅಲ್ಲಾಪಟ್ಟಣದಿಂದ ಮೆಲ್ಲ ಮೆಲ್ಲನೇ ಬಂದೆ’ ಎಂಬ ಜಾನಪದ ಹಾಡು ಹಾಡಿದ ಸಿಎಂ ಎಲ್ಲರನ್ನು ರಂಜಿಸಿದರು. ಈ ಹಿಂದೆ ನಮ್ಮೂರಲ್ಲಿ ತಾಯೂರು ಜಾತ್ರೆ ಅನ್ನುತ್ತಿದ್ದರು. ಇವಾಗ ಸಿದ್ದರಾಮನಹುಂಡಿ ಜಾತ್ರೆ ಎನ್ನುತ್ತೇವೆ. ಅಲ್ಲಿರುವ ಒಕ್ಕಲಿಗರು, ಕುರುಬರ ಹೆಸರೆಲ್ಲವೂ ಸಿದ್ದ, ರಾಮನ ಹೆಸರಿನಿಂದಲೇ ಆರಂಭವಾಗುತ್ತಿವೆ ಎಂದು ಹೇಳಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ