ಕಾಂಗ್ರೆಸ್‌ ಬೆಂಬಲಿಸಿದರೆ ಮಾತ್ರ ಬಿಜೆಪಿ ಅಸ್ತಿತ್ವ: ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ

KannadaprabhaNewsNetwork | Published : Apr 4, 2024 1:03 AM

ಸಾರಾಂಶ

ಬಿಜೆಪಿಯ ಕಾರ್ಯಕರ್ತರು ಎಚ್ಚೆತ್ತುಕೊಂಡು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೆ ನಿಮ್ಮ ಅಸ್ಥಿತ್ವ ಉಳಿಯುತ್ತದೆ ಎಂದು ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ ಹೇಳಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಜೆಡಿಎಸ್‌ಗೆ ಅಸ್ತಿತ್ವ ಇಲ್ಲದ್ದರಿಂದ ಹೊಂದಾಣಿಕೆ

ಕನ್ನಡಪ್ರಭ ವಾರ್ತೆ ಹಾಸನ

ಜೆಡಿಎಸ್‌ನವರಿಗೆ ಅಸ್ಥಿತ್ವ ಇಲ್ಲ ಎಂಬ ಕಾರಣಕ್ಕೆ ಬಿಜೆಪಿ ಜತೆ ಹೊಂದಾಣಿಕೆಗೆ ಮುಂದಾಗಿದೆ. ಆದ್ದರಿಂದ ಬಿಜೆಪಿಯ ಕಾರ್ಯಕರ್ತರು ಎಚ್ಚೆತ್ತುಕೊಂಡು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೆ ನಿಮ್ಮ ಅಸ್ಥಿತ್ವ ಉಳಿಯುತ್ತದೆ ಎಂದು ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಈಗ ನಡೆಯುತ್ತಿರುವ ಎಂಪಿ ಚುನಾವಣೆಯು ಕಾಂಗ್ರೆಸ್ ಪಕ್ಷದ ಒಂದು ಪ್ರತಿಷ್ಠೆಯ ಚುನಾವಣೆ ಆಗಿದೆ. ಜೆಡಿಎಸ್ ನ ದಬ್ಬಾಳಿಕೆಯ ಮತ್ತು ಅನ್ಯಾಯದ ವಿರುದ್ಧ ಜಯಭೇರಿ ಬಾರಿಸಲಿದೆ. ಇದಕ್ಕೆ ಪೂರಕವಾಗಿ ನಮ್ಮ ಹಾಸನ ಜಿಲ್ಲೆಯ ಪಕ್ಷದ ಎಲ್ಲಾ ಮುಖಂಡರು ಪಣತೊಟ್ಟು ಹೋರಾಟವನ್ನು ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಿರುವುದರಿಂದ ರಾಜ್ಯದ ಮುಂಚೂಣಿ ನಾಯಕರು ಪ್ರಚಾರಕ್ಕೆ ಬರುವುದರಿಂದ ಬಾರಿ ಅಂತರದಲ್ಲಿ ಗೆಲುವು ನಮ್ಮದಾಗಲಿದೆ. ಈ ಹಿಂದೆ ಕೋವಿಡ್ ವೇಳೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ ನಾಯಕರಿಂದ ಪ್ರಜ್ವಲ್ ರೇವಣ್ಣ ಹಿಡಿದು ಯಾರೂ ಕೂಡ ಬಡವರ ಬಗ್ಗೆ ಹಾಗೂ ನೊಂದವರ ಬಗ್ಗೆ ಯಾವ ಸಹಾಯ ನೀಡಲಿಲ್ಲ. ಹೆಚ್ಚಿನ ಮಳೆಯಿಂದ ಹಲವಾರು ಮನೆಗಳು ಬಿದ್ದು ಹೋದ ಸಂದರ್ಭದಲ್ಲಿ ಸಂಸದರು ಕಷ್ಟಕ್ಕೆ ಸ್ಪಂದಿಸಲಿಲ್ಲ. ಈಗ ದಿಢೀರನೆ ಚುನಾವಣೆಗಾಗಿ ಬಂದು ಹಣ ಮತ್ತು ಆಮಿಷದಿಂದ ಮತದಾರರನ್ನು ಕೊಂಡುಕೊಳ್ಳುವ ಭ್ರಮೆಯಲ್ಲಿದ್ದಾರೆ’ ಎಂದು ಲೇವಡಿ ಮಾಡಿದರು.

‘ಜೆಡಿಎಸ್ ಪಕ್ಷವೇ ಅಲ್ಲ. ಅದೊಂದು ಪ್ರೈವೆಟ್ ಲಿಮಿಟೆಡ್ ಕಂಪನಿಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ದಾರಿ ತಪ್ಪಿಸಿ ನನ್ನನ್ನೂ ಸಹ ಸೋಲಿಸಿದರು. ಅದೇ ರೀತಿ ಬಿಜೆಪಿ ಅವರಿಗೂ ಮೋಸ ಮಾಡಿದರು. ಇವರನ್ನು ಯಾರು ನಂಬಬಾರದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪಕ್ಷವನ್ನು ಹಾಳು ಮಾಡಿದರು’ ಎಂದು ಆರೋಪಿಸಿದರು.

ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ. ಮಂಜುನಾಥ್ ಮಾತನಾಡಿ, ‘ಪ್ರಪಂಚದಲ್ಲಿ ಸುಮಾರು ೨೦೦೦ ಜನ ಹಣ ಹೂಡಿದ್ದು, ಅದರಲ್ಲಿ ಭಾರತೀಯರು ೯೮೫ ಜನರಿದ್ದಾರೆ. ಇದು ಇಡೀ ದೇಶದ ವ್ಯವಸ್ಥೆಯನ್ನೇ ಹಾಳು ಮಾಡಿದೆ ಎಂದು ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಇಡೀ ದೇಶದಲ್ಲಿ ಸುಳ್ಳು ಪ್ರಚಾರ ಮಾಡುವ ಮೂಲಕ ಇಡೀ ದೇಶದ ಮತದಾರರನ್ನು ಸೆಳೆಯಲು ಯಶಸ್ವಿಯಾದರು, ಕರ್ನಾಟಕಕ್ಕೆ ಪ್ರವೇಶಿಸಿದ ಅವರ ಅನುಯಾಯಿಗಳು ನಂತರ ಈ ಸುಳ್ಳು ಪ್ರಚಾರಕ್ಕೆ ತೊಡಗಿಸಿಕೊಂಡವರಲ್ಲಿ ಅತೀ ಮುಖ್ಯರು ಅಂದಿನ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಚಕ್ರವರ್ತಿ ಸೂಲಿಬೆಲೆ ಹಾಗೂ ಇತರರು, ಇವರು ರಾಜ್ಯಾದ್ಯಂತ ತಿರುಗಿ ಪ್ರಚಾರ ಕೈಗೊಂಡರು’ ಎಂದು ದೂರಿದರು.

ಕಾಂಗ್ರೆಸ್ ಮುಖಂಡರಾದ ಜಾರ್ಜ್, ನಾರಾಯಣಗೌಡ, ರವಿಕುಮಾರ್, ಪುಟ್ಟಸ್ವಾಮಿ, ಕೃಷ್ಣಕುಮಾರ್ ಇದ್ದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ.

Share this article