ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಎಲ್ಲೆಡೆ ಸಂಚಾರ ಮಾಡುತ್ತಾ ಎಲ್ಲದರಿಂದ ಕಲಿಯುತ್ತಾ ಸರ್ವ ಜ್ಞಾನಿಯಾದ ಮಹಾನ್ ಕವಿ ಸರ್ವಜ್ಞರು ಸಾಮಾಜಿಕ ನ್ಯಾಯವನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸಿದ್ದಾರೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ತಿಳಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಹಾಗೂ ಜಿಲ್ಲಾ ಕುಂಬಾರರ ಸಂಘ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಒಂದೇ ಮಾತಿನಲ್ಲಿ ಹೇಳುವುದಾದರೆ ಎಲ್ಲವನ್ನು ತಿಳಿದ ಮಹಾನ್ ಕವಿ ಸರ್ವಜ್ಞ. ಸಮಾಜದಲ್ಲಿ ಮೌಢ್ಯತೆ ತೊಲಗಬೇಕು. ಸಮ ಸಮಾಜ ನಿರ್ಮಾಣ ಆಗಬೇಕು ಎಂದು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದ ಅವರು, ಎಲ್ಲರೂ ಉತ್ತಮ ಜೀವನದ ಮೂಲಕ ಶ್ರೇಷ್ಠತೆ ಕಾಣಬೇಕೆಂದು ಹೇಳಿದ್ದಾರೆ. ಎಲ್ಲ ಕಾಲಘಟ್ಟದಲ್ಲಿ ಹಲವಾರು ಮಹನೀಯರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ್ದಾರೆ. ಸರ್ವಜ್ಞರ ತ್ರಿಪದಿಗಳಲ್ಲಿನ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡೋಣ ಎಂದರು.

ಕನ್ನಡ ಉಪನ್ಯಾಸಕ ಡಾ. ಗಣೇಶ ಆರ್. ಕೆಂಚನಾಲ್ ಉಪನ್ಯಾಸ ನೀಡಿ, ಸರ್ವಜ್ಞ ಎಂದರೆ ಎಲ್ಲರೊಳು ಒಂದೊಂದು ವಿಷಯ ತಿಳಿದು, ತಿಳಿಯನ್ನು ಒಳಕ್ಕೆ ಹಾಕಿಕೊಂಡು ತಿಳುವಳಿಕೆ ಹೊಂದಿದವನೇ ಸರ್ವಜ್ಞ. ಜೀವನದ ಸಾರವನ್ನು ಗುರು ಹಿರಿಯರು, ತಂದೆ ತಾಯಿ, ಋಷಿ ಮುನಿಗಳು, ಅನುಭವಿಗಳ ಮೂಲಕ ತಿಳಿದವನೇ ಸರ್ವಜ್ಞ ಎಂಬುದಾಗಿದೆ. ಲೋಕ ಸಂಚಾರದ ಅನುಭವಕ್ಕಿಂತ ದೊಡ್ಡ ಅನುಭವ ಮತ್ತೊಂದಿಲ್ಲ. ಅದರಂತೆ ಸರ್ವಜ್ಞರು ಲೋಕ ಸಂಚಾರ ಮಾಡುತ್ತಾ ಸಮಾಜದಲ್ಲಿ ಜಾಗೃತಿ ಮೂಡಿಸಿದ ಮಹಾಜ್ಞಾನಿ ಎಂದರು.

ಕನ್ನಡ ಭಾಷೆಗೆ ಅತ್ಯಂತ ದೊಡ್ಡ ಇತಿಹಾಸ ಇದ್ದು, ಅಪಾರ ಶಬ್ದ ಸಂಪತ್ತು ಇದೆ. ಸರ್ವಜ್ಞರು ಸಾಮಾನ್ಯರಿಗೆ ಅರ್ಥವಾಗುವಂತಹ ಕನ್ನಡ ಭಾಷೆಯಲ್ಲಿ ಸಮಾಜದಲ್ಲಿ ಮೌಢ್ಯ, ಜಾತಿ, ವರ್ಣ ಪದ್ದತಿಯನ್ನು ವಿರೋಧಿಸುವುದು ಸೇರಿದಂತೆ ಆಹಾರ, ಆರೋಗ್ಯ, ಹೆಣ್ಣು, ಗುರು-ಶಿಷ್ಯರ ಬಾಂಧವ್ಯ, ಭಕ್ತಿ, ವಿಜ್ಞಾನ ಹೀಗೆ ಎಲ್ಲ ವಿಷಯಗಳ ಬಗ್ಗೆ ತ್ರಿಪದಿಗಳನ್ನು ರಚಿಸಿದ್ದಾರೆ ಎಂದು ಹೇಳಿದರು.


ವಚನಗಳ ಮುಂದುವರೆದ ಭಾಗವೇ ಸರ್ವಜ್ಞನ ತ್ರಿಪದಿಗಳಾಗಿದ್ದು, ಎಲ್ಲ ಬಿಟ್ಟು ಲೋಕ ಕಲ್ಯಾಣಕ್ಕಾಗಿ, ಅನುಭವಕ್ಕಾಗಿ ಹೊರಟವರು ವಿಶ್ವದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ, ಬಸವ, ಕನಕದಾಸ, ಪುರಂದರದಾಸರು ತಮ್ಮ ಸಾಹಿತ್ಯದ ಮೂಲಕ ಎಲ್ಲರನ್ನೂ ತಲುಪಿದ್ದು ಸಾಹಿತ್ಯದ ದೊಡ್ಡ ಶಕ್ತಿ ಒಳಗಿನ ತಿಳಿವು ಮತ್ತು ತಾಳ್ಮೆಯಾಗಿದೆ. ಮನುಷ್ಯರನ್ನು ಮನುಷ್ಯರನ್ನಾಗಿ ಕಾಣಬೇಕು. ಅಹಂಕಾರ ತೊರೆದು, ದಾನ, ಜ್ಞಾನದಲ್ಲಿ ತೇಲಬೇಕು. ಸತ್ಯ, ನೀತಿ, ಪ್ರಾಮಾಣಿಕತೆ ಹೊಂದಿ ದುಡಿದು ತಿನ್ನಬೇಕೆಂದು ಸರ್ವಜ್ಞರು ಸಾರಿದ್ದಾರೆ.

ಸರ್ವಜ್ಞರು ಸುಮಾರು 7000 ಸಾವಿರ ತ್ರಿಪದಿ ರಚಿಸಿದ್ದಾರೆಂದು ತಿಳಿದು ಬಂದಿದ್ದು, 1000 ತ್ರಿಪದಿಗಳು ದಾಖಲೆ ರೂಪದಲ್ಲಿ ಲಭ್ಯವಿದೆ ಎಂದು ತಿಳಿಸಿದರು.

ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಎಚ್‌. ಮಲ್ಲಿಕಾರ್ಜುನ ಮಾತನಾಡಿ, ಸರ್ವಜ್ಞರ ಮೂಲ ಹೆಸರು ಪುಷ್ಪದತ್ತ. ಉತ್ತಂಗಿ ಚೆನ್ನಪ್ಪವರು ಸರ್ವಜ್ಞರ ತ್ರಿಪದಿಗಳನ್ನು ಸಂಗ್ರಹಿಸಿದ್ದಾರೆ. ಕುಂಬಾರ ಸಮಾಜ ಸಾಮಾಜಿಕವಾಗಿ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದ್ದು, 2ಎ ವರ್ಗಕ್ಕೆ ಸೇರ್ಪಡೆ ಮಾಡಬೇಕು. ಹಾಗೂ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ಸಮಿತಿಗೆ ಸಮಾಜದವರನ್ನು ನೇಮಕ ಮಾಡಬೇಕು. ಕುಂಬಾರರ ಕೌಶಲ್ಯವನ್ನು ಉಳಿಸಿ ಉತ್ತೇಜಿಸಲು ಹೋಟೆಲ್, ಚಹ ಅಂಗಡಿಗಳಲ್ಲಿ ಮಣ್ಣಿನ ಲೋಟಗಳನ್ನು ಬಳಸಲು ಹಾಗೂ ನೀರು ಕುಡಿಯಲು ಮಣ್ಣಿನ ಬಾಟಲಿಗಳನ್ನು ಬಳಸುವಂತೆ ಸರ್ಕಾರ ಆದೇಶಿಸಬೇಕು ಎಂದು ಮನವಿ ಮಾಡಿದ ಅವರು, ಮಾಸೂರಿನಲ್ಲಿರುವ ಸಮಾಧಿಯನ್ನು ಸ್ಮಾರಕ ಮಾಡಬೇಕು. ನಗರದಲ್ಲಿನ ಸರ್ವಜ್ಞ ವೃತ್ತದಲ್ಲಿ ಸರ್ವಜ್ಞರ ಪ್ರತಿಮೆಯನ್ನು ಸ್ಥಾಪಿಸಬೇಕು. ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ತಾಲೂಕು ಕುಂಬಾರ ಸಂಘದ ಅಧ್ಯಕ್ಷ ಎಸ್. ಮಣಿ ಮಾತನಾಡಿ, ಸರ್ವಜ್ಞರ ಬಗ್ಗೆ ತಿಳಿಯುವುದು ಸಮುದ್ರದಷ್ಟಿದೆ. ತಮಿಳುನಾಡು ಭಾಗದಲ್ಲಿ ಸರ್ವಜ್ಞರ ಪ್ರತಿಮೆಯನ್ನು ಸ್ಥಾಪಿಸಿದ್ದು, ಅಲ್ಲಿಯೂ ಹೆಸರುವಾಸಿಯಾಗಿದ್ದಾರೆ. ಹಾಗೆಯೇ ಅದಕ್ಕೆ ಪೂರಕವಾಗಿ ನಮ್ಮ ರಾಜ್ಯದಲ್ಲಿ ತಮಿಳುನಾಡಿನ ಕವಿ ತಿರುವಳ್ಳುವರ್‌ರವರನ್ನು ಸ್ಮರಿಸಲಾಗುತ್ತದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್ ಸಮಾಜದ ಮುಖಂಡರು ಹಾಜರಿದ್ದರು.