ಕನ್ನಡಪ್ರಭ ವಾರ್ತೆ ಚಾಮರಾಜನಗರಜಿಲ್ಲಾಡಳಿತ ಭವನಕ್ಕೆ ಬಾಂಬಿಟ್ಟಿರುವುದಾಗಿ ಇ-ಮೇಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಡಳಿತ ಭವನದ ಎಲ್ಲ ಕಚೇರಿಗಳ ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಹೊರಗೆ ಕಳುಹಿಸಿ ಪೊಲೀಸರು ತೀವ್ರ ತಪಾಸಣೆ ನಡೆಸಿದರು. ಜಿಲ್ಲಾಡಳಿತ ಭವನವನ್ನು ಸ್ಫೋಟಿಸುವುದಾಗಿ ಇ-ಮೇಲ್ ಸಂದೇಶ ಬೆಳಗಿನ ಜಾವ 2.40ರಲ್ಲಿ ಬಂದಿದೆ. ತಮಿಳುನಾಡಿನ ಬಾಂಬ್ ಬ್ಲಾಸ್ಟ್ ಪ್ರಕರಣಗಳನ್ನು ಉಲ್ಲೇಖಿಸಿ ಅಜಿತ್ ಜಕ್ಕುಮೊಳ ಎಂಬ ಹೆಸರಿನಲ್ಲಿ ಮೇಲ್ ರವಾನೆ ಮಾಡಲಾಗಿದ್ದು ಡಿಎಂಕೆ ನಾಯಕರ ಹೆಸರು ಉಲ್ಲೇಖಿಸಿ ಕೊನೆಯಲ್ಲಿ ಅಲ್ಲಾಹು ಅಕ್ಬರ್ ಎಂದು ಬರೆಯಲಾಗಿದೆ. ಮಧ್ಯಾಹ್ನ 3 ಗಂಟೆ ವೇಳೆಗೆ ಪೈಪ್‌ಗಳಲ್ಲಿ ಅಡಗಿಸಿಟ್ಟಿರುವ ಬಾಂಬ್ ಗಳು ಸ್ಫೋಟಿಸುವುದಾಗಿ ಮೇಲ್ ರವಾನೆ ಮಾಡಿದ್ದಾನೆ.
ಸಂದೇಶ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡರು. ಕಚೇರಿಯಲ್ಲಿದ್ದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಹೊರಕ್ಕೆ ಕಳುಹಿಸಿ, ಜಿಲ್ಲಾಡಳಿತ ಭವನ ಆವರಣದೊಳಕ್ಕೆ ಸಾರ್ವಜನಿಕರ ಭೇಟಿ ನಿರ್ಬಂಧಿಸಲಾಯಿತು. ಬಾಂಬ್ ಪತ್ತೆ ದಳ ಶೋಧ: ಬಾಂಬ್ ಪತ್ತೆ ದಳ ಮತ್ತು ಶ್ವಾನದಳವು ಜಿಲ್ಲಾಡಳಿತ ಭವನದ ಮೂಲೆ ಮೂಲೆಯಲ್ಲು ಜಾಲಾಡುವ ಮೂಲಕ ಶೋಧ ಕಾರ್ಯ ನಡೆಸಲಾಯಿತು. ನೌಕರರನ್ನು ಹೊರಗೆ ಕಳುಹಿಸಿದ ಜಿಲ್ಲಾಡಳಿತ:ಬಾಂಬ್ ಬೆದರಿಕೆ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿ ಒಳಭಾಗದಲ್ಲಿ ಪೊಲೀಸರಿಂದ ಮೂರು ಮಹಡಿಯ ಪ್ರತಿಯೊಂದು ಕಚೇರಿಯಲ್ಲೂ ಕೂಡ ಶೋಧ ಕಾರ್ಯ ನಡೆಸಲಾಯಿತು. ಕಚೇರಿ ಸಿಬ್ಬಂದಿಗಳಿಗೆ ರಜೆ ಕೊಟ್ಟು ಕಳುಹಿಸಲಾಯಿತು. ಶೋಧ ಸಂದರ್ಭದಲ್ಲಿ ಯಾವುದೇ ವಸ್ತುಗಳು ಕಂಡು ಬಾರದ ಹಿನ್ನೆಲೆಯಲ್ಲಿ ನಿಟ್ಟುಸಿರು ಬಿಡಲಾಯಿತು.ಚಾಮರಾಜನಗರ ಜಿಲ್ಲಾಡಳಿತ ಭವನಕ್ಕೆ ಬಾಂಬ್ ಹಾಕುವುದಾಗಿ ಶುಕ್ರವಾರ ಬೆಳಗ್ಗೆ ನಮ್ಮ ಅಧಿಕೃತ ಇ-ಮೇಲ್ ಐಡಿಗೆ ಮೇಲ್ ಬಂದಿದೆ, ಆದ್ದರಿಂದ ಭವನದ ಎಲ್ಲ ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಕಟ್ಟಡದ ಹೊರಗೆ ಕಳುಹಿಸಲಾಗಿದೆ. ಬಾಂಬ್ ನಿಷ್ಕ್ರಿಯ ತಂಡ ಸ್ಥಳಕ್ಕೆ ಕರೆಸಿ ಪರಿಶೀಲನೆ ಮಾಡಿಸಲಾಗಿದೆ. ಸಾರ್ವಜನಿಕರು, ಸಿಬ್ಬಂದಿ ಯಾವುದೇ ಆತಂಕ ಪಡುವ ಅಗತ್ಯವಿಲ್ಲ, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಸಿ.ಟಿ.ಶಿಲ್ಪಾನಾಗ್, ಜಿಲ್ಲಾಧಿಕಾರಿ ಚಾಮರಾಜನಗರಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಮೇಲ್ ಬಂದಿದ್ದು, ಮೂರು ಗಂಟೆಯೊಳಗೆ ಖಾಲಿ ಮಾಡಬೇಕು, ಮದ್ಯಾಹ್ನ 3 ಗಂಟೆಯೊಳಗೆ ಬಾಂಬ್ ಬ್ಲಾಸ್ಟ್ ಮಾಡ್ತೀವಿ ಅಂತ ಮೇಲ್‌ನಲ್ಲಿ ತಿಳಿಸಲಾಗಿದೆ. ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡು, ಎಲ್ಲಾ ನೌಕರರನ್ನು ಸಾರ್ವಜನಿಕರನ್ನು ಡಿಸಿ ಕಚೇರಿಯಿಂದ ಹೊರ ಕಳಿಸಲಾಗಿತ್ತು. ಬಾಂಬ್ ನಿಷ್ಕ್ರಿಯ ದಳ, ಶ್ವಾನದಿಂದ ಶೋಧ ಕಾರ್ಯ ನಡೆಸಲಾಗಿದೆ. ಡಿಸಿ ಕಚೇರಿಯಷ್ಟೇ ಅಲ್ಲ ಸುತ್ತಲಿನ ಪ್ರದೇಶದ ಕಟ್ಟಡಗಳಲ್ಲೂ ತಪಾಸಣೆ ನಡೆಸಲಾಯಿತು. ಯಾವುದೇ ವಸ್ತು ಕಂಡುಬಂದಿಲ್ಲ, ಯಾವುದೇ ಆತಂಕ ಬೇಡ.
ಡಾ.ಬಿ.ಟಿ.ಕವಿತಾ, ಎಸ್ಪಿ, ಚಾಮರಾಜನಗರ