ಕನ್ನಡಪ್ರಭ ವಾರ್ತೆ ಬೆಂಗಳೂರು
ದುರಾಡಳಿತದ ಈ ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರ ಪಾಲಿಗೆ ಸತ್ತಿದೆ ಎಂದು ಆರೋಪಿಸಿರುವ ಪ್ರತಿಪಕ್ಷ ಬಿಜೆಪಿ ನಾಲ್ಕು ದಿನಗಳ ಕಾಲ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡಿದೆ.ಬಿಜೆಪಿ ರೈತ ಮೋರ್ಚಾ ವತಿಯಿಂದ ನ.27, 28ರಂದು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ, ಧರಣಿ, ರ್‍ಯಾಲಿ ಆಯೋಜಿಸಲಾಗುವುದು. ಡಿ.1 ಮತ್ತು 2ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಈ ವಿಷಯ ತಿಳಿಸಿದ್ದಾರೆ.ರಾಜ್ಯ ಸರ್ಕಾರದ ರೈತ ವಿರೋಧಿ ನಿಲುವಿನ ವಿರುದ್ಧ ನಾನೂ ಸಹ ನ.26ರಂದು ಹೊಸಪೇಟೆ ಮತ್ತು ನ.27ರಂದು ಕಲಬುರಗಿ ಭಾಗಗಳಲ್ಲಿ ನಡೆಯುವ ಹೋರಾಟದಲ್ಲಿ ಪಾಲ್ಗೊಳ್ಳುವೆ. ಈ ಹೋರಾಟಗಳ ಮೂಲಕ ಈ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದರು.
ಮೆಕ್ಕೆಜೋಳ ಖರೀದಿಗೆ ಕೇಂದ್ರ ತೆರೆಯಲು ಮೀನ-ಮೇಷ:ಇಡೀ ರಾಜ್ಯದಲ್ಲಿ ಬೆಳೆಹಾನಿಯಾಗಿದೆ. ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ. ತುಂಗಾ ಭದ್ರಾ ಡ್ಯಾಮ್‌ನ ಗೇಟ್ ದುರಸ್ತಿ ಆಮೆ ಗತಿಯಲ್ಲಿ ಸಾಗಿದೆ. ಡ್ಯಾಮ್‌ನಲ್ಲಿ ನೀರು ಸಂಗ್ರಹಿಸದ ಪರಿಣಾಮ ನೀರು ನೆರೆಯ ಆಂಧ್ರಪ್ರದೇಶದ ಪಾಲಾಗಿದೆ. ಸರ್ಕಾರದ ನಿರ್ಲಕ್ಷ್ಯದಿಂದ ರೈತರು ಎರಡನೇ ಬೆಳೆಗೆ ನೀರು ಪಡೆಯುವ ಅವಕಾಶದಿಂದ ವಂಚಿತರಾಗಿದ್ದಾರೆ. ಅತಿವೃಷ್ಟಿ ಸಂತ್ರಸ್ತರಿಗೆ ಇನ್ನೂ ಪರಿಹಾರ ಘೋಷಿಸಿಲ್ಲ. ಮೆಕ್ಕೆ ಜೋಳ ಖರೀದಿಗೆ ಕೇಂದ್ರ ತೆರೆಯಲು ಮೀನಾ ಮೇಷಾ ಏಣಿಸುತ್ತಿದ್ದಾರೆ. ರೈತರಿಗೆ ಹಾಲಿನ ಪ್ರೋತ್ಸಾಹ ನೀಡಿಲ್ಲ. ಈ ಎಲ್ಲಾ ವಿಷಯಗಳನ್ನು ಮುಂದಿಟ್ಟುಕೊಂಟು ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.ಸಿಎಂ ಕುರ್ಚಿ 4 ಕಾಲು ನಾಲ್ವರ ಪಾಲು:ಕಳೆದ ಆರು ತಿಂಗಳಿಂದ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಕಿತ್ತಾಟ ನಡೆಯುತ್ತಿದೆ. ಕುರ್ಚಿ ಮೇಲೆ ಕೂರಲು ಹೊಡೆದಾಟ-ಬಡಿದಾಟ ನಡೆಯುತ್ತಿದೆ. ಸಿಎಂ ಕುರ್ಚಿಯ ನಾಲ್ಕು ಕಾಲುಗಳ ಪೈಕಿ ಒಂದನ್ನು ಸಿದ್ದರಾಮಯ್ಯ, ಎರಡನೆಯದು ಡಿ.ಕೆ.ಶಿವಕುಮಾರ್, ಮೂರನೆಯದು ಸತೀಶ್ ಜಾರಕಿಹೊಳಿ, ನಾಲ್ಕನೆಯದು ಪರಮೇಶ್ವರ್ ಕಿತ್ತುಕೊಂಡಿದ್ದಾರೆ. ಈ ರಾಜ್ಯದ ಮುಖ್ಯಮಂತ್ರಿ ಯಾರು ಎಂಬುದು ಯಾರಿಗೂ ಗೊತ್ತಿಲ್ಲ ಎಂದು ಅಶೋಕ್ ಕಿಡಿಕಾರಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ನಡಹಳ್ಳಿ ಅವರು ಉಪಸ್ಥಿತರಿದ್ದರು.