ರಾಜಶೇಖರಪ್ಪ ಮಾಹಿತಿ । ಸಿದ್ದಗಂಗಾ ಶಾಲೆಯ ಕೆ.ಪಿ.ಯಶಸ್ವಿನಿ ಜಿಲ್ಲೆಗೆ ಪ್ರಥಮ । ಜಿಲ್ಲೆಯ 12 ಶಾಲೆಗಳಿಗೆ ಶೇ.100
ಕನ್ನಡಪ್ರಭ ವಾರ್ತೆ ದಾವಣಗೆರೆ2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಗೆ ಶೇ.66.09 ಫಲಿತಾಂಶದೊಂದಿಗೆ ರಾಜ್ಯದಲ್ಲಿ 21ನೇ ಸ್ಥಾನ ಗಳಿಸಿದೆ ಎಂದು ಪ್ರಭಾರ ಡಿಡಿಪಿಐ ಜಿ.ಎಸ್.ರಾಜಶೇಖರಪ್ಪ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 19,964 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು, ಈ ಪೈಕಿ 13,195 ವಿದ್ಯಾರ್ಥಿಗಳು ಉತ್ತೀರ್ಣರಾಗಿ, 6,769 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.ದಾವಣಗೆರೆ ದಕ್ಷಿಣ ಶೇ.70.01 ಪಡೆದು ಪ್ರಥಮ ಸ್ಥಾನ, ಅನುಕ್ರಮವಾಗಿ ಚನ್ನಗಿರಿ ಶೇ.68.27, ಹೊನ್ನಾಳಿ ಶೇ.68.26, ಜಗಳೂರು ಶೇ. 64.67, ದಾವಣಗೆರೆ ಉತ್ತರ ಶೇ.61.69 ಹಾಗೂ ಹರಿಹರ ಶೇ. 60.78 ಗಳಿಸಿವೆ.
ಒಟ್ಟು ನಗರ ಭಾಗದ 5,271 (ಶೇ.65.15) ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಪ್ರದೇಶದ 7,925 (ಶೇ. 66.71) ಉತ್ತೀರ್ಣರಾಗಿದ್ದಾರೆ.ಶೇ. ನೂರು ಫಲಿತಾಂಶ ಪಡೆದ 12 ಶಾಲೆಗಳು:
ಜಿಲ್ಲೆಯಲ್ಲಿ ಒಟ್ಟು 12 ಶಾಲೆಗಳು ಶೇ.100 ಫಲಿತಾಂಶ ಪಡೆದಿದ್ದು, ಅದರಲ್ಲಿ ಸರ್ಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯಡಿಯ ಶಾಲೆಗಳು 5 ಹಾಗೂ ಅನುದಾನ ರಹಿತ 7 ಶಾಲೆಗಳು ಶೇ.100 ಫಲಿತಾಂಶ ಪಡೆದಿವೆ.ಮಾತೃಭಾಷೆಯಲ್ಲಿ 125ಕ್ಕೆ 125 ಅಂಕ:
ಮಾತೃಭಾಷೆ ಕನ್ನಡದಲ್ಲಿ 18 ವಿದ್ಯಾರ್ಥಿಗಳು 125ಕ್ಕೆ 125 ಅಂಕ ಪಡೆದಿದ್ದಾರೆ. ಅದರಂತೆ ಉರ್ದುವಿನಲ್ಲಿ 13, ಸಂಸ್ಕೃತದಲ್ಲಿ 5 ವಿದ್ಯಾರ್ಥಿಗಳು 125 ಅಂಕ ಗಳಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.ಶೂನ್ಯ ಫಲಿತಾಂಶ ಪಡೆದ ಶಾಲೆಗಳು:
ದಾವಣಗೆರೆ ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಹೈಸ್ಕೂಲ್, ಹೋಯ್ಸಳ ರೆಸಿಡೆನ್ಸಿಯಲ್ ಶಾಲೆ ಹಾಗೂ ಶ್ರೀಮತಿ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಫ್ರೌಢಶಾಲೆ ಶೂನ್ಯ ಫಲಿತಾಂಶ ಪಡೆದಿದ್ದು, ಕಾರಣ ಕೇಳಿ ಡಿಡಿಪಿಐ ನೋಟಿಸ್ ನೀಡುವುದಾಗಿ ತಿಳಿಸಿದ್ದಾರೆ.