ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಬಿಜೆಪಿ ಕಾರ್ಯಕರ್ತರು, ಭತ್ತವನ್ನು ಬಡಿದು, ಚೀಲಕ್ಕೆ ತುಂಬುವ ಮೂಲಕ ಸರ್ಕಾರವು ದಲ್ಲಾಳಿಗಳ ಜತೆ ಶಾಮೀಲಾಗಿರುವುದರಿಂದ ಇನ್ನೂ ಸಹ ಭತ್ತ ಖರೀದಿ ಕೇಂದ್ರಗಳನ್ನು ತೆರೆಯದೆ ರೈತರಿಗೆ ಮೋಸ ಎಸಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ರೈತರು ಅತಿ ಹೆಚ್ಚು ಭತ್ತ ಬೆಳೆದಿದ್ದು, ಪ್ರಸ್ತುತ ಕಟಾವು ಶೇ.೭೫ರಷ್ಟು ಮುಗಿದಿದೆ. ಈಗಾಗಲೇ ಕೇಂದ್ರ ಸರ್ಕಾರ ಭತ್ತಕ್ಕೆ ೨೩೮೬ ರು. ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ, ರಾಜ್ಯ ಸರ್ಕಾರ ಈವರೆಗೂ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯದೆ ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡಲು ಹೊರಟಿರುವುದು ದುರದೃಷ್ಟಕರ. ಈಗಾಗಲೇ ರೈತರು ಭತ್ರವನ್ನು ಸಂಗ್ರಹಿಸಿ ಇಟ್ಟುಕೊಳ್ಳಲಾಗದೆ ಮಧ್ಯವರ್ತಿಗಳಿಗೆ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಅಂದರೆ ೧೮೦೦ - ೨೦೦೦ ಮಾರಾಟ ಮಾಡುತ್ತಿದ್ದಾರೆ. ಇದು ದಲ್ಲಾಳಿಗಳಿಗೆ ಅನುಕೂಲವಾಗುತ್ತಿದೆ ಎಂದು ಆರೋಪಿಸಿದರು.ರಾಜ್ಯ ಕೃಷಿ ಸಚಿವರು ಮಂಡ್ಯ ಜಿಲ್ಲೆಯವರಾಗಿದ್ದರೂ ಕೂಡ ರೈತರಿಗೆ ಅನುಕೂಲ ಮಾಡಿಕೊಡದೆ ಜಾಣ ಮೌನ ವಹಿಸಿರುವುದು ದುರದೃಷ್ಟಕರ. ಹಾಗಾಗಿ ಈ ಕೂಡಲೇ ಖರೀದಿ ಕೇಂದ್ರ ತೆರೆಯಬೇಕು. ಇಲ್ಲವಾದರೆ ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ಮಂಡ್ಯ ಜಿಲ್ಲೆಯಾದ್ಯಂತ ತೀವ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
25994 ಕ್ವಿಂಟಾಲ್ ಭತ್ತ ಖರೀದಿ
ಈವರೆವಿಗೆ ಭತ್ತ ಖರೀದಿಗೆ 857 ರೈತರು ನೋಂದಾಯಿಸಿಕೊಂಡಿದ್ದು, 25994 ಕ್ವಿಂಟಾಲ್ ಭತ್ತ ಖರೀದಿಸಲಾಗಿದೆ. ಭತ್ತದ ದರ ಪ್ರತಿ ಕ್ವಿಂಟಾಲ್‌ಗೆ ಸಾಮಾನ್ಯ 2369 ರು., ಗ್ರೇಡ್-ಎ 2389 ರು. ನಿಗದಿಪಡಿಸಲಾಗಿದೆ.